ನವದೆಹಲಿ: ಅಯೋಧ್ಯೆಯ ರಾಮ ಮಂದಿರಕ್ಕೆ ಭಕ್ತರು ನೀಡಿದ್ದ ದೇಣಿಗೆಯ ಹಣ ಮತ್ತು ಕಾಣಿಕೆಗಳ ದುರುಪಯೋಗದ ಬಗ್ಗೆ ಎಫ್‌ಐಆರ್ ದಾಖಲಿಸಲು ಮತ್ತು ನ್ಯಾಯಯುತ ಹಾಗೂ ಕಾಲಮಿತಿಯ ತನಿಖೆ ನಡೆಸಲು ಕೋರಿ ಸಲ್ಲಿಸಿರುವ ಅರ್ಜಿಯನ್ನು ಜೂನ್ 29 ರಂದು ತನ್ನ ಪೀಠದ ಮುಂದೆ ಉಲ್ಲೇಖಿಸುವಂತೆ ಸುಪ್ರೀಂ ಕೋರ್ಟ್ ಗುರುವಾರ ಅರ್ಜಿದಾರರಿಗೆ ಸೂಚಿಸಿದೆ.
ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನ ಮತ್ತು ಜೋಯ್ಮಲ್ಯ ಬಾಗ್ಚಿ ಅವರ ಪೀಠದ ಮುಂದೆ ಈ ಅರ್ಜಿಯ ತುರ್ತು ವಿಚಾರಣೆಗೆ ಕೋರಲಾಗಿತ್ತು.
ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ವ್ಯವಹಾರ ಮತ್ತು ಆಡಳಿತಕ್ಕೆ ಸಂಬಂಧಿಸಿದ ಆಪಾದಿತ ಆರ್ಥಿಕ ಅಕ್ರಮ, ಇತರ ಅಕ್ರಮಗಳನ್ನು ಸಿಬಿಐ ನೇತೃತ್ವದ ಬಹು ಶಿಸ್ತೀಯ ವಿಶೇಷ ತನಿಖಾ ತಂಡ(ಎಸ್‌ಐಟಿ) ಮೂಲಕ ತನಿಖೆ ನಡೆಸಬೇಕು ಎಂದು ವಕೀಲರಾದ ಅಜಯ್ ಕುಮಾರ್ ರಾಯ್ ಮತ್ತು ದಿನೇಶ್ ಕುಮಾರ್ ಯಾದವ್ ಸಲ್ಲಿಸಿದ ಅರ್ಜಿಯಲ್ಲಿ ಕೋರಲಾಗಿತ್ತು.
ಗುರುವಾರ, ಅರ್ಜಿದಾರರಲ್ಲಿ ಒಬ್ಬರು ಈ ವಿಷಯವನ್ನು ಪ್ರಸ್ತಾಪಿಸಿದ್ದರು. ಇದು ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ(ಪಿಐಎಲ್) ಮತ್ತು ಇದು ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ಗೆ ಸಂಬಂಧಿಸಿದೆ. ಹಾಗಾಗಿ, ತುರ್ತು ವಿಚಾರಣೆ ನಡೆಸಬೇಕು ಎಂದು ವಾದಿಸಿದ್ದರು.
ವಾದ ಆಲಿಸಿದ ನ್ಯಾಯಾಲಯ ಜೂನ್ 29ರಂದು ವಿಚಾರಣೆಗೆ ಪೀಠದ ಮುಂದೆ ಅರ್ಜಿ ಸಲ್ಲಿಸುವಂತೆ ಸೂಚಿಸಿತು. ಅರ್ಜಿಯಲ್ಲಿ ಯಾವುದೇ ನ್ಯೂನತೆ ಇಲ್ಲದಿದ್ದರೆ, ರಿಜಿಸ್ಟ್ರಿಯು ಅಂದೇ ವಿಚಾರಣೆಗೆ ಪಟ್ಟಿ ಮಾಡುತ್ತದೆ ಎಂದು ಹೇಳಿತು.
ರಾಮ ಮಂದಿರ ಟ್ರಸ್ಟ್‌ಗೆ ನೀಡಲಾದ ದೇಣಿಗೆ ಹಣ ಮತ್ತು ಕಾಣಿಕೆ ದುರುಪಯೋಗದ ಆರೋಪದ ಹಿನ್ನೆಲೆಯಲ್ಲಿ ತನಿಖೆಗೆ ಉತ್ತರ ಪ್ರದೇಶ ಸರ್ಕಾರ ಎಸ್‌ಐಟಿ ರಚಿಸಿದೆ. ಈ ವಿಷಯದ ಕುರಿತಂತೆ ವಿಪಕ್ಷಗಳ ಜೊತೆಗೆ ಆಡಳಿತ ಪಕ್ಷದ ನಾಯಕರೇ ತೀವ್ರ ಆಕ್ರೋಶ ಹೊರ ಹಾಕಿದ್ದಾರೆ.

