ನವದೆಹಲಿ: ಸರ್ಕಾರೇತರ ಸಂಸ್ಥೆಗಳು (ಎನ್‌ಜಿಒ) ವಿದೇಶಗಳಿಂದ ದೇಣಿಗೆ ಪಡೆಯುವಾಗ ಪಾಲಿಸಬೇಕಾದ ನಿಯಮಗಳನ್ನು ಕೇಂದ್ರ ಸರ್ಕಾರವು ಮತ್ತಷ್ಟು ಬಿಗಿಗೊಳಿಸಿದ್ದು, ದೇಣಿಗೆ ಹಣವನ್ನು ಮತಾಂತರಕ್ಕೆ ಸಂಬಂಧಿಸಿದ ಚಟುವಟಿಕೆಗಳಿಗೆ ಬಳಸುವುದಕ್ಕೆ ಕಡಿವಾಣ ಹಾಕಿದೆ.
ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯವು (ಎಂಎಚ್‌ಎ) ರೂಪಿಸಿ ರುವ ಹೊಸ ನಿಯಮಗಳ ಪ್ರಕಾರ, ಇನ್ನು ಮುಂದೆ ಎನ್‌ಜಿಒಗಳು ವಿದೇಶಗಳಿಂದ ಪಡೆಯುವ ದೇಣಿಗೆಯು ಧಾರ್ಮಿಕ, ಸಾಂಸ್ಕೃತಿಕ, ಆರ್ಥಿಕ, ಶೈಕ್ಷಣಿಕ ಮತ್ತು ಸಾಮಾಜಿಕ ಉದ್ದೇಶದ 105 ಚಟುವಟಿಕೆ ಗಳಿಗಷ್ಟೇ ಸೀಮಿತವಾಗಿರಲಿದೆ.
ಎನ್‌ಜಿಒಗಳ ಚಟುವಟಿಕೆ ಮೇಲಿನ ಹಿಡಿತವನ್ನು ಇನ್ನಷ್ಟು ಬಲಗೊಳಿಸಲು ಕೇಂದ್ರ ಸರ್ಕಾರಕ್ಕೆ ಅವಕಾಶ ಕಲ್ಪಿಸುವ 'ವಿದೇಶಿ ದೇಣಿಗೆ (ನಿಯಂತ್ರಣ) ತಿದ್ದುಪಡಿ ನಿಯಮಗಳು 2026' ಅನ್ನು ಗೆಜೆಟ್‌ನಲ್ಲಿ ಸೋಮವಾರ ಪ್ರಕಟಿಸಲಾಗಿದೆ.
ಭಾರತೀಯ ಮೂಲದವರನ್ನು ಹೊರತುಪಡಿಸಿ ವಿದೇಶಿ ಪ್ರಜೆಗಳನ್ನು ಪ್ರಮುಖ ಕಾರ್ಯನಿರ್ವಾಹಕರನ್ನಾಗಿ ಹೊಂದಿರುವ ಯಾವುದೇ ಸಂಸ್ಥೆಯು ವಿದೇಶಿ ದೇಣಿಗೆ ಸ್ವೀಕರಿಸಲು ಕೋರುವ ಅನುಮತಿಯನ್ನು 'ಸಾಮಾನ್ಯವಾಗಿ ಪರಿಗಣಿಸಲಾಗುವುದಿಲ್ಲ' ಎಂದು ಸ್ಪಷ್ಟಪಡಿಸಲಾಗಿದೆ. ಆದಾಗ್ಯೂ, ಕೆಲವು ಸಂದರ್ಭಗಳಲ್ಲಿ ದೇಣಿಗೆ ಪಡೆಯಲು ಕೇಂದ್ರ ಸರ್ಕಾರವು ವಿಶೇಷ ಅನುಮತಿ ನೀಡಬಹುದು.
ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆಯಡಿ (ಎಎಫ್‌ಸಿಆರ್‌ಎ) ವಿದೇಶಗಳಿಂದ ದೇಣಿಗೆ ಬಯಸುವ ಪ್ರತಿಯೊಂದು ಸಂಸ್ಥೆಯೂ ಗೃಹ ಸಚಿವಾಲಯದ ನೋಂದಣಿ ಅಥವಾ ಪೂರ್ವಾನುಮತಿ ಹೊಂದಿರಬೇಕು.
ವಿದೇಶಿ ದೇಣಿಗೆಗಳನ್ನು ಪಡೆಯಲು ಅನುಮತಿಸಲಾದ 105 ಕಾರ್ಯಚಟುವಟಿಕೆಗಳ ಪಟ್ಟಿಯಿಂದ ಮಾತ್ರ ಇನ್ನು ಮುಂದೆ ಎನ್‌ಜಿಒಗಳು ತನ್ನ ಚಟುವಟಿಕೆಯನ್ನು ಆಯ್ಕೆ ಮಾಡಿಕೊಳ್ಳಬೇಕು. ಧಾರ್ಮಿಕ ಉದ್ದೇಶ ಗಳ ಅಡಿ 16, ಸಾಂಸ್ಕೃತಿಕ ಉದ್ದೇಶದ 18, ಆರ್ಥಿಕ ಉದ್ದೇಶದ 19, ಶೈಕ್ಷಣಿಕ ಉದ್ದೇಶದ 22 ಮತ್ತು ಸಾಮಾಜಿಕ ಕ್ಷೇತ್ರಕ್ಕೆ ಸಂಬಂಧಿಸಿದ 30 ಕಾರ್ಯ ಚಟುವಟಿಕೆಗಳನ್ನು ಪಟ್ಟಿ ಮಾಡಲಾಗಿದೆ.
ಧಾರ್ಮಿಕ ಉದ್ದೇಶಗಳ ಅಡಿಯಲ್ಲಿ- ಧಾರ್ಮಿಕ ತಾಣಗಳ ನಿರ್ಮಾಣ, ನವೀಕರಣ ಮತ್ತು ನಿರ್ವಹಣೆ, ಭಕ್ತಿ ಗೀತೆಗಳನ್ನು ಉತ್ತೇಜಿಸಲು ಧಾರ್ಮಿಕ ಶಿಕ್ಷಣ ನೀಡುವುದು, ಅಂತರ್ ಧರ್ಮೀಯ ಸಂವಾದ ಆಯೋಜನೆ, ಸ್ಮಶಾನಗಳ ನಿರ್ಮಾಣ ಮತ್ತು ನಿರ್ವಹಣೆ, ಪವಿತ್ರ ಸ್ಮಾರಕಗಳು ಮತ್ತು ಪ್ರಾರ್ಥನಾ ಮಂದಿರಗಳ ನಿರ್ವಹಣೆ ಮತ್ತು ರಕ್ಷಣೆಗೆ ದೇಣಿಗೆ ಸ್ವೀಕರಿಸಲು ಅನುಮತಿ ಪಡೆಯಬಹುದು.
ಆದರೆ ಧಾರ್ಮಿಕ ಉದ್ದೇಶಗಳ ಅಡಿಯಲ್ಲಿ ಮೂರು ಚಟುವಟಿಕೆಗಳನ್ನು ಅಂದರೆ- ಧಾರ್ಮಿಕ ತತ್ವಶಾಸ್ತ್ರದ ದಾಖಲೀಕರಣ ಮತ್ತು ಸಂರಕ್ಷಣೆಯಲ್ಲಿ ತೊಡಗಿರುವ ಸಂಸ್ಥೆಗಳ ನಿರ್ವಹಣೆ, ಧಾರ್ಮಿಕ ಶಿಕ್ಷಣ ನೀಡುವುದು ಹಾಗೂ ಸ್ಥಳೀಯ ನಂಬಿಕೆಗಳ ಸಂರಕ್ಷಣೆಯ ಕೆಲಸವನ್ನು 'ಮತಾಂತರವನ್ನು ಹೊರತುಪಡಿಸಿ' ಕೈಗೊಳ್ಳಬೇಕು ಎಂದು ನಿಯಮವು ಸೂಚಿಸುತ್ತದೆ.
ಸಾಂಸ್ಕೃತಿಕ ಉದ್ದೇಶಗಳಡಿ ದೃಶ್ಯಕಲೆ, ಶಿಲ್ಪಕಲೆ, ಸಿನಿಮಾ, ಛಾಯಾಗ್ರಹಣ ಮತ್ತು ರಾಜಕೀಯ ಹಾಗೂ ಸೈದ್ಧಾಂತಿಕ ವಿಷಯಗಳನ್ನು ಹೊರತುಪಡಿಸಿ ಭಾರತೀಯ ಸಂಪ್ರದಾಯಗಳಿಂದ ಪ್ರೇರಿತವಾದ ಸಮಕಾಲೀನ ಕಲೆಗಳ ಪ್ರಚಾರಕ್ಕಾಗಿ ವಿದೇಶಿ ದೇಣಿಗೆ ಬಳಸಬಹುದು. ಭರತನಾಟ್ಯ, ಕಥಕ್, ಒಡಿಸ್ಸಿ, ಕರ್ನಾಟಕ ಸಂಗೀತ, ಹಿಂದೂಸ್ತಾನಿ ಸಂಗೀತ ಮತ್ತು ಯಕ್ಷಗಾನ ಕಲೆಗಳಿಗೆ ಬೆಂಬಲ ನೀಡಲೂ ದೇಣಿಗೆ ಪಡೆಯಬಹುದು.
ಪ್ರಮುಖ ಅಂಶಗಳು
-ವಿದೇಶಿ ದೇಣಿಗೆ ಸಂಗ್ರಹಿಸಲು ಪರವಾನಗಿ ಪಡೆಯಲು ಬಯಸುವ ಎನ್‌ಜಿಒಗಳು ಹಣವನ್ನು ಯಾವ ಉದ್ದೇಶಕ್ಕೆ ಖರ್ಚು ಮಾಡಲಾಗುವುದು ಮತ್ತು ಯಾವ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶದಲ್ಲಿ ಖರ್ಚು ಮಾಡಲಾಗುವುದು ಎಂಬುದನ್ನು ಸ್ಪಷ್ಟವಾಗಿ ತಿಳಿಸಬೇಕು
- ಈಗಾಗಲೇ ಎಫ್‌ಸಿಆರ್‌ಎ ಪರವಾನಗಿ ಹೊಂದಿರುವ ಎನ್‌ಜಿಒಗಳು ತಮ್ಮ ಕಾರ್ಯಚಟುವಟಿಕೆಗಳ ವಿವರಗಳನ್ನು ಕೇಂದ್ರ ಸರ್ಕಾರಕ್ಕೆ ಒಂದು ವರ್ಷದೊಳಗೆ ಕಡ್ಡಾಯವಾಗಿ ಸಲ್ಲಿಸಬೇಕು
- ವಲಸೆ ಕಾರ್ಮಿಕರು, ನಿರಾಶ್ರಿತರು ಮತ್ತು ಅಲೆಮಾರಿ ಬುಡಕಟ್ಟು ಜನಾಂಗದವರ ಮಕ್ಕಳ ಶಿಕ್ಷಣ ಹಾಗೂ ಶಾಲೆಗಳಲ್ಲಿ ಮೌಲ್ಯಾಧಾರಿತ ಮತ್ತು ನೈತಿಕ ಶಿಕ್ಷಣ ನೀಡಲು ದೇಣಿಗೆ ಸಂಗ್ರಹಿಸಬಹುದು
- ಎನ್‌ಜಿಒಗಳು ಎಫ್‌ಸಿಆರ್‌ಎ ಅಡಿಯಲ್ಲಿ ನೋಂದಣಿ ಅಥವಾ ನವೀಕರಣಕ್ಕಾಗಿ ಅರ್ಜಿ ಸಲ್ಲಿಸುವಾಗ ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳ ವಿವರಗಳನ್ನು ಒದಗಿಸಬೇಕು
- ಪ್ರತಿ ಎನ್‌ಜಿಒ ತನ್ನ ಪರವಾನಗಿ ರದ್ದಾಗುವುದನ್ನು ತಪ್ಪಿಸಬೇಕಾದರೆ ಎರಡು ಹಣಕಾಸು ವರ್ಷಗಳಲ್ಲಿ ನಿಗದಿತ ಉದ್ದೇಶದ ಚಟುವಟಿಕೆಗಳಿಗಾಗಿ ಕನಿಷ್ಠ ₹10 ಲಕ್ಷ ಖರ್ಚು ಮಾಡಬೇಕು. ಯಾವುದೇ ಎನ್‌ಜಿಒ ತನ್ನ ನೋಂದಣಿಯನ್ನು ನವೀಕರಿಸಲು ಅಥವಾ ರದ್ದಾಗುವುದನ್ನು ತಪ್ಪಿಸಲು, ಕಳೆದ ಎರಡು ವರ್ಷಗಳಲ್ಲಿ ತಾನು ಪಡೆದ ವಿದೇಶಿ ದೇಣಿಗೆಯನ್ನು ನಿಗದಿತ ಚಟುವಟಿಕೆಗಳಿಗೆ ಖರ್ಚು ಮಾಡಿರಬೇಕು.

