HEALTH TIPS

ಚುನಾವಣೆ ಹೊಸ್ತಿಲಲ್ಲಿ ಯುಪಿ: BJPಗೆ ನುಂಗಲಾರದ ತುತ್ತಾದ ಅಯೋಧ್ಯೆ ದೇಣಿಗೆ ವಿವಾದ

 'ಭಗವಂತ ರಾಮನನ್ನು ಅಯೋಧ್ಯೆಗೆ ಯಾರು ಕರೆತಂದರೋ ಅವರನ್ನು ನಾವು ಅಧಿಕಾರಕ್ಕೆ ತರುತ್ತೇವೆ' ಎಂಬ ಘೋಷವಾಕ್ಯವನ್ನು ಮುನ್ನಲೆಗೆ ತಂದು ಉತ್ತರ ಪ್ರದೇಶದಲ್ಲಿ ಚುನಾವಣೆ ನಡೆಸಿ ಅಧಿಕಾರಕ್ಕೆ ಬಂದಿದ್ದ ಬಿಜೆಪಿ ಈಗ ಅಕ್ಷರಶಃ ಅಡಕತ್ತರಿಗೆ ಸಿಲುಕಿದೆ. ಅಯೋಧ್ಯೆ ರಾಮ ಮಂದಿರಕ್ಕೆ ನೀಡಲಾದ ದೇಣಿಗೆಯ ಹಣ ಮತ್ತು ಕಾಣಿಕೆ ದುರುಪಯೋಗದ ಆರೋಪವು ನುಂಗಲಾರದ ತುತ್ತಾಗಿ ಪರಿಣಮಿಸಿದೆ. 


ಮುಂದಿನ ವರ್ಷ ಉತ್ತರ ಪ್ರದೇಶದಲ್ಲಿ ವಿಧಾನಸಭೆ ಚುನವಣೆ ನಡೆಯಲಿದ್ದು, ವಿರೋಧ ಪಕ್ಷಗಳು ಇದೇ ವಿವಾದವನ್ನು ತಮ್ಮ ಪ್ರಚಾರದ ಪ್ರಮುಖ ವಿಷಯವಾಗಿ ಇಟ್ಟುಕೊಂಡಿವೆ. ಎಸ್‌ಐಟಿ ತನಿಖೆಯ ವರದಿ ಇನ್ನಷ್ಟೇ ಬರಬೇಕಿದ್ದು, ಅದೊಂದು ಕಣ್ಣೊರೆಸುವ ತಂತ್ರ ಎಂದು ವಿಪಕ್ಷಗಳು ದೂಷಿಸಿವೆ.

ಅಯೋಧ್ಯೆ ದೇಣಿಗೆ ಕುರಿತಂತೆ ನಿಷ್ಪಕ್ಷಪಾತ ತನಿಖೆಗೆ ಬಿಜೆಪಿಯ ಹಿರಿಯ ನಾಯಕರೇ ಬಹಿರಂಗವಾಗಿ ಒತ್ತಾಯಿಸುತ್ತಿರುವುದನ್ನು ಗಮನಿಸಿದರೆ ಅವರು ತೀವ್ರ ಮುಜುಗರಕ್ಕೊಳಗಾಗಿರುವುದರ ಸಂಕೇತವಾಗಿದೆ. ಈ ವಿಷಯ ವಿಶ್ವದಾದ್ಯಂತ ಇರುವ ಹಿಂದೂಗಳ ನಂಬಿಕೆಗೆ ಸಂಬಂಧಿಸಿದ್ದಾಗಿದೆ ಎಂದೂ ಕಳವಳ ಹೊರಹಾಕಿದ್ದಾರೆ.

ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಬಿಜೆಪಿ ನಾಯಕ ಮತ್ತು ಮಾಜಿ ಸಂಸದ ಬ್ರಿಜ್‌ಭೂಷಣ್ ಸಿಂಗ್,'ಬೆಂಕಿ ಇಲ್ಲದೇ ಹೊಗೆಯಾಡುವುದಿಲ್ಲ. ಶೀಘ್ರವೇ ಸತ್ಯ ಜನರ ಮುಂದೆ ಬರಲಿದೆ. ಅಯೋಧ್ಯೆಯಲ್ಲಿ ಆಗಿರುವ ಅಕ್ರಮ ಒಳ್ಳೆಯದಲ್ಲ. ಈ ಅಕ್ರಮದ ವಾಸನೆಯ ಹಿಂದೆ ದೊಡ್ಡ ಸತ್ಯ ಅಡಗಿದೆ' ಎಂದಿದ್ದರು.

ಕುಸ್ತಿಪಟುಗಳ ಮೇಲೆ ಲೈಂಗಿಕ ದೌರ್ಜನ್ಯದ ಆರೋಪ ಹೊತ್ತಿದ್ದ ಬ್ರಿಜ್‌ಭೂಷಣ್ ಸ್ವತಃ ತಮ್ಮ ಪಕ್ಷದ ವಿರುದ್ಧವೇ ಆರೋಪ ಮಾಡುವ ಮೂಲಕ ಅಡಕತ್ತರಿಯಲ್ಲಿ ಸಿಲುಕಿದ್ದಾರೆ. ಅಯೋಧ್ಯೆ ಅಕ್ರಮದ ಬಗ್ಗೆ ತಮಗೆ ತಿಳಿದಿದ್ದು, ಅದನ್ನು ಬಯಲು ಮಾಡಿದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂಬ ಭಯದಿಂದ ಸುಮ್ಮನಿರುವೆ ಎಂದಿದ್ದರು.

'ನೋಡಿ ನಾನು ಸತ್ಯ ಮಾತನಾಡಲಾರೆ. ಏಕೆಂದರೆ, ಸತ್ಯ ಮಾತನಾಡಿದರೆ ನಾನು ತೊಂದರೆಗೆ ಸಿಲುಕುತ್ತೇನೆ. ಅವರು ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳು. ಆ ಭಯದಿಂದ ಸತ್ಯ ಮಾತನಾಡಲಾರೆ' ಎಂದಿದ್ದರು.

ಮತ್ತೊಬ್ಬ ಹಿರಿಯ ನಾಯಕ ಮತ್ತು ಪಕ್ಷದ ವಕ್ತಾರ ರಜನೀಶ್ ಸಿಂಗ್ ಅವರು ಕೇಂದ್ರೀಯ ಸಂಸ್ಥೆಯಿಂದ ಈ ವಿಷಯದ ಬಗ್ಗೆ ತನಿಖೆ ನಡೆಸಬೇಕೆಂದು ಪ್ರಧಾನಿ ನರೇಂದ್ರ ಮೋದಿಯವರಿಗೆ ಬರೆದ ಪತ್ರವನ್ನು ಪ್ರಕಟಿಸಿದ್ದರು.

ಅಯೋಧ್ಯೆಯ ಮಾಜಿ ಸಂಸದ, ಬಿಜೆಪಿಯ ವಿನಯ್ ಕಟಿಯಾರ್ ಕೂಡ ಅಯೋಧ್ಯೆಯ ಅಕ್ರಮ ಕುರಿತ ಆರೋಪಗಳ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದರು.

ಅಯೋಧ್ಯೆಯ ಹಲವಾರು ಪ್ರಮುಖ ಮಠಾಧೀಶರು ಇದಕ್ಕೆ ದನಿಗೂಡಿಸಿದ್ದರಿಂದ ಕೇಸರಿ ಪಕ್ಷವು ಮತ್ತಷ್ಟು ಇಕ್ಕಟ್ಟಿಗೆ ಸಿಲುಕಿತು.

ಸತ್ಯ ಹೊರಬರಲು ನಿಷ್ಪಕ್ಷಪಾತ ಮತ್ತು ಪಾರದರ್ಶಕ ತನಿಖೆ ನಡೆಸಬೇಕು ಎಂದು ಅಯೋಧ್ಯೆಯ ಮಠಾಧೀಶ ಮಹಂತ್ ಕಮಲ್ ನಯನ್ ದಾಸ್ ಆಗ್ರಹಿಸಿದ್ದರು.

ರಾಮ ಜನ್ಮಭೂಮಿ-ಬಾಬರಿ ಮಸೀದಿ ಮಾಲೀಕತ್ವದ ಮೊಕದ್ದಮೆಗಳ ವಾದಿಗಳಲ್ಲಿ ಒಬ್ಬರಾದ ಜ್ಯೋತಿಷ್ ಪೀಠದ ಶಂಕರಾಚಾರ್ಯ ಅವಿಮುಕ್ತೇಶ್ವರಾನಂದ ಸಹ ರಾಮ ಮಂದಿರ ನಿರ್ಮಾಣ ಆರಂಭವಾದಾಗಿನಿಂದ" ಅಲ್ಲಿ ಅಕ್ರಮಗಳು ನಡೆಯುತ್ತಿವೆ ಎಂದು ಆರೋಪಿಸಿದ್ದು, ಪ್ರಕರಣ ಮತ್ತಷ್ಟು ಗಂಭೀರತೆ ಪಡೆಯಲು ಕಾರಣವಾಗಿದೆ.

ರಾಮ ಮಂದಿರ ಚಳವಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಅಯೋಧ್ಯೆ ಮೂಲದ ಕೇಸರಿ ನಾಯಕ ಮತ್ತು ಧರ್ಮ ಸೇನಾ ಅಧ್ಯಕ್ಷ ಸಂತೋಷ್ ದುಬೆ, ನಗದು ಜೊತೆಗೆ, ಆಭರಣ ಮತ್ತು ಭಾರತದ ವಿವಿಧ ಭಾಗಗಳಿಂದ ಹಾಗೂ ವಿದೇಶಗಳಿಂದ ತರಲಾದ ಚಿನ್ನ, ಬೆಳ್ಳಿ ಮತ್ತು ಅಷ್ಟಧಾತುಗಳಿಂದ ಮಾಡಿದ ರಾಮ ಮೂರ್ತಿಗಳು ಸಹ ಕಾಣೆಯಾಗಿವೆ ಎಂದು ಆರೋಪಿಸಿದ್ದಾರೆ.

ರಾಮ ಮಂದಿರ ಟ್ರಸ್ಟ್‌ನ ನಾಲ್ವರು ಹಿರಿಯ ಪದಾಧಿಕಾರಿಗಳನ್ನು ಹೆಸರಿಸಿ ದುಬೆ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ತಮ್ಮ ದೂರಿನ ಮೇಲೆ ಎಫ್‌ಐಆರ್ ದಾಖಲಿಸಲು ವಿಫಲವಾದರೆ ನ್ಯಾಯಾಲಯದ ಮೊರೆ ಹೋಗುವುದಾಗಿ ಹೇಳಿದ್ದಾರೆ.

ಈ ವಿಷಯದ ಬಗ್ಗೆ ವಿರೋಧ ಪಕ್ಷಗಳು ಈಗಾಗಲೇ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ಆರಂಭಿಸಿದ್ದು, ರಾಮನ ದೇಣಿಗೆ ದುರುಪಯೋಗವನ್ನು ಭಕ್ತರ'ನಂಬಿಕೆಯ ಲೂಟಿ ಎಂದು ಕರೆದಿದ್ದಾರೆ. ಆರೋಪಗಳ ತನಿಖೆಗಾಗಿ ಉತ್ತರ ಪ್ರದೇಶ ಮುಖ್ಯಮಂತ್ರಿ ರಚಿಸಿದ ವಿಶೇಷ ತನಿಖಾ ತಂಡ(ಎಸ್‌ಐಟಿ) ಕಣ್ಣೊರೆಸುವ ತಂತ್ರವಾಗಿದೆ ಎಂದು ದೂಷಿಸಿದ್ದಾರೆ. ಈ ಸಂಬಂಧ ಎಸ್‌ಐಟಿ ತನ್ನ ಮಧ್ಯಂತರ ವರದಿ ಸಲ್ಲಿಸಿದೆ. ಅಂತಿಮ ವರದಿಯನ್ನು ಇನ್ನೊಂದು ವಾರದಲ್ಲಿ ಸಲ್ಲಿಸುವ ನಿರೀಕ್ಷೆ ಇದೆ.

'ಎಸ್‌ಐಟಿ ತನಿಖೆ ಕೇವಲ ಕಣ್ಣೊರೆಸುವ ಕೆಲಸ. ಈ ಸಂಬಂಧ ಇಲ್ಲಿಯವರೆಗೆ ಯಾವುದೇ ಎಫ್‌ಐಆರ್ ದಾಖಲಾಗಿಲ್ಲ, ತನಿಖೆಯು ಟ್ರಸ್ಟ್‌ನ ಪ್ರಭಾವಿ ಪದಾಧಿಕಾರಿಗಳನ್ನು ರಕ್ಷಿಸಲು ಮತ್ತು ಕೆಳ ಹಂತದ ನೌಕರರನ್ನು ಬಲಿಪಶುಗಳನ್ನಾಗಿ ಮಾಡುವ ಪ್ರಯತ್ನವಾಗಿದೆ'ಎಂದು ಸಮಾಜವಾದಿ ಪಕ್ಷದ (ಎಸ್‌ಪಿ) ಹಿರಿಯ ನಾಯಕರೊಬ್ಬರು ಹೇಳಿದ್ದಾರೆ.

'ಇದು ರಾಮ ಮಂದಿರ ನಿರ್ಮಾಣಕ್ಕೆ ಕೊಡುಗೆ ನೀಡಿದ ಜನರ ನಂಬಿಕೆಗೆ ಮಾಡಿದ ದ್ರೋಹ. ಇದೊಂದು ಪಾಪ. ಮುಂದಿನ ಚುನಾವಣೆಯಲ್ಲಿ ಬಿಜೆಪಿ ರಾಜಕೀಯ ಬೆಲೆ ತೆರಲಿದೆ, ತಮ್ಮ ಪಕ್ಷವು ಇದನ್ನು ಖಂಡಿತವಾಗಿಯೂ ಚುನಾವಣಾ ವಿಷಯವನ್ನಾಗಿ ಮಾಡುತ್ತದೆ' ಎಂದು ಹೇಳಿದ್ದಾರೆ.

ಈ ಸಂಬಂಧ ಸ್ವಯಂಪ್ರೇರಿತ ದೂರು ದಾಖಲಿಸುವಂತೆ ಎಸ್‌ಪಿ ಅಧ್ಯಕ್ಷ ಮತ್ತು ಸಂಸದ ಅಖಿಲೇಶ್ ಯಾದವ್ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದರೆ, ನ್ಯಾಯಾಂಗ ತನಿಖೆಗೆ ಕಾಂಗ್ರೆಸ್ ಒತ್ತಾಯಿಸಿತ್ತು.

ಅಯೋಧ್ಯೆ ದೇಣಿಗೆ ದುರ್ಬಳಕೆ ವಿಷಯವನ್ನು ರಾಜಕೀಕರಣಗೊಳಿಸದಂತೆ ಒತ್ತಾಯಿಸಿದ್ದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಎಸ್‌ಐಟಿ ವರದಿ ಬರುವವರೆಗೂ ಕಾಯುವಂತೆ ರಾಮಭಕ್ತರನ್ನು ಒತ್ತಾಯಿಸಿದ್ದರು. ಅಯೋಧ್ಯೆ ಘನತೆಗೆ ಧಕ್ಕೆ ತರುವ ಕೆಲಸದಲ್ಲಿ ನಿರತರಾಗದಂತೆ ಆಗ್ರಹಿಸಿದ್ದರು. ರಾಮಭಕ್ತರ ವಿರುದ್ಧ ಗುಂಡಿನ ದಾಳಿಗೆ ಆದೇಶಿಸಿದ್ದವರು ಈಗ ಅಕ್ರಮದ ಆರೋಪ ಮಾಡುತ್ತಿದ್ದಾರೆ ಎಂದು ದೂಷಿಸಿದ್ದರು.

'ಅಯೋಧ್ಯೆ ಹಸರಿಗೆ ಕಳಂಕ ತರಬೇಡಿ. ಕೆಲವರಿಗೆ ಅಯೋಧ್ಯೆ ಅಭಿವೃದ್ಧಿ ಸಹಿಸಲಾಗುತ್ತಿಲ್ಲ' ಎಂದು ಆರೋಪಿಸಿದ್ದರು. ವಿರೋಧ ಪಕ್ಷಗಳ ಮಾತನ್ನು ನಂಬದಂತೆ ರಾಮಭಕ್ತರನ್ನು ಒತ್ತಾಯಿಸಿದ್ದರು.

ಈ ವಿವಾದವನ್ನು ಸೂಕ್ತವಾಗಿ ನಿರ್ವಹಿಸದೇ ಇದ್ದರೆ ಮುಂಬರುವ ಚುನಾವಣೆಯಲ್ಲಿ ಬಿಜೆಪಿಗೆ ತಲೆನೋವಾಗಿ ಪರಿಣಮಿಸಲಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಈ ವಿಷಯ ಇಟ್ಟುಕೊಂಡು ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕಿಸಲು ವಿರೋಧ ಪಕ್ಷಗಳು ಸಕಲ ಪ್ರಯತ್ನ ನಡೆಸಲಿವೆ ಎಂದಿದ್ದಾರೆ.

ಈ ವಿವಾದವು ವಿಪಕ್ಷಗಳಿಗೆ ರಾಜಕೀಯ ಅಸ್ತ್ರ ಒದಗಿಸಿದೆ ಎಂದು ಲಖನೌ ಮೂಲದ ರಾಜಕೀಯ ವಿಶ್ಲೇಷಕರು ಹೇಳಿದ್ದಾರೆ.

ರಾಮ ಮಂದಿರವು ಬಿಜೆಪಿಯ ಅತ್ಯಂತ ಪ್ರಮುಖ ರಾಜಕೀಯ ಮತ್ತು ಸೈದ್ಧಾಂತಿಕ ಸಾಧನೆಯಾಗಿದ್ದು, ದೇಗುಲ ಕುರಿತಾದ ಯಾವುದೇ ವಿವಾದವು ಗಮನಾರ್ಹ ರಾಜಕೀಯ ಪರಿಣಾಮ ಬೀರಲಿದೆ ಎಂದೂ ಅವರು ಹೇಳಿದ್ದಾರೆ.

ರಾಮ ಮಂದಿರ ಟ್ರಸ್ಟ್‌ನಲ್ಲಿ ಕೆಲಸ ಮಾಡುವ ಹಲವು ಮಂದಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನಂಟು ಹೊಂದಿರುವವರೇ ಆಗಿದ್ದು, ಈ ಸನ್ನಿವೇಶವನ್ನು ಆರ್‌ಎಸ್‌ಎಸ್ ಸಹ ಅತ್ಯಂತ ನಿಕಟವಾಗಿ ಮೇಲ್ವಿಚಾರಣೆ ನಡೆಸುತ್ತಿದ್ದು, ದೇಗುಲದ ಆಡಳಿತ ಮಂಡಳಿಯಿಂದ ವರದಿ ಕೇಳಿದೆ.

ವಿಧಾನಸಭೆ ಚುನಾವಣೆಯ ಸಮಯ ಹತ್ತಿರವಾಗುತ್ತಿದ್ದು, ವಿರೋಧ ಪಕ್ಷಗಳು ಈ ವಿವಾದವನ್ನು ದೊಡ್ಡ ಅಸ್ತ್ರವಾಗಿ ಬಳಸಿಕೊಳ್ಳಲು ನಿರ್ಧರಿಸಿವೆ. ಹಾಗಾಗಿ, ಚುನಾವಣೆ ಮೇಲೆ ಇದರ ಪರಿಣಾಮ ಹೇಗಿರಲಿದೆ ಎಂಬುದನ್ನು ಕಾದುನೋಡಬೇಕಿದೆ. 










ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries