ನವದೆಹಲಿ: ಕೇಂದ್ರದ ಮಂತ್ರಿ ಪರಿಷತ್ ಪುನಾರಚನೆ ವದಂತಿಗಳ ಬೆನ್ನಲ್ಲೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಗುರುವಾರ ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾಗಿದ್ದಾರೆ. ರಾಷ್ಟ್ರಪತಿ ಕಚೇರಿಯು ಭೇಟಿಯ ಚಿತ್ರವನ್ನು ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದೆ.
'ಕೇಂದ್ರ ಗೃಹ ವ್ಯವಹಾರ ಮತ್ತು ಸಹಕಾರ ಸಚಿವ ಅಮಿತ್ ಶಾ ಅವರು ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾದರು' ಎಂದು ಬರೆಯಲಾಗಿದೆ.
ಈ ಭೇಟಿಯು ಕೇಂದ್ರದ ಮಂತ್ರಿ ಪರಿಷತ್ ಪುನಾರಚನೆಯ ಊಹಾಪೋಹಕ್ಕೆ ಇಂಬು ನೀಡಿದ್ದು, ಶೀಘ್ರ ಆಗಲಿದೆಯೇ ಎಂಬ ಕುತೂಹಲ ಹುಟ್ಟು ಹಾಕಿದೆ.
ತಮ್ಮ ರಾಜ್ಯಸಭಾ ಸ್ಥಾನದ ಅವಧಿ ಮುಗಿದ ಬಳಿಕ ಕೇಂದ್ರ ಸಚಿವ ಜಾರ್ಜ್ ಕುರಿಯನ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಕುರಿಯನ್ ಅವರು ಕೇಂದ್ರದ ಅಲ್ಪಸಂಖ್ಯಾತ ಸಚಿವಾಲಯ ಮತ್ತು ಮೀನುಗಾರಿಕೆ ಮತ್ತು ಪಶು ಸಂಗೋಪನೆ ಖಾತೆಯ ರಾಜ್ಯ ಸಚಿವರಾಗಿದ್ದರು.
ಜೂನ್ 21ರಂದು ಕುರಿಯನ್ ಅವರ ರಾಜ್ಯಸಭಾ ಸ್ಥಾನದ ಅವಧಿ ಅಂತ್ಯಗೊಂಡಿತ್ತು. ಅವರನ್ನು ಮತ್ತೆ ಆಯ್ಕೆ ಮಾಡಲು ಬಿಜೆಪಿ ಆಸಕ್ತಿ ತೋರಿಸಲಿಲ್ಲ.
ರೈಲ್ವೆ ಖಾತೆ ರಾಜ್ಯ ಸಚಿವರಾದ ರವನೀತ್ ಸಿಂಗ್ ರಾಜ್ಯಸಭ ಸ್ಥಾನದ ಅವಧಿ ಸಹ ಮುಗಿದಿದ್ದು, ಅವರನ್ನೂ ಮರುಆಯ್ಕೆಗೆ ಪರಿಗಣಿಸಿಲ್ಲ.
ರಾಜಸ್ಥಾನದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದ ಸಿಂಗ್, ಆಹಾರ ಸಂಸ್ಕರಣಾ ಖಾತೆಯ ರಾಜ್ಯ ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದಾರೆ.
ಕೆಲ ಕೇಂದ್ರ ಸಚಿವರಿಗೆ ಅವರ ರಾಜ್ಯಗಳ ಪ್ರಮುಖ ಸಾಂಸ್ಥಿಕ ಹೊಣೆ ನೀಡಲಾಗಿದ್ದು, ಇದು ಮಂತ್ರಿ ಪರಿಷತ್ ಪುನಾರಚನೆ ವದಂತಿಗೆ ಕಾರಣವಾಗಿತ್ತು.
ಮೇ 28 ರಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಅವರು, ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳು ಹಾಗೂ ಕಾರ್ಪೊರೇಟ್ ವ್ಯವಹಾರಗಳ ರಾಜ್ಯ ಸಚಿವ ಹರ್ಷ್ ಮಲ್ಹೋತ್ರಾ ಅವರನ್ನು ದೆಹಲಿ ಬಿಜೆಪಿ ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದರು. ಕಳೆದ ವರ್ಷ ಡಿಸೆಂಬರ್‌ನಲ್ಲಿ ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಅವರನ್ನು ಬಿಜೆಪಿಯ ಉತ್ತರ ಪ್ರದೇಶ ಘಟಕದ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿತ್ತು.


