ಅದೊಂದು ಸೌತೆಕಾಯಿ, ಹಣ್ಣುಗಳಿಂದ ತುಂಬಿದ ತೋಟ.. ಕಲ್ಲಿನ ಕಂಬಗಳಿಗೆ ಹಾಕಿರುವ ತಂತಿಬೇಲಿಗಳು.. ಗಮನ ಸೆಳೆಯುವ ಕೃತಕ ಕೊಳ ಮತ್ತು ನಾಲ್ಕು ದೊಡ್ಡ ಪಾಲಿಹೌಸ್‌ಗಳು.. ಅದರ ಮುಂದಿನ ಫಲಕದಲ್ಲಿ ರಾಷ್ಟ್ರೀಯ ತೋಟಗಾರಿಕೆ ಮಂಡಳಿ, ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ, ಭಾರತ ಸರ್ಕಾರದಿಂದ ಅನುದಾನ ಪಡೆಯಲಾಗಿದೆ, ಫಲಾನುಭವಿ: ಶ್ರೀ ಭಗೀರಥ ಚೌಧರಿ.
ಸಬ್ಸಿಡಿ ಮೊತ್ತ: 50% (99,60,000) ಎಂದು ಬರೆಯಲಾಗಿದೆ.
ಈ ಫಲಕ ನೋಡಿದ ನಿಮಗೆ ಯಾರೊ ಒಬ್ಬ ರೈತನ ತೋಟ ಇರಬಹುದು ಎನ್ನಿಸಬಹುದು.. ಹಾಗೆಂದುಕೊಂಡರೆ, ತಪ್ಪಾಗುತ್ತೆ. ಫಲಾನುಭವಿ ಭಗೀರಥ ಚೌಧರಿ ಕೇಂದ್ರ ಸಚಿವ. ಹೌದು.. ಕೇಂದ್ರದ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ರಾಜ್ಯ ಸಚಿವರಾಗಿದ್ದಾರೆ. ದಿ ಇಂಡಿಯನ್ ಎಕ್ಸ್‌ಪ್ರೆಸ್‌ನ ವರದಿ ಪ್ರಕಾರ ಅವರು ಮೂರು ತಿಂಗಳ ಹಿಂದೆ ತಮ್ಮದೇ ಸಚಿವಾಲಯದ ಅಡಿಯಲ್ಲಿ ಒಂದು ಯೋಜನೆಯ ಮೂಲಕ ಸಬ್ಸಿಡಿ ಪಡೆದಿದ್ದಾರೆ. ಅಲ್ಲದೇ, ತಾವು ಮಾಜಿ ಉಪಾಧ್ಯಕ್ಷರಾಗಿರುವ ಮಂಡಳಿಯಿಂದ ಅನುಮೋದನೆ ಪಡೆದಿದ್ದಾರೆ.
ಬೃಹತ್ ಪ್ರಮಾಣದಲ್ಲಿ ವಾಣಿಜ್ಯ ಬೆಳೆ ಉತ್ತೇಜನಕ್ಕೆ ಇರುವ ಯೋಜನೆ ಇದಾಗಿದ್ದು, ಆಯ್ದ ತರಕಾರಿ ಮತ್ತು ಹೂವುಗಳ ಕೃಷಿಯನ್ನು ದೊಡ್ಡ ಪ್ರಮಾಣದಲ್ಲಿ ಮಾಡುವ ದೃಷ್ಟಿಯಿಂದ ವಾಣಿಜ್ಯ ಕೃಷಿಯನ್ನು ಉತ್ತೇಜಿಸುವ ಯೋಜನೆಯನ್ನು 2014-15ರಲ್ಲಿ ಪ್ರಾರಂಭಿಸಲಾಗಿತ್ತು. ಈ ಯೋಜನೆಯು ಚೌಧರಿ ಅವರ ಸಚಿವಾಲಯದ ಆಡಳಿತ ನಿಯಂತ್ರಣದಲ್ಲಿರುವ ಸ್ವಾಯತ್ತ ಸಂಸ್ಥೆಯಾದ ರಾಷ್ಟ್ರೀಯ ತೋಟಗಾರಿಕೆ ಮಂಡಳಿಯಿಂದ ನಿರ್ವಹಿಸಲ್ಪಡುವ ಮಿಷನ್ ಫಾರ್ ಇಂಟಿಗ್ರೇಟೆಡ್ ಡೆವಲಪ್‌ಮೆಂಟ್ ಆಫ್ ಹಾರ್ಟಿಕಲ್ಚರ್ (ಎಂಐಡಿಎಚ್) ಅಡಿ ಬರುತ್ತದೆ.
ಈ ಉಪಕ್ರಮವು ಕ್ಯಾಪ್ಸಿಕಂ, ಸೌತೆಕಾಯಿ ಮತ್ತು ಟೊಮೆಟೊ ಮುಂತಾದ ತರಕಾರಿ ಮತ್ತು ಗುಲಾಬಿ, ಆಂಥೂರಿಯಂ ಮತ್ತು ಆರ್ಕಿಡ್‌ಳು ಸೇರಿದಂತೆ ಎಂಟು ಬಗೆಯ ಹೂವುಗಳನ್ನು ಬೆಳೆಸಲು ಯೋಜನಾ ವೆಚ್ಚದ ಗರಿಷ್ಠ ಶೇ 50 ರಷ್ಟು ಸಬ್ಸಿಡಿಯನ್ನು ನೀಡುತ್ತದೆ.
ರಾಜಸ್ಥಾನದಲ್ಲಿರುವ ತಮ್ಮ 16,592 ಚದರ ಮೀಟರ್‌ನಷ್ಟು ಕೃಷಿ ಭೂಮಿಯಲ್ಲಿ ಸೌತೆಕಾಯಿ ಕೃಷಿಗಾಗಿ ಚೌಧರಿ ಅವರಿಗೆ ಯೋಜನೆಯಡಿ ಸಬ್ಸಿಡಿ ಮಂಜೂರಾಗಿದೆ. 2025 ರಲ್ಲಿ ಎನ್‌ಎಚ್‌ಬಿ ಅನುಮೋದಿಸಿದ 467 ಯೋಜನೆಗಳಲ್ಲಿ ಇದೂ ಒಂದಾಗಿದೆ.

