ಟೋಕಿಯೊ (ಎಎಫ್‌ಪಿ): ಬಾಂಬ್ ದಾಳಿಗೆ ಒಳಗಾಗಿರುವ ಇರಾನ್‌ನ ಪರಮಾಣು ಘಟಕಗಳ ಪರಿಶೀಲನೆಗೆ ಅಂತರರಾಷ್ಟ್ರೀಯ ಅಣುಶಕ್ತಿ ಸಂಸ್ಥೆಯ ಅಧಿಕಾರಿಗಳು ತೆರಳಲಿದ್ದಾರೆ ಎಂದು ವಿಶ್ವಸಂಸ್ಥೆಯ ಅಣುಶಕ್ತಿ ವಿಭಾಗದ ಮುಖ್ಯಸ್ಥ ರಫೈಲ್ ಮರಿಯಾನೊ ಗ್ರೊಸ್ಸಿ ಅವರು ತಿಳಿಸಿದ್ದಾರೆ.
'ನಾಳೆ ಅಥವಾ ವಾರದ ಒಳಗಾಗಿ ಅಥವಾ 10 ದಿನ ಒಳಗಾಗಿ ಪರಿಶೀಲನೆ ನಡೆಸುತ್ತೇವೆ. ಈ ಪ್ರಕ್ರಿಯೆಯು ಮುಖ್ಯವೇನೋ ಹೌದು. ಆದರೆ ಅತ್ಯ ಗತ್ಯವಲ್ಲ' ಎಂದು ಹೇಳಿದ್ದಾರೆ.
ಈ ಹೇಳಿಕೆಗೆ ಪ್ರತಿಕ್ರಿಯಿಸಿರುವ ಇರಾನ್‌ನ ಉಪ ವಿದೇಶಾಂಗ ಸಚಿವ ಕಜೇಮ್ ಘಾರೀಬಾಬಾದಿ ಅವರು 'ಒಪ್ಪಂದದ ಅಂತಿಮ ಕರಡು ಸಿದ್ಧವಾದ ನಂತರಷ್ಟೇ ಅಣುಶಕ್ತಿ ಘಟಕಗಳ ಪರಿಶೀಲನೆ ಬಗ್ಗೆ ಚಿಂತನೆ ನಡೆಸಲಾಗುವುದು' ಎಂದಿದ್ದಾರೆ.
ಇದಕ್ಕೂ ಮುನ್ನ ಇರಾನ್ ವಿದೇಶಾಂಗ ಸಚಿವಾಲಯದ ವಕ್ತಾರ ಇಸ್ಮಾಯಿಲ್ ಬಘಾಯ್ ಅವರು, 'ಪರಮಾಣು ಘಟಕಗಳ ಪರಿಶೀಲನೆಗೆ ಅಮೆರಿಕವು ಸಮಯವನ್ನು ನಿಗದಿ ಮಾಡಿಲ್ಲ' ಎಂದು ಹೇಳಿದ್ದರು.
ಪರಮಾಣು ಸ್ಥಾವರ ಪರಿಶೀಲನೆ- ಮತ್ತೆ ಸಂಘರ್ಷ: ಅಮೆರಿಕದ ದಾಳಿಗೆ ತುತ್ತಾಗಿರುವ ಪರಮಾಣು ಘಟಕಗಳ ಪರಿಶೀಲನೆಗೆ ಇರಾನ್ ನಿರಾಕರಿಸಿದ್ದು, ಈ ವಿಚಾರವಾಗಿ ಅಮೆರಿಕ ಮತ್ತು ಇರಾನ್ ಮಧ್ಯೆ ಮತ್ತೆ ಸಂಘರ್ಷ ಆರಂಭವಾಗಿದೆ.
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮಂಗಳವಾರ, 'ಪರಿಶೀಲನೆಗೆ ಇರಾನ್ ಅವಕಾಶ ನೀಡದಿದ್ದರೆ ಉಭಯ ದೇಶಗಳ ನಡುವಣ ಶಾಂತಿ ಮಾತುಕತೆಯನ್ನು ಕೂಡಲೇ ಸ್ಥಗಿತಗೊಳಿಸುತ್ತೇವೆ' ಎಂದು ಹೇಳಿದ್ದಾರೆ. ಪರಿಶೀಲನೆಗೆ ಯಾವುದೇ ತರಾತುರಿ ಇಲ್ಲ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.
ಇರಾನ್‌ಗೆ ಭೇಟಿ ನೀಡದಂತೆ ಸಲಹೆ
ದುಬೈ: ಇರಾನ್‌ಗೆ ಅನಗತ್ಯ ಪ್ರಯಾಣ ಮಾಡದಿರುವಂತೆ ಭಾರತ ಮೂಲ ದವರಿಗೆ ಟೆಹರಾನ್‌ನಲ್ಲಿನ ಭಾರತದ ರಾಯಭಾರ ಕಚೇರಿ ಸಲಹೆ ನೀಡಿದೆ.
ಭದ್ರತಾ ಪರಿಸ್ಥಿತಿಯು ಇತ್ತೀಚೆಗೆ ಸುಧಾರಣೆಗೊಂಡಿದ್ದರೂ ಮುಂದಿನ ನಿರ್ದೇಶನದ ತನಕ ಭೇಟಿ ನೀಡದಿರುವಂತೆ ಸಲಹೆ ನೀಡಿದೆ.
ಅಮೆರಿಕದ ಸೋಲಿನ ಘೋಷಣೆ: ಪಶ್ಚಿಮ ಏಷ್ಯಾದ ಯುದ್ಧವನ್ನು ಕೊನೆಗಾಣಿಸುವ ಶಾಂತಿ ಒಪ್ಪಂದವನ್ನು 'ಅಮೆರಿಕದ ಸೋಲಿನ ಘೋಷಣೆ' ಎಂದು ಇರಾನ್ ವ್ಯಾಖ್ಯಾನಿಸಿದೆ. ಅಮೆರಿಕ-ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ಫೆ. 28ರಂದು ದಾಳಿ ನಡೆಸಿದ ನಂತರ ಆರಂಭವಾಗಿದ್ದ ಯುದ್ಧವು, ಅಮೆರಿಕ-ಇರಾನ್ ನಡುವಣ ಒಪ್ಪಂದದಿಂದಾಗಿ ಸದ್ಯಕ್ಕೆ ನಿಂತಿದೆ. ಆದರೆ ಈ ಒಪ್ಪಂದನ್ನು ಇರಾನ್, 'ತನಗೆ ಸಿಕ್ಕ ಜಯ' ಎಂದು ಪ್ರತಿಪಾದಿಸಿದೆ.

