HEALTH TIPS

ಮುಸ್ಲಿಮರ ಮೇಲಿನ ದಾಳಿಗಳ ವಿರುದ್ಧ ರಾಷ್ಟ್ರವ್ಯಾಪಿ ಚಳುವಳಿ: ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಘೋಷಣೆ

ನವದೆಹಲಿ: ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಮುಸ್ಲಿಮರ ವಿರುದ್ಧ ಗುಂಪು ಹಿಂಸಾಚಾರ, ಮಸೀದಿ-ಮದರಸಾಗಳ ಧ್ವಂಸ, ಬುಲ್ಡೋಝರ್ ಕಾರ್ಯಾಚರಣೆಗಳು, ವಂದೇ ಮಾತರಂ ಕಡ್ಡಾಯಗೊಳಿಸುವ ಪ್ರಯತ್ನಗಳು ಹಾಗೂ ಏಕರೂಪ ನಾಗರಿಕ ಸಂಹಿತೆ (UCC) ಜಾರಿಗೆ ಸಂಬಂಧಿಸಿದ ಬೆಳವಣಿಗೆಗಳ ವಿರುದ್ಧ ರಾಷ್ಟ್ರವ್ಯಾಪಿ ಚಳುವಳಿ ಹಮ್ಮಿಕೊಳ್ಳಲು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (AIMPLB) ನಿರ್ಧರಿಸಿದೆ.

ಮುಸ್ಲಿಮರ ಹಕ್ಕುಗಳ ಉಲ್ಲಂಘನೆ, ದ್ವೇಷದ ರಾಜಕೀಯ, ಮಸೀದಿ-ಮದರಸಾಗಳ ಧ್ವಂಸ ಹಾಗೂ ಕೋಮು ಸಾಮರಸ್ಯಕ್ಕೆ ಧಕ್ಕೆ ತರುವ ಬೆಳವಣಿಗೆಗಳ ವಿರುದ್ಧ ಈ ಚಳುವಳಿ ನಡೆಸಲಾಗುವುದು ಎಂದು ಮಂಡಳಿ ಹೇಳಿದೆ. ಚಳುವಳಿಯ ರೂಪುರೇಷೆ ಸಿದ್ಧಪಡಿಸಲು ಕ್ರಿಯಾ ಸಮಿತಿಯೊಂದನ್ನು ರಚಿಸಲಾಗುವುದು ಎಂದೂ ತಿಳಿಸಿದೆ.

ದೇಶದ ಹಲವು ಭಾಗಗಳಲ್ಲಿ, ವಿಶೇಷವಾಗಿ ಬಿಜೆಪಿ ಆಡಳಿತದ ರಾಜ್ಯಗಳಲ್ಲಿ, ಮುಸ್ಲಿಮರ ವಿರುದ್ಧ ದಾಳಿಗಳು ಹೆಚ್ಚುತ್ತಿದ್ದು, ಅವರ ಜೀವ, ಆಸ್ತಿ, ಧಾರ್ಮಿಕ ಹಕ್ಕುಗಳು ಮತ್ತು ನಂಬಿಕೆಗಳಿಗೆ ಧಕ್ಕೆ ಉಂಟಾಗುತ್ತಿದೆ ಎಂದು ಕಾರ್ಯಕಾರಿ ಸಮಿತಿ ಹೇಳಿದೆ.

ದೇಶದಲ್ಲಿ ದ್ವೇಷ ಮತ್ತು ಕೋಮು ಉದ್ವಿಗ್ನತೆಯ ವಾತಾವರಣ ಹೆಚ್ಚುತ್ತಿದೆ ಎಂದು ಮಂಡಳಿ ಆರೋಪಿಸಿದೆ. ದ್ವೇಷ ಭಾಷಣಗಳು ಮತ್ತು ಪ್ರಚೋದನಾತ್ಮಕ ಹೇಳಿಕೆಗಳ ವಿರುದ್ಧ ಪರಿಣಾಮಕಾರಿ ಕಾನೂನು ಕ್ರಮ ಕೈಗೊಳ್ಳಲಾಗುತ್ತಿಲ್ಲ ಎಂದು ಅದು ಕಳವಳ ವ್ಯಕ್ತಪಡಿಸಿದೆ.

ಮುಸ್ಲಿಮರ ವಿರುದ್ಧದ ದಾಳಿಗಳ ವಿಚಾರದಲ್ಲಿ ಜಾತ್ಯತೀತ ರಾಜಕೀಯ ಪಕ್ಷಗಳು ಮೌನ ವಹಿಸಿವೆ ಎಂದು ಕಾರ್ಯಕಾರಿ ಸಮಿತಿ ಟೀಕಿಸಿದೆ. ಮುಸ್ಲಿಮರನ್ನು ಕೇವಲ ಮತಬ್ಯಾಂಕ್‌ನ ದೃಷ್ಟಿಯಿಂದಲೇ ನೋಡಲಾಗುತ್ತಿದೆ ಎಂದೂ ಅದು ಆರೋಪಿಸಿದೆ.

ಮುಸ್ಲಿಂ ಸಮುದಾಯದ ಸ್ಥಿತಿ ಮತ್ತು ಹಕ್ಕುಗಳ ಉಲ್ಲಂಘನೆ ಕುರಿತು ಸಮಗ್ರ ವರದಿಯೊಂದನ್ನು ಪ್ರಕಟಿಸಲು ಮಂಡಳಿ ನಿರ್ಧರಿಸಿದೆ. ಇಂತಹ ಬೆಳವಣಿಗೆಗಳು ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಮತ್ತು ಸಾಮಾಜಿಕ ಸಾಮರಸ್ಯದ ಮೇಲೂ ಪರಿಣಾಮ ಬೀರುತ್ತವೆ ಎಂದು ಅದು ಅಭಿಪ್ರಾಯಪಟ್ಟಿದೆ.

ಭೋಜ್‌ಶಾಲಾ ತೀರ್ಪು ಪ್ರಶ್ನೆ

ಕಮಲ್ ಮೌಲಾ ಮಸೀದಿ-ಭೋಜ್‌ಶಾಲಾ ಪ್ರಕರಣಕ್ಕೆ ಸಂಬಂಧಿಸಿದ ಮಧ್ಯಪ್ರದೇಶ ಹೈಕೋರ್ಟ್‌ನ ಇತ್ತೀಚಿನ ತೀರ್ಪಿನ ಬಗ್ಗೆ ಕಾರ್ಯಕಾರಿ ಸಮಿತಿ ಕಳವಳ ವ್ಯಕ್ತಪಡಿಸಿದೆ. ಈ ತೀರ್ಪು ಐತಿಹಾಸಿಕ ದಾಖಲೆಗಳು ಮತ್ತು ದೀರ್ಘಕಾಲದ ಆರಾಧನಾ ಸಂಪ್ರದಾಯಗಳಿಗೆ ವಿರುದ್ಧವಾಗಿದೆ ಎಂದು ಮಂಡಳಿ ಆರೋಪಿಸಿದೆ.

ಈ ತೀರ್ಪು 1991ರ ಪೂಜಾ ಸ್ಥಳಗಳ ಕಾಯ್ದೆಯ ಆಶಯಕ್ಕೂ ವಿರುದ್ಧವಾಗಿದೆ ಎಂದು ಹೇಳಿರುವ ಮಂಡಳಿ, ತೀರ್ಪನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿರುವ ಕಮಲ್ ಮೌಲಾ ಮಸೀದಿ ಸಮಿತಿಯ ಕ್ರಮವನ್ನು ಸ್ವಾಗತಿಸಿದೆ. ಈ ಕಾನೂನು ಹೋರಾಟದಲ್ಲಿ ಮಸೀದಿ ಸಮಿತಿಗೆ ಎಲ್ಲ ರೀತಿಯ ನೆರವು ನೀಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದೆ.

ವಂದೇ ಮಾತರಂ ಕಡ್ಡಾಯಕ್ಕೆ ವಿರೋಧ

ವಂದೇ ಮಾತರಂ ಅನ್ನು ಕಡ್ಡಾಯಗೊಳಿಸುವ ಯಾವುದೇ ಪ್ರಯತ್ನವು ಸಂವಿಧಾನದ 25ನೇ ವಿಧಿಯಲ್ಲಿ ಖಾತರಿಪಡಿಸಿರುವ ಧಾರ್ಮಿಕ ಸ್ವಾತಂತ್ರ್ಯದ ಹಕ್ಕಿಗೆ ವಿರುದ್ಧವಾಗಿದೆ ಎಂದು ಕಾರ್ಯಕಾರಿ ಸಮಿತಿ ಹೇಳಿದೆ. ಕೇಂದ್ರ ಸರ್ಕಾರವು ಸಂಸತ್ತಿನ ಮೂಲಕ ಎಲ್ಲ ನಾಗರಿಕರು ಅಥವಾ ಶಾಲಾ ವಿದ್ಯಾರ್ಥಿಗಳಿಗೆ ವಂದೇ ಮಾತರಂ ಕಡ್ಡಾಯಗೊಳಿಸುವ ಯಾವುದೇ ಕ್ರಮ ಕೈಗೊಂಡರೆ ಅದರ ವಿರುದ್ಧ ನ್ಯಾಯಾಲಯದ ಮೊರೆ ಹೋಗಲಾಗುವುದು ಎಂದು ಮಂಡಳಿ ಸ್ಪಷ್ಟಪಡಿಸಿದೆ.

ಪಶ್ಚಿಮ ಬಂಗಾಳ ಸರ್ಕಾರವು ಶಾಲೆಗಳು ಹಾಗೂ ಸರ್ಕಾರಿ ಅನುದಾನಿತ ಮತ್ತು ಮಾನ್ಯತೆ ಪಡೆದ ಮದರಸಾಗಳಲ್ಲಿ ವಂದೇ ಮಾತರಂ ಕಡ್ಡಾಯಗೊಳಿಸಿರುವ ನಿರ್ಧಾರವು ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದ್ದು, 'ಬಿಜೋ ಇಮ್ಯಾನುಯೆಲ್ Vs ಕೇರಳ ರಾಜ್ಯ' ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ ಐತಿಹಾಸಿಕ ತೀರ್ಪಿಗೂ ವಿರುದ್ಧವಾಗಿದೆ ಎಂದು ಕಾರ್ಯಕಾರಿ ಸಮಿತಿ ಅಭಿಪ್ರಾಯಪಟ್ಟಿದೆ. ಈ ನಿರ್ಧಾರವನ್ನು ತಕ್ಷಣ ಹಿಂಪಡೆಯಬೇಕು ಎಂದು ಒತ್ತಾಯಿಸಿದೆ.

ಮದರಸಾಗಳಲ್ಲಿ ವಂದೇ ಮಾತರಂ ಹಾಡುವುದನ್ನು ಕಡ್ಡಾಯಗೊಳಿಸುವ ಸರ್ಕಾರದ ನಿರ್ದೇಶನಕ್ಕೆ ತಡೆ ನೀಡಿರುವ ಕಲ್ಕತ್ತಾ ಹೈಕೋರ್ಟ್‌ನ ಮಧ್ಯಂತರ ಆದೇಶವನ್ನು ಮಂಡಳಿ ಸ್ವಾಗತಿಸಿದೆ. ಅಲ್ಪಸಂಖ್ಯಾತ ಸಮುದಾಯದ ಧಾರ್ಮಿಕ ನಂಬಿಕೆಗಳು ಮತ್ತು ಭಾವನೆಗಳನ್ನು ಕಡೆಗಣಿಸಿ ಇಂತಹ ಕ್ರಮಗಳನ್ನು ಜಾರಿಗೊಳಿಸಲಾಗುವುದಿಲ್ಲ ಎಂದು ನ್ಯಾಯಾಲಯವು ಪ್ರಾಥಮಿಕ ಹಂತದಲ್ಲೇ ಸ್ಪಷ್ಟಪಡಿಸಿದೆ ಎಂದು ಹೇಳಿದೆ.

ವಂದೇ ಮಾತರಂ ಹಾಡಿನ ಕೆಲವು ಭಾಗಗಳು ತೌಹೀದ್‌ (ದೇವರ ಏಕತ್ವ) ಕುರಿತ ಇಸ್ಲಾಮಿಕ್ ನಂಬಿಕೆಗೆ ವಿರುದ್ಧವಾಗಿವೆ. ಆದ್ದರಿಂದ ಅದನ್ನು ಪಠಿಸಲು ಇಸ್ಲಾಮಿಕ್ ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಕಾರ್ಯಕಾರಿ ಸಮಿತಿ ಪುನರುಚ್ಚರಿಸಿದೆ. ಸಹಿಷ್ಣುತೆ ಅಥವಾ ದೇಶಭಕ್ತಿಯ ಹೆಸರಿನಲ್ಲಿ ಮುಸ್ಲಿಮರು ತಮ್ಮ ಧಾರ್ಮಿಕ ನಂಬಿಕೆಗಳಲ್ಲಿ ರಾಜಿ ಮಾಡಿಕೊಳ್ಳಬಾರದು ಎಂದು ಮಂಡಳಿಯು ಮನವಿ ಮಾಡಿದೆ.

ಯುಸಿಸಿ ವಿರುದ್ಧ ಕಾನೂನು ಹೋರಾಟ

ಉತ್ತರಾಖಂಡ ಮತ್ತು ಗುಜರಾತ್ ನಂತರ ಅಸ್ಸಾಂ, ಮಧ್ಯಪ್ರದೇಶ ಹಾಗೂ ಮಹಾರಾಷ್ಟ್ರದಲ್ಲಿಯೂ ಯುಸಿಸಿ ಜಾರಿಗೆ ಸಿದ್ಧತೆಗಳು ನಡೆಯುತ್ತಿರುವುದನ್ನು ಸಭೆಯಲ್ಲಿ ಚರ್ಚಿಸಲಾಯಿತು.

ಯುಸಿಸಿ ನ್ಯಾಯಾಲಯಗಳು ಕಡ್ಡಾಯವಾಗಿ ಜಾರಿಗೊಳಿಸಬೇಕಾದ ಸಾಂವಿಧಾನಿಕ ಆದೇಶವಲ್ಲ ಎಂದು ಮಂಡಳಿ ಹೇಳಿದೆ. ಅದರ ಬಲವಂತದ ಜಾರಿಯು ಧಾರ್ಮಿಕ ಸ್ವಾತಂತ್ರ್ಯದ ಹಕ್ಕಿಗೆ ವಿರುದ್ಧವಾಗಿದ್ದು, ದೇಶದ ವೈವಿಧ್ಯಮಯ ಸಾಮಾಜಿಕ ವ್ಯವಸ್ಥೆಯ ಮೇಲೂ ಪರಿಣಾಮ ಬೀರುತ್ತದೆ ಎಂದು ಅಭಿಪ್ರಾಯಪಟ್ಟಿದೆ.

ಉತ್ತರಾಖಂಡ ಸರ್ಕಾರದ UCC ಕಾನೂನನ್ನು ನೈನಿತಾಲ್ ಹೈಕೋರ್ಟ್‌ ನಲ್ಲಿ ಪ್ರಶ್ನಿಸಿರುವಂತೆ, ಇತರ ರಾಜ್ಯಗಳಲ್ಲಿ ಜಾರಿಯಾಗುವ ಇಂತಹ ಕಾನೂನುಗಳ ವಿರುದ್ಧವೂ ನ್ಯಾಯಾಂಗ ಹೋರಾಟ ಮುಂದುವರಿಸಲಾಗುವುದು ಎಂದು ಕಾರ್ಯಕಾರಿ ಸಮಿತಿ ತಿಳಿಸಿದೆ.

ಮೌಲಾನಾ ಖಾಲಿದ್ ಸೈಫುಲ್ಲಾ ರಹಮಾನಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಂಡಳಿಯ ವಿವಿಧ ಪದಾಧಿಕಾರಿಗಳು ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರು ಭಾಗವಹಿಸಿದ್ದರು. ಪತ್ರಿಕಾಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಮೌಲಾನಾ ಮೊಹಮ್ಮದ್ ಫಜಲುರ್ ರಹೀಮ್ ಮುಜದ್ದಿದಿ ಮತ್ತು ರಾಷ್ಟ್ರೀಯ ವಕ್ತಾರ ಡಾ. ಎಸ್.ಕ್ಯೂ.ಆರ್. ಇಲ್ಯಾಸ್ ಮಾತನಾಡಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries