ವಿಶ್ವಸಂಸ್ಥೆ: ಚೀನಾ ಮತ್ತು ಪಾಕಿಸ್ತಾನ ಜಂಟಿಯಾಗಿ ಆಯೋಜಿಸಿದ್ದ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ (UNSC) ಪೂರ್ವನಿಯೋಜಿತ ಸಭೆಯಲ್ಲಿ ಜಮ್ಮು-ಕಾಶ್ಮೀರ ವಿಷಯ ಪ್ರಸ್ತಾಪಿಸಿದ ಪಾಕಿಸ್ತಾನಕ್ಕೆ ಭಾರತ ತಕ್ಕ ಪ್ರತ್ಯುತ್ತರ ನೀಡಿದೆ.
ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶವು ಸಂಪೂರ್ಣವಾಗಿ ಭಾರತದ ಆಂತರಿಕ ವಿಷಯವಾಗಿದ್ದು, ರಾಜಕೀಯ ಲಾಭಕ್ಕಾಗಿ ಪಾಕಿಸ್ತಾನವು ಈ ಜಾಗತಿಕ ವೇದಿಕೆಯನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಭಾರತ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ.
ವಿಶ್ವಸಂಸ್ಥೆಯಲ್ಲಿ ಭಾರತದ ಕಾಯಂ ಪ್ರತಿನಿಧಿಯಾಗಿರುವ ಪರ್ವತನೇನಿ ಹರೀಶ್ ಅವರು ಮಂಗಳವಾರ ನಡೆದ ಅರಿಯಾ-ಫಾರ್ಮುಲಾ ಸಭೆಯಲ್ಲಿ ಪಾಕಿಸ್ತಾನದ ನಡೆಯನ್ನು ಖಂಡಿಸಿದರು.
'ಸಭೆಯ ಸಹ-ಅಧ್ಯಕ್ಷತೆಯನ್ನು ವಹಿಸಿರುವ ದೇಶವು ಅತ್ಯಂತ ಸಮತೋಲನ ಹಾಗೂ ನಿಷ್ಪಕ್ಷಪಾತವಾಗಿ ನಡೆದುಕೊಳ್ಳಬೇಕೆಂದು ನಿರೀಕ್ಷಿಸಲಾಗುತ್ತದೆ. ಆದರೆ ಪಾಕಿಸ್ತಾನವು ಜಾಗತಿಕ ವೇದಿಕೆಯನ್ನು ರಾಜಕೀಯಗೊಳಿಸಲು ಆಯ್ಕೆ ಮಾಡಿಕೊಂಡಿದೆ' ಎಂದು ಬೇಸರ ವ್ಯಕ್ತಪಡಿಸಿದರು.
'ಸಮಯದ ಅಭಾವವಿರುವುದರಿಂದ ನಾನು ಸ್ಪಷ್ಟವಾಗಿ ಹೇಳಲು ಬಯಸುತ್ತೇನೆ. ಜಮ್ಮು ಮತ್ತು ಕಾಶ್ಮೀರವು ಸಂಪೂರ್ಣವಾಗಿ ಭಾರತದ ಆಂತರಿಕ ವಿಷಯವಾಗಿದೆ. ಅದು ಹಿಂದೆ, ಇಂದು ಮತ್ತು ಎಂದೆಂದಿಗೂ ಭಾರತದ ಭಾಗವೇ' ಎಂದು ಹರೀಶ್ ಹೇಳಿದರು.

