ನವದೆಹಲಿ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ದೇಶದ ಮೂಲೆಮೂಲೆಗಳಿಂದ ಕೋಟ್ಯಂತರ ಭಕ್ತರು ಪಕ್ಷಾತೀತವಾಗಿ ಶ್ರದ್ಧೆ, ನಂಬಿಕೆಯಿಂದ ತಮ್ಮ ಪರಿಶ್ರಮದ ಹಣವನ್ನು ದೇಣಿಗೆಯಾಗಿ ನೀಡಿರುವುದದನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದು, ರಾಮನ ಹೆಸರಿನಲ್ಲಿ ಅಧಿಕಾರಕ್ಕೆ ಬಿಜೆಪಿಯವರು ರಾಮನ ಹುಂಡಿ ಹಣ ದೋಚುತ್ತಿರುವುದು ಖಂಡನೀಯ ಎಂದು ಎಐಸಿಸಿ ಎಸ್.ಸಿ ವಿಭಾಗದ ರಾಷ್ಟ್ರೀಯ ಸಂಯೋಜಕ ಹಾಗೂ ಮಹಾರಾಷ್ಟ್ರ ಉಸ್ತುವಾರಿ ಡಾ.ಆನಂದ ಕುಮಾರ್ ಟೀಕಿಸಿದರು.
ದೇಶದ ಅಸಂಖ್ಯಾತ ಭಕ್ತರ ಭಾವನೆಗಳಿಗೆ ಆಘಾತವಾಗಿದ್ದರೂ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ನಾಯಕರು ಮೌನವಾಗಿದ್ದಾರೆ. ಇದು 'ಮೌನಂ ಸಮ್ಮತಿ' ಲಕ್ಷಣವೇ? ಬೇರೆ ಧರ್ಮದ ಯಾವುದಾದರೂ ದೇವಸ್ಥಾನದಲ್ಲಿ ಅಕ್ರಮ ನಡೆದಿದ್ದರೆ ಬಿಜೆಪಿ ನಾಯಕರು ದೇಶಕ್ಕೆ ಕೊಳ್ಳಿ ಇಟ್ಟು ದಂಗೆ ಎಬ್ಬಿಸುತ್ತಿದ್ದರು. ರಾಮ ರಾಜ್ಯ ಮಾಡುವುದಾಗಿ ಅಧಿಕಾರಕ್ಕೆ ಬಂದ ಬಿಜೆಪಿಯವರು ಲೂಟಿ ರಾಜ್ಯ ಮಾಡಿದ್ದಾರೆ. ರಾಜಕಾರಣದಲ್ಲಿ ಧರ್ಮ ಇರಬೇಕು ಎಂದು ಸದಾ ಕಾಲ ಪ್ರತಿಪಾದಿಸುತ್ತಾ ಬಂದ ದೇಶದಲ್ಲಿ 'ಧರ್ಮವನ್ನೇ ಮುಂದಿಟ್ಟುಕೊಂಡು ರಾಜಕಾರಣ ಮಾಡಿ ಇದೀಗ ಈಸ್ಟ್ ಇಂಡಿಯಾ ಕಂಪೆನಿಯಂತೆ ದೇಶವನ್ನು ಕೊಳ್ಳೆ ಹೊಡೆಯುತ್ತಿದ್ದಾರೆ. ದೇವರ ನಿಧಿಯ ನಿರ್ವಹಣೆಯಲ್ಲಿ ಪಾರದರ್ಶಕತೆ ಕಾಪಾಡದೇ, ಉತ್ತರದಾಯಿತ್ವವೂ ಇಲ್ಲದೇ ಸಾರ್ವಜನಿಕರಿಗೆ ವಿಶ್ವಾಸ ಘಾತಕ ಕೆಲಸ ಮಾಡಿದೆ ಎಂದು ಆರೋಪಿಸಿದರು. ರಾಮಮಂದಿರ ನಿಧಿಯ ಬಳಕೆ ಮತ್ತು ಲೆಕ್ಕಪತ್ರಗಳ ಕುರಿತ ಜನ ಸಾಮಾನ್ಯರ ಆಕ್ಷೇಪಗಳಿಗೆ ಈವರೆಗೆ ಸ್ಪಂದನೆ ದೊರೆತಿಲ್ಲ. ರಾಮನ ಹೆಸರಿನಲ್ಲಿ ಕಳ್ಳಾಟವಾಡುತ್ತಿರುವವರ ಮೇಲೆ ಬುಲ್ಡೋಜರ್ ಹತ್ತಿಸಬೇಕು. ಧರ್ಮ ರಕ್ಷಣೆಗೆ ಯಾಕೆ ಬಿಜೆಪಿ ಮುಂದಾಗುತ್ತಿಲ್ಲ. ರಾಮ ಇವರ ಪಾಲಿಗೆ ದೇವರಲ್ಲ. ವೋಟ್ ಬ್ಯಾಂಕ್ ರಾಜಕಾರಣದ ಗುರಾಣಿಯಾಗಿದ್ದಾರೆ. ಧರ್ಮ, ಭಕ್ತಿ, ಭಾವವೆಲ್ಲವೂ ಭೋಗಸ್ ಆಗಿದೆ' ಎಂದು ಆಕ್ಷೇಪಿಸಿದರು.
ದೇಣಿಗೆ ಸಂಗ್ರಹಿಸುವ ಪ್ರತಿಯೊಂದು ಸಂಸ್ಥೆಯೂ ನಿಯಮಿತ ಲೆಕ್ಕಪರಿಶೋಧನೆ, ವಾರ್ಷಿಕ ಹಣಕಾಸು ವರದಿಗಳ ಪ್ರಕಟಣೆ ಮತ್ತು ಸಾರ್ವಜನಿಕರಿಗೆ ಅಗತ್ಯ ಮಾಹಿತಿಯನ್ನು ಲಭ್ಯವಾಗುವಂತೆ ಮಾಡುತ್ತಿವೆ. ಆದರೆ ಅಯೋಧ್ಯೆಯಲ್ಲಿ ಇದಕ್ಕೆ ವ್ಯತಿರಿಕ್ತವಾದ ನಡವಳಿಕೆ ಇದೆ. ಹಣಕಾಸಿನ ಪಾರದರ್ಶಕತೆ ಕಾಪಾಡುವುದು ಸಮಾಜದ ಹಿತದೃಷ್ಟಿಯಿಂದ ಅಗತ್ಯ. ನಿಧಿಯ ಬಳಕೆಯ ಬಗ್ಗೆ ಎದ್ದಿರುವ ಅನುಮಾನಗಳಿಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡಲೇ ಸ್ಪಷ್ಟನೆ ನೀಡಬೇಕು. ಅಗತ್ಯವಿದ್ದರೆ ಸ್ವತಂತ್ರ ಲೆಕ್ಕಪರಿಶೋಧನೆ ನಡೆಸಬೇಕು. ಭಕ್ತರ ನಂಬಿಕೆ ಅಮೂಲ್ಯವಾದದ್ದು. ಅದನ್ನು ಕಾಪಾಡದೇ ಭಾವನೆಗಳ ಜೊತೆ ಚೆಲ್ಲಾಟವಾಡುತ್ತಿರುವುದು ಖಂಡನೀಯ ಎಂದು ಡಾ. ಆನಂದ ಕುಮಾರ್ ಹೇಳಿದರು.

