HEALTH TIPS

ಅತ್ಯಾಚಾರ ಸಂತ್ರಸ್ತೆಯ ಬಟ್ಟೆಯ ಮೇಲೆ ವೀರ್ಯ ಇಲ್ಲವೆಂಬ ಕಾರಣಕ್ಕೆ ಸಾಕ್ಷ್ಯ ತಳ್ಳಿಹಾಕಲಾಗದು: ಜಮ್ಮು - ಕಾಶ್ಮೀರ - ಲಡಾಖ್ ಹೈಕೋರ್ಟ್

ಶ್ರೀನಗರ: ಅತ್ಯಾಚಾರ ಸಂತ್ರಸ್ತೆಯ ಬಟ್ಟೆಯ ಮೇಲೆ ವೀರ್ಯ ಪತ್ತೆಯಾಗಿಲ್ಲ ಎಂಬ ಒಂದೇ ಕಾರಣಕ್ಕೆ ಆಕೆಯ ಸಾಕ್ಷ್ಯವನ್ನು ಅನುಮಾನಿಸಲು ಅಥವಾ ಅಮಾನ್ಯಗೊಳಿಸಲು ಸಾಧ್ಯವಿಲ್ಲ ಎಂದು ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಹೈಕೋರ್ಟ್ ಹೇಳಿದೆ.

ಅತ್ಯಾಚಾರ ಪ್ರಕರಣದ ಆರೋಪಿಗೆ ವಿಚಾರಣಾ ನ್ಯಾಯಾಲಯ ಮಂಜೂರು ಮಾಡಿದ್ದ ಜಾಮೀನನ್ನು ರದ್ದುಗೊಳಿಸಿ ನ್ಯಾಯಮೂರ್ತಿ ಸಂಜಯ್ ಧರ್ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಆರೋಪಿಗೆ ಜಾಮೀನು ನೀಡಿದ್ದ ಸೆಷನ್ಸ್ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶ ಆಡಳಿತವು ಮೇಲ್ಮನವಿ ಸಲ್ಲಿಸಿತ್ತು.

ಸಂತ್ರಸ್ತೆಯ ಸಲ್ವಾರ್ ಮೇಲೆ ವೀರ್ಯ ಪತ್ತೆಯಾಗಿಲ್ಲ ಹಾಗೂ ಆಕೆಯ ಬಾಯಿ ಕಟ್ಟಲು ಮತ್ತು ಬೆದರಿಸಲು ಬಳಸಲಾಗಿದೆ ಎಂದು ಹೇಳಲಾದ ಮಫ್ಲರ್ ಮತ್ತು ಲೈಟರ್ ಅನ್ನು ಪೊಲೀಸರು ವಶಪಡಿಸಿಕೊಂಡಿಲ್ಲ ಎಂಬ ಕಾರಣಗಳನ್ನು ಉಲ್ಲೇಖಿಸಿ ಸಂತ್ರಸ್ತೆಯ ಹೇಳಿಕೆಯ ವಿಶ್ವಾಸಾರ್ಹತೆಯನ್ನು ಪ್ರಶ್ನಿಸಿದ್ದ ಸೆಷನ್ಸ್ ನ್ಯಾಯಾಲಯದ ಕ್ರಮವನ್ನು ಹೈಕೋರ್ಟ್ ಗಮನಕ್ಕೆ ತೆಗೆದುಕೊಂಡಿತು.

ಬಂಡಿಪೋರ ಸೆಷನ್ಸ್ ನ್ಯಾಯಾಲಯವು 2024ರಲ್ಲಿ ಇದೇ ಆಧಾರದ ಮೇಲೆ ಆರೋಪಿಗೆ ಜಾಮೀನು ಮಂಜೂರು ಮಾಡಿತ್ತು. ಕೃತ್ಯ ನಡೆದ ಸ್ಥಳಕ್ಕೆ ಸಂಬಂಧಿಸಿದ ಹೇಳಿಕೆಗಳಲ್ಲಿ ವೈರುಧ್ಯಗಳಿರುವುದು ಮತ್ತು ಆರೋಪಿಯು ಸುಮಾರು 18 ತಿಂಗಳ ಕಾಲ ನ್ಯಾಯಾಂಗ ಬಂಧನದಲ್ಲಿದ್ದಾನೆ ಎಂಬ ಅಂಶಗಳನ್ನೂ ನ್ಯಾಯಾಲಯ ಪರಿಗಣಿಸಿತ್ತು.

ಆದರೆ, ಈ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿಯಲ್ಲಿ, ವಿಚಾರಣಾ ನ್ಯಾಯಾಲಯವು ದಾಖಲಾಗಿದ್ದ ಸಾಕ್ಷ್ಯಗಳನ್ನು ತೀವ್ರವಾಗಿ ವಿಶ್ಲೇಷಿಸಿ, ಜಾಮೀನು ಮಂಜೂರು ಮಾಡುವ ಹಂತದಲ್ಲಿ ಅನ್ವಯಿಸಬೇಕಾದ ಕಾನೂನು ತತ್ವಗಳಿಗೆ ವಿರುದ್ಧವಾಗಿ ಆರೋಪಿಗೆ ಜಾಮೀನು ನೀಡಿದೆ ಎಂದು ಆಡಳಿತವು ವಾದಿಸಿತ್ತು.

ಜೂನ್ 5ರಂದು ಮೇಲ್ಮನವಿಯನ್ನು ಅಂಗೀಕರಿಸಿದ ಹೈಕೋರ್ಟ್, ಜಾಮೀನು ಮಂಜೂರು ಮಾಡುವ ವೇಳೆ ವಿಚಾರಣಾ ನ್ಯಾಯಾಲಯವು ದಾಖಲಾಗಿದ್ದ ಸಾಕ್ಷ್ಯಗಳನ್ನು ಸೂಕ್ತ ರೀತಿಯಲ್ಲಿ ಪರಿಗಣಿಸಿಲ್ಲ ಎಂದು ಅಭಿಪ್ರಾಯಪಟ್ಟಿತು.

"ಕೃತ್ಯ ನಡೆದ ಸ್ಥಳ ಅಥವಾ ದಿನಾಂಕದ ಬಗ್ಗೆ ಕೆಲವು ಸಣ್ಣ ವೈರುಧ್ಯಗಳಿವೆ. ಸಂತ್ರಸ್ತೆಯು ಅನಕ್ಷರಸ್ಥಳಾಗಿರುವ ಪ್ರಕರಣದಲ್ಲಿ ಆಕೆಯ ಹೇಳಿಕೆಯೇ ಪ್ರಮುಖ ಆಧಾರವಾಗಿದ್ದು, ಜಾಮೀನು ಅರ್ಜಿಯನ್ನು ಪರಿಗಣಿಸುವ ಹಂತದಲ್ಲೇ ಆಕೆಯ ಸಾಕ್ಷ್ಯವನ್ನು ತಳ್ಳಿಹಾಕಲಾಗದು" ಎಂದು ನ್ಯಾಯಾಲಯ ಹೇಳಿದೆ.

ಆರೋಪಿಯು ನಡೆಸಿದ್ದಾನೆ ಎನ್ನಲಾದ ಅಪರಾಧವು ಗಂಭೀರ ಸ್ವರೂಪದ್ದಾಗಿದ್ದು, ಅದಕ್ಕೆ ಗರಿಷ್ಠ ಜೀವಾವಧಿ ಶಿಕ್ಷೆ ವಿಧಿಸುವ ಅವಕಾಶವಿದೆ ಎಂಬ ಅಂಶವನ್ನು ವಿಚಾರಣಾ ನ್ಯಾಯಾಲಯ ಪರಿಗಣಿಸಿಲ್ಲ ಎಂದೂ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.

ಈ ಹಿನ್ನೆಲೆಯಲ್ಲಿ, ಆರೋಪಿಗೆ ಜಾಮೀನು ಮಂಜೂರು ಮಾಡಿದ್ದ ಬಂಡಿಪೋರ ಸೆಷನ್ಸ್ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್ ರದ್ದುಗೊಳಿಸಿದ್ದು, ಒಂದು ತಿಂಗಳೊಳಗೆ ಶರಣಾಗುವಂತೆ ಆರೋಪಿಗೆ ನಿರ್ದೇಶನ ನೀಡಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries