ಜಿನೀವಾ: ಶ್ರೀಮಂತ ರಾಷ್ಟ್ರಗಳ ಒಕ್ಕೂಟವಾದ ಜಿ-7 ಶೃಂಗಸಭೆಯನ್ನು ವಿರೋಧಿಸಿ ಇಲ್ಲಿ ಭಾನುವಾರ ಬೃಹತ್ ಪ್ರತಿಭಟನೆ ನಡೆಯಿತು. ಸೋಮವಾರದಿಂದ ಶೃಂಗಸಭೆ ನಡೆಯಲಿದ್ದು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಭಾರತದ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ವಿವಿಧ ದೇಶಗಳ ನಾಯಕರು ಭಾಗಿಯಾಗಲಿದ್ದಾರೆ.
ಪರಿಸರವಾದಿಗಳು, ಸ್ತ್ರೀವಾದಿಗಳು, ಸಾಮ್ರಾಜ್ಯಶಾಹಿಯ ವಿರೋಧಿಗಳು, ಸ್ವತಂತ್ರ ಮಾಧ್ಯಮದ ಪ್ರತಿಪಾದಕರು, ಪ್ಯಾಲೆಸ್ಟೀನ್ ಹಕ್ಕುಗಳ ಹೋರಾಟಗಾರರು ಇಲ್ಲಿನ ಕೆರೆಯ ಪಕ್ಕದ ಉದ್ಯಾನದಿಂದ ಇಡೀ ಪಟ್ಟಣದಾದ್ಯಂತ ಬೃಹತ್ ಮೆರವಣಿಗೆ ನಡೆಸಿದರು.
ಆರ್ಥಿಕ ಅಸಮಾನತೆ, ರಷ್ಯಾ-ಉಕ್ರೇನ್ ಸಂಘರ್ಷ, ಕೊಲ್ಲಿ ರಾಷ್ಟ್ರಗಳ ಯುದ್ಧದ ವಿಚಾರವನ್ನು ಶೃಂಗಸಭೆಯಲ್ಲಿ ಚರ್ಚಿಸಬೇಕು ಎಂದು ಪ್ರತಿಭಟನಕಾರರು ಒತ್ತಾಯಿಸಿದ್ದಾರೆ.
ಫ್ರಾನ್ಸ್‌ನ ರೆಸಾರ್ಟ್ ಪಟ್ಟಣವೆಂದೇ ಖ್ಯಾತಿ ಪಡೆದಿರುವ 'ಎವಿಯಾನ್-ಲೇನ್-ಬೈನ್ಸ್'ನಲ್ಲಿ ಸೋಮವಾರದಿಂದ ಮೂರು ದಿನಗಳ ಕಾಲ ಜಿ-7 ಶೃಂಗಸಭೆ ನಡೆಯಲಿದೆ. ಸಭೆಗೂ ಮುನ್ನ ಬೃಹತ್ ಪ್ರತಿಭಟನೆ ನಡೆದ ಕಾರಣ, ಫ್ರಾನ್ಸ್ ಹಾಗೂ ನೆರೆ ರಾಷ್ಟ್ರ ಸ್ವಿಟ್ಜರ್ಲೆಂಡ್ ಅಧಿಕಾರಿಗಳು ಕೇಂದ್ರದ ಸುತ್ತ ಸಾವಿರಾರು ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಿದ್ದಾರೆ.

