ಉಪ್ಪಳ: ಕೇರಳಂ ಸರ್ಕಾರ ಅನುಮೋದಿಸಿರುವ ಮಲೆಯಾಳಂ ಭಾಷಾ ಮಸೂದೆ ಮತ್ತು ಕಾಸರಗೋಡಿನ ಭಾಷಾ ಅಲ್ಪಸಂಖ್ಯಾತ ಕನ್ನಡಿಗರ ಮೇಲೆ ಅದು ಬೀರುವ ಪರಿಣಾಮಗಳ ಬಗ್ಗೆ ಸಮಗ್ರ ಮಾಹಿತಿಗಳೊಂದಿಗೆ ಕರ್ನಾಟಕ ಸಮಿತಿ ಕಾಸರಗೋಡು ನೇತೃತ್ವದಲ್ಲಿ ಮಂಜೇಶ್ವರ ಶಾಸಕ ಎ.ಕೆ.ಎಂ.ಅಶ್ರಫ್ ಅವರೊಂದಿಗೆ ವಿಸ್ಕøತ ಸಮಾಲೋಚನೆ ಶನಿವಾರ ಉಪ್ಪಳ ಮಣ್ಣಂಗುಳಿಯ ಸರ್ಕಾರಿ ಅತಿಥಿ ಗೃಹದಲ್ಲಿ ನಡೆಯಿತು.
ಕೇರಳಂ ಸರ್ಕಾರ ವಿಧಾನಸಭೆಯಲ್ಲಿ ಮಂಡಿಸಿ ಅನುಮೋದನೆಗೊಂಡಿರುವ ಮಲೆಯಾಳಂ ಭಾಷಾ ಮಸೂದೆ ಕಾಸರಗೋಡಿನ ಭಾಷಾ ಅಲ್ಪಸಂಖ್ಯಾತರ ಸಾಂವಿಧಾನಿಕ ಹಕ್ಕಿಗೆ ಚ್ಯುತಿ ತರವಂತದ್ದಾಗಿದ್ದು, ಇಲ್ಲಿಯ ಸಾವಿರಾರು ಕನ್ನಡ ವಿದ್ಯಾರ್ಥಿಗಳು, ಶಿಕ್ಷಕರು, ಉದ್ಯೋಗಿಗಳ ಸಹಿತ ಸಮಗ್ರ ಬಹುದೊಡ್ಡ ವಲಯವೊಂದಕ್ಕೆ ಧಮನಕಾರಿಯಾಗಿ ಪರಿಣಮಿಸಲಿರುವುದರಿಂದ ಈ ಮಸೂದೆಗೆ ಸೂಕ್ತ ತಿದ್ದುಪಡಿಗಳನ್ನು ತರುವಲ್ಲಿ ಶಾಸಕರಲ್ಲಿ ಮನವಿ ಮಾಡಲಾಯಿತು.
ಈ ಸಂದರ್ಭ ಮಾತನಾಡಿದ ಶಾಸಕರು, ಕನ್ನಡ ಮಾಧ್ಯಮದಲ್ಲೇ ವ್ಯಾಸಂಗಗೈದು ಅಚ್ಚ ಕನ್ನಡಿಗನಾಗಿರುವ ತಾನು ಈ ನಿಟ್ಟಿನಲ್ಲಿ ಪೂರ್ಣ ಕಾನೂನು ಪ್ರಕ್ರಿಯೆಗಳನ್ನು ಅಭ್ಯಸಿಸಿ ವ್ಯತಿರಿಕ್ತ ಪರಿಣಾಮಗಳಾಗದಂತೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ವಿಧಾನ ಸಭೆಯಲ್ಲಿ ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸುವದಷ್ಟೇ ಅಲ್ಲದೆ, ಇತ್ತೀಚೆಗೆ ನಡೆದ ಅಧಿವೇಶನದ ವೇಳೆ ಬಚವಣ್ಣನ ವಚನ ಉಲ್ಲೇಖಿಸಿ ಕನ್ನಡ ಧ್ವನಿಯನ್ನು ಕೇರಳ ವಿಧಾನಸಭೆಯಲ್ಲಿ ಮೊಳಗಿಸಿದ ಶಾಸಕರನ್ನು ಈ ಸಂದರ್ಭ ಕಾಸರಗೋಡು ಕರ್ನಾಟಕ ಸಮಿತಿ ಹಾಗೂ ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕ ಸಂಘದ ವತಿಯಿಂದ ಶಾಲು ಹೊದೆಸಿ ಅಭಿನಂದಿಸಲಾಯಿತು.
ಈ ಸಂದರ್ಭ ನಿವೃತ್ತ ಉಪಜಿಲ್ಲಾ ವಿದ್ಯಾಧಿಕಾರಿ, ವಕೀಲ ಎನ್.ಕೆ.ಮೋಹನದಾಸ್, ನಿವೃತ್ತ ಡಿಡಿಇ ಮಹಾಲಿಂಗೇಶ್ವರ ರಾಜ್, ನಿವೃತ್ತ ವಿದ್ಯಾಧಿಕಾರಿ ಪುಂಡರೀಕಾಕ್ಷ ಆಚಾರ್ಯ, ಹಿರಿಯ ಹೋರಾಟಗಾರ ರಾಮಮೂರ್ತಿ, ಕಸಾಪ ಕೇರಳ ಗಡಿನಾಡ ಘಟಕಾಧ್ಯಕ್ಷ ಡಾ.ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ, ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಸದಸ್ಯ ಎ.ಆರ್.ಸುಬ್ಬಯ್ಯಕಟ್ಟೆ, ನಿವೃತ್ತ ವಿದ್ಯಾಧಿಕಾರಿ ವೈ ಸತ್ಯನಾರಾಯಣ, ಗಮಕ ಕಲಾ ಪರಿಷತ್ತು ಕೇರಳ ಗಡಿನಾಡ ಘಟಕಾಧ್ಯಕ್ಷ ಶಂಕರನಾರಾಯಣ ಭಟ್ ತೆಕ್ಕೆಕೆರೆ, ಕೇರಳಂ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕ ಸಂಘದ ಅಧ್ಯಕ್ಷ ಸುಕೇಶ್ ಮಾಸ್ತರ್, ಪ್ರಧಾನ ಕಾರ್ಯದರ್ಶಿ ಪ್ರದೀಪ್ ಕುಮಾರ್ ಶೆಟ್ಟಿ ಬೇಳ, ಸಂಘಟನಾ ಕಾರ್ಯದರ್ಶಿ ಜಬ್ಬಾರ್ ಮಾಸ್ತರ್ ಉಪಸ್ಥಿತರಿದ್ದರು.

.jpg)
.jpg)
.jpg)
