HEALTH TIPS

ಅಹಮದಾಬಾದ್‌ ನ Air India ದುರಂತಕ್ಕೆ ವರ್ಷ | ಮಗನ ಗೌರವ ಕಾಪಾಡಲು ಹೋರಾಟ ಮುಂದುವರಿಯಲಿದೆ: ಮೃತ ಪೈಲಟ್‌ ನ ತಂದೆ

ಮುಂಬೈ: ಕಳೆದ ವರ್ಷ ಅಹಮದಾಬಾದ್‌ ನಲ್ಲಿ ಸಂಭವಿಸಿದ್ದ ಏರ್ ಇಂಡಿಯಾ ವಿಮಾನ ದುರಂತದಲ್ಲಿ ಮೃತಪಟ್ಟ ಹಿರಿಯ ಪೈಲಟ್ ಕ್ಯಾಪ್ಟನ್ ಸುಮೀತ್ ಸಭರ್ವಾಲ್ ಅವರ ಗೌರವವನ್ನು ಕಾಪಾಡಲು ಕೊನೆಯವರೆಗೂ ಹೋರಾಟ ಮುಂದುವರಿಸುವುದಾಗಿ ಅವರ ತಂದೆ ಪುಷ್ಕರ್ ರಾಜ್ ಸಭರ್ವಾಲ್ ಹೇಳಿದ್ದಾರೆ.

ಅಪಘಾತದ ತನಿಖೆಗೆ ಸಂಬಂಧಿಸಿದಂತೆ ಹೊಸ ಮಾಹಿತಿ ಹೊರಬೀಳುವ ನಿರೀಕ್ಷೆಯಿರುವ ಸಂದರ್ಭದಲ್ಲಿ BBCಗೆ ನೀಡಿದ ಸಂದರ್ಶನದಲ್ಲಿ ಅವರು ಈ ಮಾತುಗಳನ್ನು ಹೇಳಿದ್ದಾರೆ.

ಕೆಲವು ಅಂತರರಾಷ್ಟ್ರೀಯ ಮಾಧ್ಯಮಗಳು ತನಿಖೆಯ ಗಮನ ತಮ್ಮ ಮಗನತ್ತ ಕೇಂದ್ರೀಕೃತವಾಗಿದೆ ಎಂದು ವರದಿ ಮಾಡಿರುವುದನ್ನು ಉಲ್ಲೇಖಿಸಿದ ಅವರು, "ಅವರು ಈಗ ಬದುಕಿಲ್ಲ. ಆದರೆ ಅವರ ಗೌರವವನ್ನು ಕಾಪಾಡುವುದು ಜವಾಬ್ದಾರಿ ನನ್ನ ಮೇಲಿದೆ" ಎಂದು ಹೇಳಿದರು.

2025ರ ಜೂನ್‌ 12ರಂದು ಅಹಮದಾಬಾದ್‌ ನಿಂದ ಲಂಡನ್‌ ನ ಗ್ಯಾಟ್ವಿಕ್ ವಿಮಾನ ನಿಲ್ದಾಣಕ್ಕೆ ಹೊರಟಿದ್ದ ಏರ್ ಇಂಡಿಯಾದ ಬೋಯಿಂಗ್‌ 787 ಡ್ರೀಮ್‌ಲೈನರ್ ವಿಮಾನ ಟೇಕ್‌ಆಫ್ ಆದ ಕೆಲವೇ ಕ್ಷಣಗಳಲ್ಲಿ ಅಪಘಾತಕ್ಕೀಡಾಗಿತ್ತು. ಈ ದುರಂತದಲ್ಲಿ ವಿಮಾನದಲ್ಲಿದ್ದ 241 ಪ್ರಯಾಣಿಕರು ಮತ್ತು ಸಿಬ್ಬಂದಿ ಮೃತಪಟ್ಟಿದ್ದರು.

ಅಪಘಾತದ ನಿಖರ ಕಾರಣ ಇನ್ನೂ ಬಹಿರಂಗಗೊಂಡಿಲ್ಲ. ಆದರೆ ಭಾರತದ ವಿಮಾನ ಅಪಘಾತ ತನಿಖಾ ಬ್ಯೂರೊ (AAIB) ಕಳೆದ ವರ್ಷ ಜುಲೈನಲ್ಲಿ ಬಿಡುಗಡೆ ಮಾಡಿದ್ದ ಪ್ರಾಥಮಿಕ ವರದಿಯಲ್ಲಿ, ಟೇಕ್‌ಆಫ್ ಆದ ಕೆಲವೇ ಕ್ಷಣಗಳಲ್ಲಿ ಎರಡೂ ಇಂಜಿನ್‌ ಗಳ ಇಂಧನ ನಿಯಂತ್ರಣ ಸ್ವಿಚ್‌ಗಳು 'ರನ್‌' ಸ್ಥಿತಿಯಿಂದ 'ಕಟ್‌-ಆಫ್‌' ಸ್ಥಿತಿಗೆ ಬದಲಾಗಿದ್ದವು ಎಂದು ತಿಳಿಸಿತ್ತು. ಇದರಿಂದ ಇಂಜಿನ್‌ ಗಳಿಗೆ ಇಂಧನ ಪೂರೈಕೆ ಸ್ಥಗಿತಗೊಂಡಿತ್ತು ಎಂದು ವರದಿ ಹೇಳಿತ್ತು.

ಕಾಕ್‌ ಪಿಟ್‌ ನ ಧ್ವನಿಮುದ್ರಣಗಳಲ್ಲಿ ಒಬ್ಬ ಪೈಲಟ್ 'ಕಟ್‌-ಆಫ್‌ ಏಕೆ ಆಯಿತು?' ಎಂದು ಪ್ರಶ್ನಿಸಿದರೆ, ಮತ್ತೊಬ್ಬ ಪೈಲಟ್ 'ನಾನು ಅದನ್ನು ಮಾಡಿಲ್ಲ' ಎಂದು ಉತ್ತರಿಸಿರುವುದು ದಾಖಲಾಗಿತ್ತು. ಆದರೆ ಈ ಮಾತುಗಳನ್ನು ಯಾವ ಪೈಲಟ್ ಆಡಿದ್ದಾರೆ ಎಂಬುದನ್ನು ತನಿಖಾಧಿಕಾರಿಗಳು ಬಹಿರಂಗಪಡಿಸಿರಲಿಲ್ಲ.

ಅಪಘಾತದ ವೇಳೆ ಸಹ ಪೈಲಟ್ ಕ್ಲೈವ್ ಕುಂದರ್ ವಿಮಾನವನ್ನು ನಿಯಂತ್ರಿಸುತ್ತಿದ್ದರೆ, ಕ್ಯಾಪ್ಟನ್ ಸುಮೀತ್ ಸಭರ್ವಾಲ್ ಮೇಲ್ವಿಚಾರಣೆಯ ಹೊಣೆ ಹೊತ್ತಿದ್ದರು. ಯಾವುದೇ ಪೈಲಟ್ ಉದ್ದೇಶಪೂರ್ವಕವಾಗಿ ಈ ಕ್ರಮ ಕೈಗೊಂಡಿದ್ದಾರೆಯೇ ಎಂಬ ತೀರ್ಮಾನಕ್ಕೆ ತನಿಖಾಧಿಕಾರಿಗಳು ಬಂದಿಲ್ಲ.

ಆದರೂ, ಪ್ರಾಥಮಿಕ ವರದಿ ಪ್ರಕಟವಾದ ಕೆಲವೇ ದಿನಗಳಲ್ಲಿ ಕೆಲವು ಅಂತರರಾಷ್ಟ್ರೀಯ ಮಾಧ್ಯಮಗಳು ತನಿಖೆಯ ಗಮನ ಕ್ಯಾಪ್ಟನ್ ಸಭರ್ವಾಲ್ ಅವರತ್ತ ತಿರುಗಿದೆ ಎಂದು ವರದಿ ಮಾಡಿದ್ದವು. ಕಾಕ್‌ ಪಿಟ್ ಧ್ವನಿಮುದ್ರಣಗಳು ಇಂಜಿನ್‌ ಗಳಿಗೆ ಇಂಧನ ಪೂರೈಕೆಯನ್ನು ಸ್ಥಗಿತಗೊಳಿಸಿದ ಕ್ರಮಕ್ಕೆ ಹಿರಿಯ ಪೈಲಟ್ ಕಾರಣರಾಗಿರಬಹುದು ಎಂಬ ಅನುಮಾನವನ್ನೂ ವ್ಯಕ್ತಪಡಿಸಲಾಗಿತ್ತು.

ಈ ವರದಿಗಳಿಗೆ ಪೈಲಟ್‌ಗಳ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದವು. ತನಿಖೆ ಪೂರ್ಣಗೊಳ್ಳುವ ಮುನ್ನವೇ ಹಿರಿಯ ಪೈಲಟ್ ಅವರನ್ನು ಹೊಣೆಗಾರರನ್ನಾಗಿ ಬಿಂಬಿಸುವ ಪ್ರಯತ್ನಗಳನ್ನು ಅವು ಖಂಡಿಸಿದ್ದವು.

AAIBಯೂ ಕೆಲವು ಮಾಧ್ಯಮಗಳಲ್ಲಿ ಪ್ರಕಟವಾದ ಮಾಹಿತಿಯನ್ನು 'ಆಯ್ದ ಮತ್ತು ಪರಿಶೀಲಿಸದ ವರದಿ' ಎಂದು ಟೀಕಿಸಿತ್ತು. ತನಿಖೆ ಪೂರ್ಣಗೊಳ್ಳುವ ಮೊದಲೇ ತೀರ್ಮಾನಗಳಿಗೆ ಬರುವುದು ಬೇಜವಾಬ್ದಾರಿತನ ಎಂದು ಹೇಳಿತ್ತು.

ನಂತರ ಪುಷ್ಕರ್ ರಾಜ್ ಸಭರ್ವಾಲ್ ಅವರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿ, ಅಪಘಾತದ ಎಲ್ಲ ಸಾಧ್ಯ ಕಾರಣಗಳ ಕುರಿತು ಸ್ವತಂತ್ರ ತನಿಖೆ ನಡೆಸುವಂತೆ ಕೋರಿದ್ದರು. ವಿಚಾರಣೆ ವೇಳೆ ನ್ಯಾಯಾಲಯ, ಪ್ರಾಥಮಿಕ ವರದಿಯಲ್ಲಿ ಕ್ಯಾಪ್ಟನ್ ಸಭರ್ವಾಲ್ ಅವರ ತಪ್ಪಿನ ಯಾವುದೇ ಸೂಚನೆ ಇಲ್ಲ ಎಂದು ಅಭಿಪ್ರಾಯಪಟ್ಟಿತ್ತು.

"ಪ್ರತಿ ವಿಮಾನ ದುರಂತದ ಬಳಿಕ ಆರೋಪ ಪೈಲಟ್ ಮೇಲೆಯೇ ಹೊರಿಸಲಾಗುತ್ತದೆ. ಪ್ರಕರಣವನ್ನು ಮುಗಿಸಲು ಅದು ಸುಲಭದ ಮಾರ್ಗ. ಮೃತಪಟ್ಟವರು ತಮ್ಮನ್ನು ತಾವು ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ" ಎಂದು ಪುಷ್ಕರ್ ರಾಜ್ ಹೇಳಿದರು.

ಕ್ಯಾಪ್ಟನ್ ಸುಮೀತ್ ಸಭರ್ವಾಲ್ ಏರ್ ಇಂಡಿಯಾದಲ್ಲಿ ಸುಮಾರು ಮೂರು ದಶಕಗಳ ಅನುಭವ ಹೊಂದಿದ್ದ ಹಿರಿಯ ಪೈಲಟ್ ಆಗಿದ್ದರು. ಅವರು ಒಟ್ಟು 15,600 ಗಂಟೆಗಳ ಹಾರಾಟದ ಅನುಭವ ಹೊಂದಿದ್ದು, ಅದರಲ್ಲಿ ಸುಮಾರು 8,600 ಗಂಟೆಗಳು ಬೋಯಿಂಗ್‌ 787 ಡ್ರೀಮ್‌ ಲೈನರ್ ವಿಮಾನದಲ್ಲಿಯೇ ದಾಖಲಾಗಿದ್ದವು.

ತಮ್ಮ ಮಗ ಶೀಘ್ರದಲ್ಲೇ ನಿವೃತ್ತಿ ಹೊಂದಿ ಕುಟುಂಬದೊಂದಿಗೆ ಹೆಚ್ಚು ಸಮಯ ಕಳೆಯುವ ಯೋಜನೆ ಹೊಂದಿದ್ದ ಎಂದು ಪುಷ್ಕರ್ ರಾಜ್ ನೆನಪಿಸಿಕೊಂಡರು.

"ಅಂದು ಅವರನ್ನು ಅಹಮದಾಬಾದ್‌ ನಿಂದ ವಿಮಾನ ಹಾರಾಟ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. 'ನಾನು ವಿಮಾನ ಹತ್ತುತ್ತಿದ್ದೇನೆ. ಗ್ಯಾಟ್ವಿಕ್ ತಲುಪಿದ ಬಳಿಕ ಕರೆ ಮಾಡುತ್ತೇನೆ' ಎಂದು ನನಗೆ ಹೇಳಿದ್ದರು. ಆದರೆ ಸ್ವಲ್ಪ ಸಮಯದ ಬಳಿಕ ಎಲ್ಲವೂ ಬದಲಾಗಿಬಿಟ್ಟಿತು" ಎಂದು ಅವರು ಭಾವುಕರಾಗಿ ಹೇಳಿದರು.

ತಮ್ಮ ಮಗ ಮೃದುಸ್ವಭಾವದ, ಸಹೃದಯ ಹಾಗೂ ಕುಟುಂಬಕ್ಕೆ ಅಪಾರ ಪ್ರೀತಿ ತೋರುತ್ತಿದ್ದ ವ್ಯಕ್ತಿಯಾಗಿದ್ದರು ಎಂದು ಪುಷ್ಕರ್ ರಾಜ್ ಹೇಳಿದರು.

"ಅವರ ತಾಯಿ ಅವರನ್ನು 'ಶ್ರವಣ ಕುಮಾರ' ಎಂದು ಕರೆಯುತ್ತಿದ್ದರು. ತಂದೆ-ತಾಯಿಯ ಮೇಲಿನ ಅವರ ಪ್ರೀತಿ ಅಷ್ಟೊಂದು ಅಪಾರವಾಗಿತ್ತು" ಎಂದು ಹೇಳಿದರು.

ಕೆಲಸ ನಿಮಿತ್ತ ವಿದೇಶ ಪ್ರವಾಸದಲ್ಲಿದ್ದಾಗಲೂ ಮಗ ನಿರಂತರವಾಗಿ ಸಂಪರ್ಕದಲ್ಲಿರುತ್ತಿದ್ದ. ಗಮ್ಯಸ್ಥಾನ ತಲುಪಿದ ಕೂಡಲೇ ಕರೆ ಮಾಡುತ್ತಿದ್ದರು. ಹೋಟೆಲ್‌ ನಲ್ಲಿ ಇದ್ದಾಗ ದಿನಕ್ಕೆ ನಾಲ್ಕು ಅಥವಾ ಐದು ಬಾರಿ ಮಾತನಾಡುತ್ತಿದ್ದರು ಎಂದು ಅವರು ನೆನಪಿಸಿಕೊಂಡರು.

"ಇದು ತುಂಬಲಾರದ ನಷ್ಟ. ಅದನ್ನು ಸಹಿಸಿಕೊಂಡೇ ಬದುಕಬೇಕು. ಕುಟುಂಬದವರು ನನ್ನೊಂದಿಗಿರುವುದರಿಂದ ನಾನು ಒಂಟಿಯಾಗಿಲ್ಲ" ಎಂದು ಹೇಳಿದರು.

ಅಪಘಾತದ ನಂತರ ಪುತ್ರಿ ಮತ್ತು ಪುತ್ರ ದಿಲ್ಲಿಯಿಂದ ಮುಂಬೈಗೆ ಬಂದು ತಮ್ಮ ಆರೈಕೆ ಮಾಡುತ್ತಿದ್ದಾರೆ. ಕುಟುಂಬದವರು, ಸ್ನೇಹಿತರು ಹಾಗೂ ನೆರೆಹೊರೆಯವರ ಬೆಂಬಲವೇ ಈ ದುಃಖವನ್ನು ಎದುರಿಸಲು ನೆರವಾಗಿದೆ ಎಂದು ಅವರು ಹೇಳಿದರು.

ಕೆಲವು ದಿನಗಳಲ್ಲಿ ಅವರು ಬೆಳಿಗ್ಗೆ ವಾಯುವಿಹಾರಕ್ಕೆ ತೆರಳುತ್ತಾರೆ. ಆ ವೇಳೆ ಮಗನ ನೆನಪುಗಳು ಮರುಕಳಿಸುತ್ತವೆ. ಮುಂಬೈನಲ್ಲಿ ಇದ್ದಾಗ ಮಗ ಕೂಡ ತಮ್ಮ ಜತೆ ವಾಯುವಿಹಾರಕ್ಕೆ ಬರುತ್ತಿದ್ದ ಎಂದು ಅವರು ನೆನಪಿಸಿಕೊಂಡರು.

ಅಪಘಾತ ಸಂಭವಿಸಿ ಸುಮಾರು ಒಂದು ವರ್ಷ ಕಳೆದಿದ್ದರೂ, ಮೃತರ ಕುಟುಂಬಗಳು, ವಾಯುಯಾನ ತಜ್ಞರು ಹಾಗೂ ಮೃತಪಟ್ಟ ಪೈಲಟ್‌ಗಳ ಕುಟುಂಬದವರು ಅಂತಿಮ ತನಿಖಾ ವರದಿಗಾಗಿ ಕಾಯುತ್ತಿದ್ದಾರೆ.

ಭವಿಷ್ಯದಲ್ಲಿ ಪ್ರಕಟವಾಗುವ ತನಿಖಾ ವರದಿ ತಮ್ಮ ಮಗನ ಪರವಾಗಿರದಿದ್ದರೆ ಏನು ಮಾಡುತ್ತೀರಿ ಎಂಬ ಪ್ರಶ್ನೆಗೆ, "ಬದುಕನ್ನು ಮುಂದುವರಿಸಬೇಕಾದರೆ ಎಲ್ಲವನ್ನೂ ಮರೆತುಬಿಡಲು ಪ್ರಯತ್ನಿಸಬೇಕು. ಆದರೆ ಮಗನ ನೆನಪುಗಳನ್ನು ಮರೆಯುವುದು ಸಾಧ್ಯವಿಲ್ಲ. ಅದೇ ನನ್ನ ಪರಿಸ್ಥಿತಿ" ಎಂದು ಪುಷ್ಕರ್ ರಾಜ್ ಹೇಳಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries