ವಾಷಿಂಗ್ಟನ್: 'ಭೂಕಂಪ ಪೀಡಿತ ವೆನೆಜುವೆಲಾಕ್ಕೆ ಎಲ್ಲಾ ರೀತಿಯ ನೆರವು ನೀಡಲು ನಾವು ಸಿದ್ದ' ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ.
ವೆನೆಜುವೆಲಾದಲ್ಲಿ ಸಂಭವಿಸಿದ ಅವಳಿ ಭೂಕಂಪದ ಬೆನ್ನಲ್ಲೇ, ತಮ್ಮ ಒಡೆತನದ ಟ್ರುತ್ ಸೋಶಿಯಲ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಟ್ರಂಪ್, 'ವೆನೆಜುವೆಲಾದ ಜನರನ್ನು ನಡುಗಿಸಿದ ಎರಡು ಭೂಕಂಪಗಳು ಭಾರಿ ಪ್ರಮಾಣದ ಸಾವು-ನೋವುಗಳಿಗೆ ಕಾರಣವಾಗಿವೆ' ಎಂದು ತಿಳಿಸಿದ್ದಾರೆ.
'ಸಹಾಯ ಮಾಡಲು ಅಮೆರಿಕ ಸಿದ್ಧವಾಗಿದೆ. ಇಚ್ಛೆಯನ್ನೂ ಹೊಂದಿದ್ದು ಆ ಶಕ್ತಿಯೂ ನಮಗಿದೆ' ಎಂದು ಹೇಳಿದ ಅವರು, ತ್ವರಿತವಾಗಿ ಕಾರ್ಯಪ್ರವೃತ್ತರಾಗುವಂತೆ ಸರ್ಕಾರಿ ಸಂಸ್ಥೆಗಳಿಗೆ ಸೂಚಿಸಿದ್ದಾರೆ.
ಬುಧವಾರ ಸಂಜೆ 7.1 ಹಾಗೂ 7.5 ತೀವ್ರತೆಯ ಸರಣಿ ಭೂಕಂಪಗಳು ವೆನೆಜುವೆಲಾವನ್ನು ನಡುಗಿಸಿದ್ದು, ಬೃಹತ್ ಕಟ್ಟಡಗಳು ನೆಲಕ್ಕುರುಳಿವೆ. ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ಇದು ವೆನೆಜುವೆಲಾದಲ್ಲಿ ದಾಖಲಾದ ಅತ್ಯಂತ ದೊಡ್ಡ ಭೂಕಂಪವಾಗಿದೆ.
ಹಾನಿಯ ಪ್ರಮಾಣ ಮತ್ತು ಮೃತರ ಸಂಖ್ಯೆ ಬಗ್ಗೆ ಅಧಿಕೃತ ವಿವರಗಳು ಲಭ್ಯವಾಗಿಲ್ಲ.
ಅಧ್ಯಕ್ಷರನ್ನೇ ಹೈಜಾಕ್ ಮಾಡಿದ್ದ ಅಮೆರಿಕ:
ಈ ವರ್ಷದ ಆರಂಭದಲ್ಲಿ ವೆನೆಜುವೆಲಾ ಮೇಲೆ ದಾಳಿ ನಡೆಸಿದ್ದ ಅಮೆರಿಕ, ಎಲ್ಲ ನಿಯಮಗಳನ್ನೂ ಮೀರಿ ದೇಶದ ಒಳಗೆ ನುಗ್ಗಿ ಅಧ್ಯಕ್ಷ ನಿಕೊಲಸ್ ಮಡೂರೊ ಮತ್ತು ಅವರ ಪತ್ನಿಯನ್ನು ಹೊತ್ತೊಯ್ದು ತನ್ನ ದೇಶದ ಜೈಲಿನಲ್ಲಿ ಇಟ್ಟಿತ್ತು.
ಹಂಗಾವಿ ಅಧ್ಯಕ್ಷೆ ಡೆಲ್ಸಿ ರಾಡ್ರಿಗಸ್ ಅವರನ್ನು ಕೈಗೊಂಬೆ ಮಾಡಿಕೊಂಡಿರುವ ಟ್ರಂಪ್, ಈ ಮೂಲಕ ಅಲ್ಲಿನ ತೈಲ ನಿಕ್ಷೇಪಗಳ ಮೇಲೆ ಹಿಡಿತ ಸಾಧಿಸಿದ್ದರು. ರಷ್ಯಾ ಬದಲಿಗೆ ವೆನೆಜುವೆಲಾದಿಂದ ತೈಲ ಖರೀದಿಸುವಂತೆ ಭಾರತ ಸೇರಿದಂತೆ ಹಲವು ರಾಷ್ಟ್ರಗಳನ್ನು ಒತ್ತಾಯಿಸಿದ್ದರು.

