ನವದೆಹಲಿ: ಸಂವಿಧಾನದ 142ನೇ ವಿಧಿಯಡಿಯಲ್ಲಿ ವಿಶೇಷ ಅಧಿಕಾರವನ್ನು ಬಳಸಿಕೊಂಡು ಪೋಕ್ಸೊ ಕಾಯ್ದೆಯಡಿಯಲ್ಲಿ ಶಿಕ್ಷೆಗೆ ಗುರಿಯಾಗಿದ್ದ ವ್ಯಕ್ತಿಯನ್ನು ಸುಪ್ರೀಂ ಕೋರ್ಟ್ ಖುಲಾಸೆಗೊಳಿಸಿದೆ.
ಸಂತ್ರಸ್ತೆಗೆ 18 ವರ್ಷ ದಾಟಿದ ಬಳಿಕವೇ ಆರೋಪಿಯು ಸಂತ್ರಸ್ತೆಯನ್ನು ಮದುವೆಯಾಗಿರುವುದು ದೃಢಪಟ್ಟಿದೆ ಎಂದು ಸುಪ್ರೀಂ ಕೋರ್ಟ್ ಈ ತೀರ್ಪು ಪ್ರಕಟಿಸಿದೆ.
ನ್ಯಾಯಮೂರ್ತಿಗಳಾದ ಜೆ.ಕೆ.ಮಾಹೇಶ್ವರಿ ಮತ್ತು ಅತುಲ್ ಎಸ್.ಚಂದೂರ್‌ಕರ್ ಅವರು, 'ಅರ್ಜಿದಾರರು ಮತ್ತು ಸಂತ್ರಸ್ತೆ ದಂಪತಿಯಾಗಿ ಸಮಾಜದಲ್ಲಿ ಜೀವನ ನಡೆಸಲು ಮುಕ್ತರು' ಎಂದು ಹೇಳಿದ್ದಾರೆ.
ಪ್ರಕರಣ ಏನು?: ಸಂತ್ರಸ್ತೆಯು 12ನೇ ತರಗತಿಯಲ್ಲಿದ್ದಾಗಲೇ ವ್ಯಕ್ತಿಯೊಬ್ಬನನ್ನು ಪ್ರೀತಿಸುತ್ತಿದ್ದರು. ಲೈಂಗಿಕ ಸಂಪರ್ಕ ಬೆಳೆಸಿ, ಮದುವೆಯಾಗಲು ನಿರಾಕರಿಸಿದ ಬಳಿಕ ಆತನ ವಿರುದ್ಧ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿತ್ತು. ಬಳಿಕ ಮಹಿಳೆ ಮತ್ತೊಬ್ಬನನ್ನು ಮದುವೆಯಾಗಿದ್ದರು. ಹಿಂದಿನ ಸಂಬಂಧದ ಬಗ್ಗೆ ತಿಳಿದ ಆತ, ಆಕೆಯನ್ನು ಬಿಟ್ಟುಹೋಗಿದ್ದ.
ಈ ಮಧ್ಯೆ ಪ್ರಿಯಕರ ಜಾಮೀನಿನ ಮೇಲೆ ಜೈಲಿನಿಂದ ಹೊರಬಂದಿದ್ದ. ಸಂತ್ರಸ್ತೆ ಮತ್ತು ಆತ ಭೇಟಿಯಾಗಿ ತಮ್ಮ ನಡುವಿನ ವ್ಯಾಜ್ಯವನ್ನು ಇತ್ಯರ್ಥಪಡಿಸಿಕೊಂಡು ಮದುವೆಯಾಗಿದ್ದರು. ಬಳಿಕ ಪತಿ ವಿರುದ್ಧದ ಪೋಕ್ಸೊ ಪ್ರಕರಣವನ್ನು ಕೈಬಿಡುವಂತೆ ಮಹಿಳೆ ಮದ್ರಾಸ್ ಹೈಕೋರ್ಟ್ ಮೊರೆಹೋಗಿದ್ದರು. ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿತ್ತು. ಬಳಿಕ ದಂಪತಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.

