ಕಾಸರಗೋಡು: ಕೇರಳ ವಿಧಾನಸಭೆಯಲ್ಲಿ ಕನ್ನಡದಲ್ಲಿ ಪ್ರಮಾಣವಚನ ಸ್ವೀಕರಿಸಿ ತಮ್ಮ ಕನ್ನಡ ಪ್ರೇಮ ಮೆರೆದಿದ್ದ ಮಂಜೇಶ್ವರ ಶಾಸಕ ಎ.ಕೆ.ಎಂ ಅಶ್ರಫ್, ಜಗದ್ಗುರು ಬಸವಣ್ಣನವರ ವಚನವನ್ನು ಉಲ್ಲೇಖಿಸುವ ಮೂಲಕ ಮತ್ತೊಮ್ಮೆ ಸದನದ ಗಮನ ಸೆಳೆದಿದ್ದಾರೆ.
ವಿಧಾನಸಭಾ ಮೊದಲ ಅಧಿವೇಶನದಲ್ಲಿ ರಾಜ್ಯಪಾಲರ ಭಾಷಣಕ್ಕೆ ಕೃತಜ್ಞತೆ ಸಲ್ಲಿಸುತ್ತಾ ಸಾಮಾಜಿಕ ಬದ್ಧತೆ ಮತ್ತು ಸಮಾಜದ ಎಲ್ಲ ವರ್ಗಗಳ ಒಗ್ಗಟ್ಟಿನ ಕುರಿತು ಮಾತನಾಡಿದ ಶಾಸಕ ಅಶ್ರಫ್ ಅವರು, ಬಸವಣ್ಣನವರ ಈ ವಚನ ಸಾಲುಗಳನ್ನು ಅತ್ಯಂತ ಅರ್ಥಪೂರ್ಣವಾಗಿ ಉಲ್ಲೇಖಿಸುವ ಮೂಲಕ ಮಾನವೀಯತೆಯ ಮಹತ್ವವನ್ನು ಪ್ರತಿಪಾದಿಸಿದ್ದಾರೆ.
'ಇವನಾರವ ಇವನಾರವ ಇವನಾರವನೆಂದೆನಿಸದಿರಯ್ಯ,
ಇವ ನಮ್ಮವ ಇವ ನಮ್ಮವ ಇವ ನಮ್ಮವನೆಂದೆನಿಸಯ್ಯ.
ಕೂಡಲಸಂಗಮದೇವ ನಿಮ್ಮ ಮನೆಯ ಮಗನೆನಿಸಯ್ಯ'
ಎಂಬಂತೆ, ಎಲ್ಲರಿಗೂ ಪ್ರಿಯನಾಗಿ, ಆತ್ಮೀಯ ವ್ಯಕ್ತಿಯಾಗಿ ಬದುಕಬೇಕೆಂಬ ಇಂಗಿತ ಹೊಂದಿರುವ ಸಾಲುಗಳನ್ನು ಸಭೆಯ ಮುಂದಿಟ್ಟಾಗ ಇಡೀ ಸದನ ಮೇಜು ತಟ್ಟಿ ಶ್ಲಾಘನೆ ವ್ಯಕ್ತಪಡಿಸಿತ್ತು. ಈ ಮೂಲಕ ಬಸವಣ್ಣನವರ ವಾಣಿ ಕೇರಳ ಶಾಸನಸಭೆಯ ಇತಿಹಾಸದ ಪುಟಗಳಲ್ಲಿ ಸೇರುವಂತಾಯಿತು.
'ನುಡಿದರೆ ಮುತ್ತಿನ ಹಾರ ದಂತಿರಬೇಕು,
ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು,
ನುಡಿದರೆ ಸ್ಪಟಿಕದ ಸಲಾಕೆಯಂತಿರಬೇಕು'ಎಂಬ ಇನ್ನೊಂದು ವಚನದಂತೆ ಐಕ್ಯರಂಗ ಸರ್ಕಾರದ ಚುನಾವಣಾ ಪೂರ್ವ ಗ್ಯಾರಂಟಿಗಳನ್ನು ಈಡೇರಿಸಲು ಮುಖ್ಯಮಂತ್ರಿ ವಿ.ಡಿ.ಸತೀಶನ್ ಅವರು ಬದ್ಧರಾಗಿರುವುದಾಗಿ ಹೇಳಿದರು.



