ಕುಂಬಳೆ: ಅನಂತಪುರ ಕೈಗಾರಿಕಾ ಉದ್ಯಾನವನದಲ್ಲಿರುವ ಕಾರ್ಖಾನೆಗಳಿಂದ ಹೊರಹೊಮ್ಮುವ ದುರ್ವಾಸನೆಯನ್ನು ನಿವಾರಿಸಲು ಮತ್ತು ಮಾನವ ಜೀವ ಮತ್ತು ಆಸ್ತಿಗೆ ಅಪಾಯವನ್ನುಂಟುಮಾಡುವ ಕೈಗಾರಿಕಾ ಘಟಕಗಳನ್ನು ಮುಚ್ಚಲು ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಕ್ರಿಯಾ ಸಮಿತಿಯ ಪದಾಧಿಕಾರಿಗಳು ಕುಂಬಳೆಯಲ್ಲಿ ಬುಧವಾರ ಸಂಜೆ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.
ಹೊಸದಾಗಿ ಪ್ರಾರಂಭಿಸಲು ಕೈಗಾರಿಕಾ ಘಟಕಗಳಿಗೆ ಅನುಮತಿ ನೀಡಬಾರದು ಮತ್ತು ಚರಂಡಿಗಳ ಕೊರತೆಯಿಂದಾಗಿ ಮಲಿನ ಜಲ ಹರಿದು ಕುಡಿಯುವ ನೀರಿನ ಮೂಲಗಳನ್ನು ಕಲುಷಿತಗೊಳಿಸುತ್ತಿದೆ ಎಂದು ಅವರು ಆರೋಪಿಸಿದರು.
ಕೈಗಾರಿಕೆಯ ಹೆಸರಿನಲ್ಲಿ ಈ ಪ್ರದೇಶದಿಂದ ಇತರ ರಾಜ್ಯಗಳಿಗೆ ಮಣ್ಣನ್ನು ಸಾಗಿಸುವುದನ್ನು ನಿಲ್ಲಿಸಬೇಕೆಂದು ಕ್ರಿಯಾ ಸಮಿತಿಯ ಪದಾಧಿಕಾರಿಗಳು ಒತ್ತಾಯಿಸಿದರು.
ಈ ಮಾನವ ಜೀವ ಹಾನಿಗೊಳಪಡಿಸುವ ಅಪಾಯಕಾರಿ ಕೈಗಾರಿಕಾ ಘಟಕಗಳನ್ನು ವಿರೋಧಿಸಿ ಜೂ. 8 ರಂದು ನಾಯ್ಕಾಪು ಪೇಟೆಯಿಂದಕೈಗಾರಿಕಾ ಉದ್ಯಾನವನಕ್ಕೆ ಪ್ರತಿಭಟನಾ ರ್ಯಾಲಿ ನಡೆಸುವುದಾಗಿ ಪದಾಧಿಕಾರಿಗಳು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಅನಂತಪುರ ಕೈಗಾರಿಕಾ ಉದ್ಯಾನವನದಲ್ಲಿ ಕಾರ್ಯನಿರ್ವಹಿಸುವ ಹುರಿಹಗ್ಗ, ಕೆಲವು ರಾಸಾಯನಿಕ ತಯಾರಿ ಘಟಕಗಳ ಸಹಿತ ಜೀವಹಾನಿಗೊಳಿಸುವ ಹಲವು ಕಾರ್ಖಾನೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ರಾಜ್ಯದ ಇತರ ಭಾಗದಿಂದ ಅಲ್ಲಲ್ಲಿಯ ಜನಾಕ್ರೋಶಕ್ಕೆ ಬೆದರಿ ಇದೀಗ ಅನಂತಪುರದತ್ತ ಅಂತಹ ಘಟಕಗಳು ದಾಂಗುಡಿ ಇರಿಸುತ್ತಿವೆ. ಪ್ರಸಿದ್ದ ಪ್ರವಾಸಿ ಕೇಂದ್ರವೂ, ಇತಿಹಾಸ ಪ್ರಸಿದ್ದ ಧಾರ್ಮಿಕ ಕೇಂದ್ರವಾಗಿರುವ ಅನಂತಪುರ ಶ್ರೀಅನಂತಪದ್ಮನಾಭ ದೇವಾಲಯ ಸಹಿತ ಪರಿಸರದ ಐದಾರು ಕಿಲೋಮೀಟರ್ ವ್ಯಾಪ್ತಿಯಲ್ಲಿ ದರ್ಗಂಧ, ಅಂತರ್ಜಲ ಮಲಿನೀಕರಣಗಳು ಈ ಕಾರ್ಖಾನೆಗಳ ಮೂಲಕ ತೀವ್ರ ಕಳವಳ ಮೂಡಿಸಿದೆ. ಪರಿಸರ ವ್ಯಾಪ್ತಿಯಲ್ಲಿ ವಾಸಿಸುವ ನೂರಾರು ಕುಟುಂಬಗಳು ಬದುಕಲು ದಾರಿ ಕಾಣದಾಗಿದ್ದಾರೆ. ಮಕ್ಕಳು, ವೃದ್ಧರು ವ್ಯಾಪಕ ಸವಾಲುಗಳನ್ನು ಎದುರಿಸುತ್ತಿದ್ದು, ಸಮಸ್ಯೆ ಇನ್ನೂ ಮುಂದುವರಿದರೆ ಅನಂತಪುರ ಪರಿಸರ ಶೀಘ್ರ ಮನುಷ್ಯ ಆವಾಸಸ್ಥಾನಕ್ಕೆ ಅಯೋಗ್ಯವಾಗಲಿದೆ. ಈ ಹಿನ್ನೆಲೆಯಲ್ಲಿ ಮಾನವ ಹಕ್ಕು ಆಯೋಗ ಸಹಿತ ಉನ್ನತ ಮಟ್ಟದ ಅಧಿಕೃತರಿಗೆ ಈವರೆಗೆ ನೀಡಿದ ದೂರುಗಳಿಗೆ ಪರಿಹಾರ ಲಭಿಸದಾಗಿದೆ. ಇದೀಗ ಮೊದಲ ಹಂತದ ಪ್ರತಿಭಟನೆ ಜೂ.8 ರಂದು ನಡೆಯಲಿದ್ದು, ಮುಂದೆ ಜಿಲ್ಲಾಧಿಕಾರಿ ಕಾರ್ಯಾಲಯ ದಿಗ್ಬಂಧನ ಸಹಿತ ಉಗ್ರ ಹೋರಾಟ ಕ್ರಿಯಾ ಸಮಿತಿಯ ಮುಂದಿದೆ ಎಂದು ಪದಾಧಿಕಾರಿಗಳು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕ್ರಿಯಾ ಸಮಿತಿ ಅಧ್ಯಕ್ಷ ಷರೀಫ್, ಸಂಚಾಲಕ ಸುನಿಲ್ ಕುಮಾರ್ ಅನಂತಪುರ, ಉಪಾಧ್ಯಕ್ಷ ಎ.ಕೆ. ಅಶ್ರಫ್, ನಾಸರ್ ಕೆ.ಎಂ. ಮತ್ತು ಜನಾರ್ದನ ಪೂಜಾರಿ ಉಪಸ್ಥಿತರಿದ್ದರು.


