ವಿವಿಧ ರಾಜ್ಯಗಳಲ್ಲಿ ನಡೆದ ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ ವೇಳೆ ಅಸಂಖ್ಯಾತ ಮತದಾರರು ನಿರಂಕುಶ ಅನರ್ಹತೆಗೆ ಒಳಗಾಗಿ ತಮ್ಮ ಮತದಾನದ ಹಕ್ಕು ಕಳೆದುಕೊಂಡಿದ್ದಾರೆ ಎಂದು ಪಕ್ಷ ಆರೋಪಿಸಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, 'ಚುನಾವಣಾ ಆಯೋಗವು ಪಕ್ಷಪಾತದ ಧೋರಣೆ ಅನುಸರಿಸುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಪರವಾಗಿ ಕಾರ್ಯನಿರ್ವಹಿಸುತ್ತಿರುವುದು ಸ್ಪಷ್ಟವಾಗಿದೆ. ಆದ್ದರಿಂದ ಮತದಾನದ ಹಕ್ಕಿಗೆ ಮೂಲಭೂತ ಹಕ್ಕಿನ ಸ್ಥಾನಮಾನ ನೀಡುವ ಸಮಯ ಬಂದಿದೆ. ಇದರಿಂದ ಆ ಹಕ್ಕಿಗೆ ಅತ್ಯುನ್ನತ ಮಟ್ಟದ ನ್ಯಾಯಾಂಗ ರಕ್ಷಣೆ ಮತ್ತು ಪರಿಶೀಲನೆ ದೊರೆಯಲಿದೆ' ಎಂದು ಹೇಳಿದರು.
ಇತ್ತೀಚೆಗೆ ಪಾದಚಾರಿ ಮಾರ್ಗದಲ್ಲಿ ನಡೆಯುವುದನ್ನು ಮೂಲಭೂತ ಹಕ್ಕು ಎಂದು ಘೋಷಿಸಿರುವ ಸುಪ್ರೀಂ ಕೋರ್ಟ್‌ನ ದ್ವಿಸದಸ್ಯ ಪೀಠದ ಆದೇಶವನ್ನು ಉಲ್ಲೇಖಿಸಿದ ಅವರು, 'ಪಾದಚಾರಿ ಮಾರ್ಗದಲ್ಲಿ ನಡೆಯುವುದು ಮೂಲಭೂತ ಹಕ್ಕಾಗಿದ್ದರೆ, ಮತದಾನ ಯಾಕೆ ಮೂಲಭೂತ ಹಕ್ಕಾಗಬಾರದು?' ಎಂದು ಪ್ರಶ್ನಿಸಿದರು.
'ಮತದಾನವು ಪ್ರಜಾಪ್ರಭುತ್ವದ ಅಡಿಪಾಯವಾಗಿದೆ. ಹೀಗಾಗಿ ಪ್ರಜಾಪ್ರಭುತ್ವದ ರಕ್ಷಣೆ ಮತ್ತು ಬಲವರ್ಧನೆಗಾಗಿ ಮತದಾನದ ಹಕ್ಕಿಗೂ ಮೂಲಭೂತ ಹಕ್ಕಿನ ಸ್ಥಾನಮಾನ ನೀಡಬೇಕು' ಎಂದು ಜೈರಾಮ್ ರಮೇಶ್ ಆಗ್ರಹಿಸಿದರು.

