ಪೂರಿ, ಪಕೋಡ ಅಥವಾ ಬಜ್ಜಿ ಕರಿದ ನಂತರ ಉಳಿದ ಎಣ್ಣೆ ಏನು ಮಾಡುವುದು ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತದೆ. ಹೆಚ್ಚಿನವರು ಹಣ ಉಳಿಸುವ ಉದ್ದೇಶದಿಂದ ಆ ಎಣ್ಣೆ ಮರುಬಳಕೆ ಮಾಡುತ್ತಾರೆ. ಆದರೆ ಬಳಸಿದ ಎಣ್ಣೆ ಯಾವಾಗ ವಿಷವಾಗುತ್ತದೆ ಮತ್ತು ಯಾವಾಗ ಎಸೆಯಬೇಕು ಎಂಬ ಮಾಹಿತಿ ಇಲ್ಲಿದೆ.
ಕ್ಯಾನ್ಸರ್ನಂತಹ ರೋಗಗಳಿಗೂ ಕಾರಣ
ನಮ್ಮಲ್ಲಿ ಹೆಚ್ಚಿನ ಮನೆಗಳಲ್ಲಿ ಎಣ್ಣೆಯನ್ನು ಒಮ್ಮೆ ಬಳಸಿದ ನಂತರ ಅದನ್ನು ಎಸೆಯಲು ಮನಸ್ಸು ಬರುವುದಿಲ್ಲ. ಅದನ್ನು ಮುಂದಿನ ಬಾರಿ ಅಡುಗೆಗೆ ಬಳಸಲು ಎತ್ತಿಡಲಾಗುತ್ತದೆ. ಮೇಲ್ನೋಟಕ್ಕೆ ಇದು ಹಣ ಉಳಿಸುವ ದಾರಿಯಂತೆ ಕಂಡರೂ, ವಾಸ್ತವದಲ್ಲಿ ಇದು ಆರೋಗ್ಯಕ್ಕೆ ಮಾರಕ. ತಜ್ಞರ ಪ್ರಕಾರ, ಎಣ್ಣೆಯನ್ನು ಪದೇ ಪದೇ ಹೆಚ್ಚಿನ ತಾಪಮಾನದಲ್ಲಿ ಕಾಯಿಸಿದಾಗ ಅದರಲ್ಲಿ ರಾಸಾಯನಿಕ ಬದಲಾವಣೆಗಳು ಉಂಟಾಗುತ್ತವೆ. ಇದು ಆಕ್ಸಿಡೇಶನ್ ಪ್ರಕ್ರಿಯೆಗೆ ಒಳಗಾಗಿ ಹಾನಿಕಾರಕ ಅಂಶಗಳನ್ನು ಉತ್ಪತ್ತಿ ಮಾಡುತ್ತದೆ, ಇದು ಕ್ಯಾನ್ಸರ್ನಂತಹ ರೋಗಗಳಿಗೂ ಕಾರಣವಾಗಬಹುದು.
ಉಳಿದ ಎಣ್ಣೆ ಎಷ್ಟು ದಿನ ಸುರಕ್ಷಿತ?
ಒಂದು ವೇಳೆ ನೀವು ಉಳಿದ ಎಣ್ಣೆಯನ್ನು ಬಳಸಲೇಬೇಕೆಂದಿದ್ದರೆ, ಅದನ್ನು ಕೇವಲ 1 ರಿಂದ 2 ದಿನಗಳ ಒಳಗಾಗಿ ಬಳಸಿ ಮುಗಿಸಬೇಕು. ಅದಕ್ಕಿಂತ ಹೆಚ್ಚು ದಿನ ಇಡುವುದು ಅಪಾಯಕಾರಿ. ಅಲ್ಲದೆ, ಒಂದೇ ಎಣ್ಣೆಯನ್ನು ಕೇವಲ ಒಂದು ಬಾರಿ ಮಾತ್ರ ಮರುಬಳಕೆ ಮಾಡಲು ತಜ್ಞರು ಶಿಫಾರಸು ಮಾಡುತ್ತಾರೆ. ಪ್ರತಿ ಬಾರಿ ಎಣ್ಣೆಯನ್ನು ಕಾಯಿಸಿದಾಗಲೂ ಅದರ ಗುಣಮಟ್ಟ ಕುಸಿಯುತ್ತಾ ಹೋಗುತ್ತದೆ.
ಸಂಗ್ರಹಿಸುವ ಸರಿಯಾದ ವಿಧಾನ
ಎಣ್ಣೆ ಉಳಿದ ತಕ್ಷಣ ಅದನ್ನು ಮೊದಲು ಚೆನ್ನಾಗಿ ಸೋಸಿಕೊಳ್ಳಿ. ಎಣ್ಣೆಯಲ್ಲಿ ಉಳಿದಿರುವ ಆಹಾರದ ಕಣಗಳು ಅದನ್ನು ಬೇಗನೆ ಹಾಳು ಮಾಡುತ್ತವೆ. ನಂತರ ಅದನ್ನು ಗಾಳಿಯಾಡದ (ಂiಡಿಣighಣ) ಒಣಗಿದ ಡಬ್ಬಿಯಲ್ಲಿ ತುಂಬಿಸಿ, ಬಿಸಿಲು ಮತ್ತು ತೇವಾಂಶ ಇಲ್ಲದ ಕಡೆ ಇಡಿ. ಕಡಾಯಿಯಲ್ಲೇ ಎಣ್ಣೆಯನ್ನು ಬಿಡುವುದು ಸರಿಯಲ್ಲ, ಏಕೆಂದರೆ ಇದು ಧೂಳು ಮತ್ತು ಗಾಳಿಯ ಸಂಪರ್ಕಕ್ಕೆ ಬಂದು ಬೇಗನೆ ಹಾಳಾಗುತ್ತದೆ.
ಎಣ್ಣೆ ಹಾಳಾಗಿದೆ ಎಂದು ಗುರುತಿಸುವುದು ಹೇಗೆ?
ಕೆಲವು ಸಂಕೇತಗಳ ಮೂಲಕ ಎಣ್ಣೆ ಇನ್ನು ಬಳಕೆಗೆ ಯೋಗ್ಯವಲ್ಲ ಎಂದು ತಿಳಿಯಬಹುದು
ಎಣ್ಣೆಯಿಂದ ಕೆಟ್ಟ ಅಥವಾ ಘಾಟು ವಾಸನೆ ಬರುತ್ತಿದ್ದರೆ.
ಎಣ್ಣೆಯ ಬಣ್ಣ ಸಾಮಾನ್ಯಕ್ಕಿಂತ ಹೆಚ್ಚು ಕಪ್ಪಾಗಿದ್ದರೆ.
ಎಣ್ಣೆಯನ್ನು ಕಾಯಿಸುವಾಗ ಅತಿಯಾಗಿ ನೊರೆ ಬರುತ್ತಿದ್ದರೆ.
ಎಣ್ಣೆಯು ಅತಿಯಾಗಿ ದಪ್ಪವಾಗಿದ್ದರೆ.
ಇಂತಹ ಲಕ್ಷಣಗಳು ಕಂಡುಬಂದಲ್ಲಿ ಆ ಎಣ್ಣೆಯನ್ನು ಮರುಬಳಕೆ ಮಾಡದೆ ತಕ್ಷಣ ಎಸೆಯುವುದು ನಿಮ್ಮ ಮತ್ತು ನಿಮ್ಮ ಕುಟುಂಬದ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು. ಅಡುಗೆಗೆ ಬೇಕಾದಷ್ಟು ಮಾತ್ರ ಎಣ್ಣೆ ಬಳಸುವುದು ಇವೆಲ್ಲದಕ್ಕಿಂತ ಉತ್ತಮವಾದ ಮಾರ್ಗವಾಗಿದೆ.

