ಪಾಟ್ನಾ,: NEET-UG ಮರುಪರೀಕ್ಷೆಯ ವೇಳೆ ಬಿಹಾರದ ಲಖಿಸರೈನಲ್ಲಿ ಅಭ್ಯರ್ಥಿಗಳ ಪರವಾಗಿ ಇತರರಿಂದ ಪರೀಕ್ಷೆ ಬರೆಯಿಸುವ 'ಮುನ್ನಾಭಾಯಿ ಎಂಬಿಬಿಎಸ್' ಮಾದರಿಯ ವಂಚನೆ ಜಾಲವನ್ನು ಪೊಲೀಸರು ಭೇದಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ವೈದ್ಯಕೀಯ ವಿದ್ಯಾರ್ಥಿಗಳು, ನರ್ಸಿಂಗ್ ವಿದ್ಯಾರ್ಥಿಗಳು ಹಾಗೂ ಪರೀಕ್ಷಾ ಪ್ರಕ್ರಿಯೆಯಲ್ಲಿ ತೊಡಗಿದ್ದ ಬಯೋಮೆಟ್ರಿಕ್ ಕಂಪೆನಿಯ ಉದ್ಯೋಗಿಗಳು ಸೇರಿದಂತೆ 24 ಮಂದಿಯನ್ನು ಬಂಧಿಸಲಾಗಿದೆ.
2024ರ NEET ಪ್ರಶ್ನೆಪತ್ರಿಕೆ ಸೋರಿಕೆ ಆರೋಪದ ಹಿನ್ನೆಲೆಯಲ್ಲಿ ಮೂಲ ಪರೀಕ್ಷೆಯನ್ನು ರದ್ದುಗೊಳಿಸಲಾಗಿತ್ತು. ಬಳಿಕ ರವಿವಾರ ದೇಶದಾದ್ಯಂತ 20 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಮರುಪರೀಕ್ಷೆಗೆ ಹಾಜರಾಗಿದ್ದರು. ಇದೇ ವೇಳೆ ಲಖಿಸರೈನಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಈ ಅಕ್ರಮ ಜಾಲ ಬೆಳಕಿಗೆ ಬಂದಿದೆ.
ಅಭ್ಯರ್ಥಿಗಳ ಬದಲಿಗೆ ತರಬೇತಿ ಪಡೆದ 'ನಕಲಿ ಪರೀಕ್ಷಾರ್ಥಿ'ಗಳನ್ನು ಪರೀಕ್ಷೆಗೆ ಕೂರಿಸಿ ವೈದ್ಯಕೀಯ ಪ್ರವೇಶ ಪರೀಕ್ಷೆಯಲ್ಲಿ ಅಕ್ರಮ ನಡೆಸಲು ಜಾಲ ಸಂಚು ರೂಪಿಸಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಅಭ್ಯರ್ಥಿಗಳ ಬದಲಿಗೆ ಇತರರು ಪರೀಕ್ಷೆ ಬರೆಯುವಂತೆ ಮಾಡಲು ಪರೀಕ್ಷಾ ವ್ಯವಸ್ಥೆಯಲ್ಲಿದ್ದ ಕೆಲವರು ಸಹಕರಿಸಿದ್ದರೆಂಬ ಶಂಕೆ ವ್ಯಕ್ತವಾಗಿದೆ.
ಗಯಾದ ANM ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ವಿದ್ಯಾರ್ಥಿ ಅರ್ಪಿತ್ ರಾಜ್ ಈ ಜಾಲದ ಪ್ರಮುಖ ಸೂತ್ರಧಾರರಲ್ಲಿ ಒಬ್ಬನೆಂದು ತನಿಖಾಧಿಕಾರಿಗಳು ಶಂಕಿಸಿದ್ದಾರೆ. 2024ರ ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅರ್ಪಿತ್ ರಾಜ್ ಅವರನ್ನು ಈ ಹಿಂದೆ ಸಿಬಿಐ ವಿಚಾರಣೆಗೆ ಒಳಪಡಿಸಿತ್ತು.
ಪ್ರಕರಣದಲ್ಲಿ ಪಾಟ್ನಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ (ಪಿಎಂಸಿಎಚ್)ಯ ಮೂರನೇ ವರ್ಷದ ಎಂಬಿಬಿಎಸ್ ವಿದ್ಯಾರ್ಥಿ ಮಯಾಂಕ್ ಕಶ್ಯಪ್ ನನ್ನು ಸಹ ಬಂಧಿಸಲಾಗಿದೆ. ತನಿಖೆಯ ಭಾಗವಾಗಿ ಪರೀಕ್ಷಾ ಪ್ರಕ್ರಿಯೆಯಲ್ಲಿ ತೊಡಗಿದ್ದ ಬಯೋಮೆಟ್ರಿಕ್ ಕಂಪೆನಿಯ 14 ಉದ್ಯೋಗಿಗಳನ್ನು ವಶಕ್ಕೆ ಪಡೆಯಲಾಗಿದೆ.
ಮಯಾಂಕ್ ಕಶ್ಯಪ್ ಬಯೋಮೆಟ್ರಿಕ್ ಕಂಪೆನಿಯ ಉದ್ಯೋಗಿಯಂತೆ ನಟಿಸಿ ಹಸನ್‌ಪುರ ಪ್ರೌಢಶಾಲೆಯ ಪರೀಕ್ಷಾ ಕೇಂದ್ರಕ್ಕೆ ಪ್ರವೇಶಿಸಲು ಯತ್ನಿಸಿದಾಗ ಈ ಅಕ್ರಮ ಜಾಲದ ಸುಳಿವು ದೊರೆತಿತ್ತು. ಆತನನ್ನು ವಶಕ್ಕೆ ಪಡೆದ ಬಳಿಕ ಪೊಲೀಸರು ಲಖಿಸರೈನ ಕೆಆರ್‌ಕೆ ಹೈಯರ್ ಸೆಕೆಂಡರಿ ಶಾಲೆ ಹಾಗೂ ಕೇಂದ್ರೀಯ ವಿದ್ಯಾಲಯ ಪರೀಕ್ಷಾ ಕೇಂದ್ರಗಳ ಮೇಲೆ ದಾಳಿ ನಡೆಸಿದರು.
ದಾಳಿಯ ವೇಳೆ 7 ಅಭ್ಯರ್ಥಿಗಳು ಸೇರಿದಂತೆ ಹಲವು ಮಂದಿಯನ್ನು ಬಂಧಿಸಲಾಯಿತು. ಪರೀಕ್ಷಾ ಪ್ರಕ್ರಿಯೆಯ ಆಂತರಿಕ ಮಾಹಿತಿಯನ್ನು ಬಳಸಿಕೊಂಡು ಅಭ್ಯರ್ಥಿಗಳ ಬದಲಿಗೆ ನಕಲಿ ಪರೀಕ್ಷಾರ್ಥಿಗಳನ್ನು ಪರೀಕ್ಷೆಗೆ ಕೂರಿಸುವ ಯೋಜನೆ ರೂಪಿಸಲಾಗಿತ್ತು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
ತನಿಖೆಯಲ್ಲಿ ವೈದ್ಯಕೀಯ ಹಾಗೂ ನರ್ಸಿಂಗ್ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳೂ ಜಾಲದಲ್ಲಿ ಭಾಗಿಯಾಗಿರುವುದು ಬಹಿರಂಗವಾಗಿದೆ. ಬನಾರಸ್ ಹಿಂದೂ ವಿಶ್ವವಿದ್ಯಾಲಯದ ನರ್ಸಿಂಗ್ ವಿದ್ಯಾರ್ಥಿನಿ ಪೂನಂ ಕುಮಾರಿ ಮತ್ತೊಬ್ಬ ಅಭ್ಯರ್ಥಿಯ ಹೆಸರಿನಲ್ಲಿ ಪರೀಕ್ಷೆಗೆ ಹಾಜರಾಗಿದ್ದಳು ಎಂದು ಆರೋಪಿಸಲಾಗಿದೆ. ಏಮ್ಸ್ ರಾಯ್ ಬರೇಲಿಯ ವಿದ್ಯಾರ್ಥಿ ಸೌರಭ್ ಝಾ ನನ್ನೂ ಬಂಧಿಸಲಾಗಿದೆ.
ದಿಲ್ಲಿಯ ಶಹದಾರಾ ವೈದ್ಯಕೀಯ ಕಾಲೇಜಿನಲ್ಲಿ ಇಂಟರ್ನ್ ಆಗಿರುವ ಅಮನ್ ಅಗರ್ವಾಲ್, ನಳಂದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ನರ್ಸಿಂಗ್ ವಿದ್ಯಾರ್ಥಿ ಸಂಜೀತ್ ಹಾಗೂ ಆತನ ಸಹೋದರನನ್ನೂ ಪೊಲೀಸರು ಬಂಧಿಸಿದ್ದಾರೆ.
NEET ಮರುಪರೀಕ್ಷೆಯ ಅವಧಿಯಲ್ಲಿ ವೈದ್ಯಕೀಯ ಕಾಲೇಜುಗಳು ವಿದ್ಯಾರ್ಥಿಗಳು ಕ್ಯಾಂಪಸ್ ನಿಂದ ಹೊರಹೋಗದಂತೆ ಸೂಚಿಸಿದ್ದವು. ಪಿಎಂಸಿಎಚ್ ಸೇರಿದಂತೆ ಹಲವು ಸಂಸ್ಥೆಗಳು ಮೇಲ್ವಿಚಾರಣೆಯ ಭಾಗವಾಗಿ ವಿಚಾರ ಸಂಕಿರಣಗಳು ಮತ್ತು ರಸಪ್ರಶ್ನೆ ಕಾರ್ಯಕ್ರಮಗಳನ್ನು ಆಯೋಜಿಸಿದ್ದವು.
ಆದಾರೂ, ಕೆಲವು ವಿದ್ಯಾರ್ಥಿಗಳು ಈ ಕಾರ್ಯಕ್ರಮಗಳಿಗೆ ಗೈರು ಹಾಜರಾಗಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಮಯಾಂಕ್ ಕಶ್ಯಪ್ ಅನಾರೋಗ್ಯದ ನೆಪ ಹೇಳಿ ಕಾಲೇಜಿನಿಂದ ಹೊರಬಂದಿದ್ದು, ನಂತರ ಲಖಿಸರೈನಲ್ಲಿ ಬಂಧಿತನಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣದ ತನಿಖೆಯನ್ನು ಮುಂದುವರಿಸಿರುವ ಬಿಹಾರ ಪೊಲೀಸರು, ಸಂಪೂರ್ಣ ಜಾಲವನ್ನು ಬಯಲಿಗೆಳೆಯಲು ಮುಂದಾಗಿದ್ದಾರೆ.

