ಕಾಸರಗೋಡು: ಗಡಿನಾಡು ಕಾಸರಗೋಡಿನ ಭಾಷಾ ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಸಾಂವಿಧಾನಿಕ ಹಕ್ಕುಗಳ ರಕ್ಷಣೆ ಮತ್ತು ಸಂವಿಧಾನದ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗುತ್ತಿರುವುದನ್ನು ಪ್ರಶ್ನಿಸಿ ಜಿಲ್ಲೆಯ ವಿದ್ಯಾರ್ಥಿಗಳು ರಾಜ್ಯ ಉಚ್ಛ ನ್ಯಾಯಾಲಯದಲ್ಲಿ ಸಲ್ಲಿಸಿರುವ ರಿಟ್ ಅರ್ಜಿಯನ್ನು ಹೈಕೋರ್ಟು ಪೀಠ ವಿಚಾರಣೆಗೆ ಸ್ವೀಕರಿಸಿದ್ದು, ಜೂ. 9ರಂದು ಮತ್ತೆ ವಿಚಾರಣೆ ಕೈಗೆತ್ತಿಕೊಳ್ಳಲಿದೆ.
ಈ ಮೂಲಕ ಮಲಯಾಳಂ ಭಾಷಾ ಕಾಯ್ದೆ-2025 ರ ಸೆಕ್ಷನ್ 6 ರ ಅಡಿಯಲ್ಲಿ ಮಲಯಾಳಂ ಭಾಷೆಯನ್ನು ಕಡ್ಡಾಯಗೊಳಿಸುವುದರ ವಿರುದ್ಧ ಆರಂಭಿಸಲಾಗಿರುವ ಕಾನೂನು ಹೋರಾಟಕ್ಕೆ ಬಲ ಸಿಕ್ಕಿದಂತಾಗಿದೆ.
ಮಲಯಾಳಂ ಭಾಷೆಯನ್ನು ಕಡ್ಡಾಯಗೊಳಿಸುವುದನ್ನು ಪ್ರಶ್ನಿಸಿ ಕುಮಾರಿ ದೀಕ್ಷಾ ಕೆ. ಮೈಲಂಕೋಟೆ, ಕುಮಾರಿ ತನ್ಮಿತಾ ಹೆಚ್., ಹೊಸಮನೆ, ಆದೂರು, ಧನುಷ್ ಕೆ. ಊಯಿತಡ್ಕ,
ಹರ್ಷಶ್ರೀ ಮಞಂಪಾರೆ, ಮುಹಮ್ಮದ್ ಅಫ್ರಾ ಗಾಳಿಮುಖ, ಶಿವಜಿತ್ ಮೈಲಂಕೋಟೆ ಹಾಗೂ ಮೊಹಮ್ಮದ್ ರಿಯಾಸ್ ನ್ಯಾಯಾಲಯದ ಮೊರೆ ಹೋಗಿದ್ದರು.
ಬೇಡಿಕೆಯೇನು?:
ಕೇರಳ ಸರ್ಕಾರ ಜಾರಿಗೆ ತಂದಿರುವ ಕಾಯ್ದೆಯು ಭಾರತದ ಸಂವಿಧಾನದ ವಿಧಿಗಳು ಸೇರಿದಂತೆ ಭಾಷಾಅಲ್ಪಸಂಖ್ಯಾತರ ಭಾಷಾ ಹಕ್ಕುಗಳನ್ನು ರಕ್ಷಿಸುವ ಮತ್ತು ವಿಧಿಗಳಿಗೆ ಸಂಪೂರ್ಣವಾಗಿ ವಿರುದ್ಧವಾಗಿದೆ. ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಮಲಯಾಳಂ ಭಾಷೆಯನ್ನು ಹೆಚ್ಚುವರಿ ಭಾಷೆಯಾಗಿ ಕಡ್ಡಾಯಗೊಳಿಸುವುದರಿಂದ ವಿನಾಯಿತಿ ನೀಡಬೇಕು ಹಾಗೂ ಅರ್ಜಿ ಇತ್ಯರ್ಥವಾಗುವವರೆಗೆ ಕಾಯ್ದೆಯ ಅನುಷ್ಠಾನಕ್ಕೆ ಮಧ್ಯಂತರ ತಡೆಯಾಜೆ ನೀಡುವಂತೆ ಅರ್ಜಿದಾರರ ಪರ ವಕೀಲರು ಕೋರಿದ್ದಾರೆ.
ಅರ್ಜಿಯ ಗಾಂಭೀರ್ಯತೆಯನ್ನು ಪರಿಗಣಿಸಿದ ಉಚ್ಚ ನ್ಯಾಯಾಲಯದ ಮಾನ್ಯ ನ್ಯಾಯಮೂರ್ತಿ ಜಸ್ಟಿಸ್ ಬೆಚ್ಚು ಕುರಿಯನ್ ಥಾಮಸ್ ಒಳಗೊಂಡ ಏಕ ಸದಸ್ಯ ಪೀಠ ಅರ್ಜಿಯನ್ನು ವಿಚಾರಣೆಗೆ ಸ್ವೀಕರಿಸಿದೆ. ಇದಿರು ಕಕ್ಷಿಗಳಾದ ಕೇರಳ ರಾಜ್ಯ ಸರ್ಕಾರ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆಯ ಕಾರ್ಯದರ್ಶಿಗಳಿಗೆ ತುರ್ತು ನೋಟಿಸ್ ಜಾರಿ ಮಾಡಿದ್ದು, ಆಕ್ಷೇಪಣೆ (ಕೌಂಟರ್) ಸಲ್ಲಿಸಲು ನಿರ್ದೇಶಿಸಿರುವುದಲ್ಲದೆ, ಮಧ್ಯಂತರ ತಡೆಯಾಜ್ಞೆಯ ಮನವಿಯನ್ನು ಪರಿಗಣಿಸುವ ನಿಟ್ಟಿನಲ್ಲಿ ಪ್ರಕರಣದ ಮುಂದಿನ ವಿಚಾರಣೆಯನ್ನು 2026ರ ಜೂನ್ 9 ಕ್ಕೆ ಮುಂದೂಡಲಾಗಿದೆ.
ಮಾತೃಭಾಷೆ ಸಂವಿಧಾನಿಕ ಹಕ್ಕು:
ಮಾತೃಭಾಷೆಯಲ್ಲಿ ಶಿಕ್ಷಣ ಪಡೆಯುವುದು ಪ್ರತಿಯೊಂದು ಮಗುವಿನ ಸಾಂವಿಧಾನಿಕ ಹಕ್ಕಾಗಿದ್ದು, ಗಡಿನಾಡಿನ ಕನ್ನಡ ಮಕ್ಕಳ ಈ ಕಾನೂನು ಹೋರಾಟವು ಕಾಸರಗೋಡಿನಲ್ಲಿ ಕನ್ನಡದ ಅಸ್ತಿತ್ವ ಮತ್ತು ಭಾಷಾ ಅಲ್ಪಸಂಖ್ಯಾತರ ಹಕ್ಕುಗಳನ್ನು ಕಾಯ್ದುಕೊಳ್ಳುವಲ್ಲಿ ಅತ್ಯಂತ ನಿರ್ಣಾಯಕ ಹೆಜ್ಜೆಯಾಗಿದೆ ಎಂದು ಕಾಸರಗೋಡಿನ ಕನ್ನಡಿಗರು ಅಭಿಪ್ರಾಯಪಟ್ಟಿದ್ದಾರೆ.
ಮಂಡಿಸಲಾದ ವಾದಗಳೇನು?:
ಪಠ್ಯಕ್ರಮ ನಿರ್ಧರಿಸುವ ಅಧಿಕಾರ ಶೈಕ್ಷಣಿಕ ಪ್ರಾಧಿಕಾರ ಮಾತ್ರ ಹೊಂದಿದ್ದು, ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ, 2009(ಆರ್‍ಟಿಇ ಆಕ್ಟ್) ರ ಸೆಕ್ಷನ್ 29 ರ ಪ್ರಕಾರ, ಪಠ್ಯಕ್ರಮ (ಕರಿಕ್ಯುಲಂ) ಮತ್ತು ಮೌಲ್ಯಮಾಪನ ವಿಧಾನವನ್ನು ಶೈಕ್ಷಣಿಕ ಪ್ರಾಧಿಕಾರ (ಅಕಾಡಮಿಕ್ ಅಥಾರಿಟಿ) ನಿಗದಿಪಡಿಸಬೇಕು.
ರಾಜಕೀಯ ಪ್ರಾಧಿಕಾರ (ಪೊಲಿಟಿಕಲ್ ಅಥಾರಿಟಿ) ಮತ್ತು ಶೈಕ್ಷಣಿಕ ಪ್ರಾಧಿಕಾರ (ಅಕಾಡಮಿಕ್ ಅಥಾರಿಟಿ)ಎಂಬುದಾಗಿ ಸಂಸತ್ತು ಉದ್ದೇಶಪೂರ್ವಕವಾಗಿ ಎರಡು ಕ್ಷೇತ್ರಗಳನ್ನು ಪ್ರತ್ಯೇಕಿಸಿದ್ದು, ಈ ನಿಟ್ಟಿನಲ್ಲಿ ಪಠ್ಯಕ್ರಮ ರಚಿಸುವ ಕಾರ್ಯವನ್ನು ಶಿಕ್ಷಣ ತಜ್ಞರಿಗೆ ವಹಿಸಿಕೊಡಲಾಗಿದೆ, ಹೊರತಾಗಿ ವಿಧಾನಮಂಡಲಗಳಿಗೆ ಅಲ್ಲ.
ಮಲಯಾಳಂ ಭಾಷೆಯನ್ನು ಕಡ್ಡಾಯ ವಿಷಯವನ್ನಾಗಿ ಮಾಡುವುದು ನೇರವಾಗಿ ಪಠ್ಯಕ್ರಮಕ್ಕೆ ಸಂಬಂಧಿಸಿದ ವಿಷಯವಾಗಿದೆ. ಸಂಸತ್ತು ಈ ಅಧಿಕಾರವನ್ನು ಈಗಾಗಲೇ ಶೈಕ್ಷಣಿಕ ಪ್ರಾಧಿಕಾರಕ್ಕೆ ವಹಿಸಿರುವುದರಿಂದ, ರಾಜ್ಯ ವಿಧಾನಮಂಡಲವು ಅದೇ ವಿಷಯದಲ್ಲಿ ನೇರವಾಗಿ ಕಾನೂನು ರೂಪಿಸಿ ಭಾಷೆಯನ್ನು ಕಡ್ಡಾಯಗೊಳಿಸಲು ಸಾಧ್ಯವಿಲ್ಲ. ಆದ್ದರಿಂದ ಮಲಯಾಳಂ ಭಾಷಾ ಕಾಯ್ದೆಯ ಸೆಕ್ಷನ್ 6, ಆರ್‍ಟಿಇ ಕಾಯ್ದೆಯ ಸೆಕ್ಷನ್ 29 ಆವರಿಸಿರುವ ಕ್ಷೇತ್ರವನ್ನು ಅತಿಕ್ರಮಿಸಿರುವುದಾಗಿ ಉಚ್ಛ ನ್ಯಾಯಾಲಯದಲ್ಲಿ ವಾದ ಮಂಡಿಸಲಾಗಿದೆ.
ಕೇಂದ್ರ ಕಾನೂನಿಗೆ ವಿರುದ್ಧ:
ಶಿಕ್ಷಣವು ಸಂವಿಧಾನದ ಸಮಕಾಲೀನ ಪಟ್ಟಿಯ (ಅoಟಿಛಿuಡಿಡಿeಟಿಣ ಐisಣ) ವಿಷಯವಾಗಿದ್ದರೂ, ಕೇಂದ್ರ ಕಾನೂನು ಮತ್ತು ರಾಜ್ಯ ಕಾನೂನು ನಡುವೆ ಸಂಘರ್ಷ ಉಂಟಾದಲ್ಲಿ ಸಂವಿಧಾನದ ಅನುಚ್ಛೇದ 254 ಅನ್ವಯ ಕೇಂದ್ರ ಕಾನೂನು ಮೇಲುಗೈ ಸಾಧಿಸುತ್ತದೆ. ಈ ಹಿನ್ನೆಲೆಯಲ್ಲಿ ಮಲಯಾಳಂ ಭಾಷಾ ಕಾಯ್ದೆಯ ಸೆಕ್ಷನ್ 6, ಆರ್‍ಟಿಇ ಕಾಯ್ದೆಗೆ ವಿರುದ್ಧವಾಗಿರುವುದರಿಂದ ಸಂವಿಧಾನಬಾಹಿರವಾಗಿದೆ ಎಂದೂ ತಿಳಿಸಲಾಗಿದೆ.


.webp)
