ತಿರುವನಂತಪುರ: ಕೇರಳದ ಕೋಯಿಕ್ಕೋಡ್‌ನಲ್ಲಿ ಶನಿವಾರ ಶಿಗೆಲ್ಲ ಸೋಂಕಿನಿಂದ ನಾಲ್ಕು ವರ್ಷದ ಮಗು ಮೃತಪಟ್ಟಿದ್ದು, ಜನರಲ್ಲಿ ಆತಂಕ ಮೂಡಿಸಿದೆ.
ಶಿಗೆಲ್ಲ ಸೋಂಕಿನಿಂದಾಗಿ ಕೋಯಿಕ್ಕೋಡ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಮೂವರು ಮಕ್ಕಳು ದಾಖಲಾಗಿದ್ದರು. ಅವರಲ್ಲಿ ಇಬ್ಬರು ಚೇತರಿಸಿಕೊಂಡರೆ, ಒಂದು ಮಗು ಸಾವಿಗೀಡಾಗಿದೆ ಎಂದು ಕೇರಳ ಆರೋಗ್ಯ ಸಚಿವ ಕೆ.ಮುರಳೀಧರನ್ ಹೇಳಿದ್ದಾರೆ.
ಮಾರ್ಚ್‌ನಲ್ಲಿ ರಾಜ್ಯದಲ್ಲಿ 15 ಪ್ರಕರಣಗಳು ವರದಿಯಾಗಿದ್ದವು. ಆದರೆ, ಯಾವುದೇ ಸಾವು ಸಂಭವಿಸಿರಲಿಲ್ಲ.
ಜಗತ್ತಿನಾದ್ಯಂತ ವರ್ಷಕ್ಕೆ 80-165 ಮಿಲಿಯನ್ ಶಿಗೆಲ್ಲ ಸೋಂಕಿನ ಪ್ರಕರಣಗಳು ಪತ್ತೆಯಾಗುತ್ತಿದ್ದು, ವಾರ್ಷಿಕವಾಗಿ ಸುಮಾರು 6 ಲಕ್ಷ ಸಾವು ಸಂಭವಿಸುತ್ತಿದೆ ಎಂದು ಅಂತರರಾಷ್ಟ್ರೀಯ ಲಸಿಕಾ ಸಂಸ್ಥೆಯು ಅಂದಾಜಿಸಿದೆ. 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಈ ಸೋಂಕು ಅತಿ ಹೆಚ್ಚು ಕಾಣಿಸಿಕೊಳ್ಳುತ್ತಿದೆ. ಆಫ್ರಿಕಾ ಮತ್ತು ದಕ್ಷಿಣ ಏಷ್ಯಾದಲ್ಲಿ ಹೆಚ್ಚಾಗಿ ಕಂಡುಬರುತ್ತದೆ.
ಶಿಗೆಲ್ಲ ಸೋಂಕು ಎಂದರೇನು?
ಶಿಗೆಲ್ಲ ಬ್ಯಾಕ್ಟೀರಿಯಾದ ಸೋಂಕಾಗಿದ್ದು, ಜೀರ್ಣಾಂಗ ವ್ಯವಸ್ಥೆಯ ಮೇಲೆ, ಅದರಲ್ಲೂ ಕರುಳಿನ ಮೇಲೆ ಪರಿಣಾಮ ಬೀರುತ್ತದೆ. ಈ ರೋಗವು ಹೆಚ್ಚು ಸಾಂಕ್ರಾಮಿಕವಾಗಿದ್ದು, ಕಲುಷಿತ ಆಹಾರ ಅಥವಾ ಕಲುಷಿತ ನೀರಿನ ಸೇವನೆಯಿಂದ ಹರಡುತ್ತದೆ. ಅತಿಸಾರಕ್ಕೆ ಕಾರಣವಾಗುತ್ತದೆ. ಸೋಂಕಿತ ವ್ಯಕ್ತಿಯೊಂದಿಗೆ ನೇರ ಸಂಪರ್ಕಕ್ಕೆ ಬರುವ ಮೂಲಕವೂ ಹರಡಬಹುದು. ಉದಾಹರಣೆಗೆ, ಸೋಂಕಿತ ಮಗುವಿನ ಡೈಪರ್ ಬದಲಾಯಿಸಿದ ನಂತರ ವ್ಯಕ್ತಿಯು ಕೈ ತೊಳೆಯದಿದ್ದರೆ ಸೋಂಕು ಹರಡುವ ಸಾಧ್ಯತೆ ಇರುತ್ತದೆ. ಸೋಂಕಿತ ವ್ಯಕ್ತಿಯೊಂದಿಗೆ ಲೈಂಗಿಕ ಸಂಪರ್ಕದಿಂದಲೂ ಹರಡುತ್ತದೆ.
ಸೋಂಕಿನ ತೀವ್ರತೆಯಲ್ಲಿಯೂ ವ್ಯತ್ಯಾಸ ಕಂಡುಬರುತ್ತದೆ. ಶಿಗೆಲ್ಲ ಸೋಂಕಿನ ಸೌಮ್ಯ ಲಕ್ಷಣಗಳಿರುವ ವ್ಯಕ್ತಿಗೆ ವೈದ್ಯಕೀಯ ಚಿಕಿತ್ಸೆಯ ಅಗತ್ಯವಿರುವುದಿಲ್ಲ. ಆದರೆ, ತೀವ್ರವಾದ ಅತಿಸಾರ ಮೂರು ದಿನಗಳವರೆಗೆ ಮುಂದುವರಿದರೆ ವೈದ್ಯಕೀಯ ಚಿಕಿತ್ಸೆಯ ಅಗತ್ಯವಿರುತ್ತದೆ.
ಶಿಗೆಲ್ಲ ಸೋಂಕಿನ ಲಕ್ಷಣಗಳು
ಶಿಗೆಲ್ಲ ಸೋಂಕು ತಗುಲಿದ ಬಳಿಕ ಲಕ್ಷಣ ಕಾಣಿಸಿಕೊಳ್ಳಲು ಒಂದರಿಂದ ಎರಡು ದಿನ ತೆಗೆದುಕೊಳ್ಳಬಹುದು. ಮಲದ ಜೊತೆ ರಕ್ತಸ್ರಾವ, ಅತಿಸಾರ, ಹೊಟ್ಟೆ ನೋವು ಅಥವಾ ಸೆಳೆತ, ಜ್ವರ ಮತ್ತು ಶೀತ, ವಾಕರಿಕೆ, ತೂಕ ನಷ್ಟ ಅಥವಾ ನಿರ್ಜಲೀಕರಣ ಇವೇ ಮುಂತಾದ ಲಕ್ಷಣ ಕಾಣಿಸಿಕೊಳ್ಳುತ್ತವೆ.
ಕೆಲವು ಸಂದರ್ಭಗಳಲ್ಲಿ ಯಾವುದೇ ಲಕ್ಷಣಗಳು ಕಾಣಿಸಿಕೊಳ್ಳದಿದ್ದರೂ ಶಿಗೆಲ್ಲ ಸೋಂಕು ಇರಬಹುದು. ಹಾಗಾಗಿ, ಶಿಗೆಲ್ಲ ಸೋಂಕನ್ನು ತಡೆಗಟ್ಟುವುದು ಹೇಗೆ? ಎಂಬ ಪ್ರಶ್ಬೆಗೆ ಉತ್ತರ ಇಲ್ಲಿದೆ.
* ನಿಮ್ಮ ಕೈಗಳನ್ನು ಸೋಪು ಮತ್ತು ನೀರಿನಿಂದ ಆಗಾಗ್ಗೆ ಚೆನ್ನಾಗಿ ತೊಳೆಯಿರಿ. ವಿಶೇಷವಾಗಿ, ಊಟದ ಮೊದಲು ಮತ್ತು ನಂತರ, ಶೌಚಾಲಯ ಬಳಸಿದ ನಂತರ ಮತ್ತು ಡೈಪರ್‌ಗಳನ್ನು ಬದಲಾಯಿಸಿದ ನಂತರ ಕೈಗಳನ್ನು ತೊಳೆದುಕೊಳ್ಳಿ. ಅಡುಗೆ ಮಾಡುವ ಮುನ್ನ ಕೈಗಳ ಶುಚಗೊಲಿಸುವುದನ್ನು ಮರೆಯದಿರಿ.
* ಹಣ್ಣು ಮತ್ತು ತರಕಾರಿಯನ್ನು ಚೆನ್ನಾಗಿ ತೊಳೆದ ಬಳಿಕವೇ ಉಪಯೋಗಿಸಿ.
* ಈಜುಕೊಳಗಳು, ಕೆರ ಅಥವಾ ಕೊಳಗಳ ನೀರು ನುಂಗುವುದನ್ನು ತಪ್ಪಿಸಿ.
* ಬಳಸಿದ ಡೈಪರ್‌ಗಳನ್ನು ಮುಚ್ಚಳವಿರುವ ಕಸದ ತೊಟ್ಟಿಯಲ್ಲಿ ಎಸೆಯಿರಿ.
* ಸಾರ್ವಜನಿಕ ಪ್ರದೇಶಗಳಲ್ಲಿ ಶುದ್ಧ ನೀರು ಲಭ್ಯವಿಲ್ಲ ಎಂದಾದರೆ ಬಾಟಲ್ ನೀರಿನ್ನು ಕುಡಿಯಲು ಮತ್ತು ಅಡುಗೆಗೆ ಬಳಸಿ.
* ನಿಮಗೆ ಅಥವಾ ನಿಮ್ಮ ಸಂಗಾತಿಗೆ ಅತಿಸಾರ ಇದ್ದರೆ, ಲೈಂಗಿಕ ಕ್ರಿಯೆ ನಡೆಸಬೇಡಿ.
ಸೋಂಕಿತ ವ್ಯಕ್ತಿಯು ಯಾವುದೇ ಆಯಂಟಿ ಬಯೊಟಿಕ್ ಪಡೆಯದೆಯೂ ಐದರಿಂದ ಏಳು ದಿನಗಳಲ್ಲಿ ಚೇತರಿಸಿಕೊಳ್ಳುತ್ತಾರೆ. ಸೌಮ್ಯ ಲಕ್ಷಣಗಳಿರುವ ಜನರಿಗೆ ದ್ರವ ಆಹಾರ ಮತ್ತು ಸರಿಯಾದ ವಿಶ್ರಾಂತಿ ಮಾತ್ರ ಬೇಕಾಗಬಹುದು. ತೀವ್ರತರವಾದ ಪ್ರಕರಣಗಳಲ್ಲಿ ವೈದ್ಯರು ಆಯಂಟಿ ಬಯೋಟಿಕ್ ಶಿಫಾರಸು ಮಾಡಬಹುದು ಎಂದು ರೋಗ ನಿಯಂತ್ರಣ ಕೇಂದ್ರ ಹೇಳಿದೆ.

