ಮಾಲ್ಡಾದ ಕೇಂದ್ರದಲ್ಲಿ ನೀಟ್ ಮರುಪರೀಕ್ಷೆಗೆ ಹಾಜರಾಗಿದ್ದ ಹೃಷಿಕಾ ಪಾಲ್ ಎಂಬವರು, ಋತುಸ್ರಾವವಾಗಿದೆ ಎಂಬ ಕಾರಣಕ್ಕೆ, ತಾವು ಹಾಕಿಕೊಂಡಿದ್ದ ಪ್ಯಾಡ್ ಅನ್ನು ತಪಾಸಣೆಗೆ ಒಳಪಡಿಸಲು ಪರೀಕ್ಷಾ ಕೇಂದ್ರದ ಮಹಿಳಾ ಸಿಬ್ಬಂದಿ ಸೂಚಿಸಿದ್ದರು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, 'ವಿವಿಧ ಕೇಂದ್ರಗಳಲ್ಲಿ ನೀಟ್ ಮರುಪರೀಕ್ಷೆಗೆ ಹಾಜರಾಗಿದ್ದ ಹಲವು ವಿದ್ಯಾರ್ಥಿನಿಯರೊಂದಿಗೆ ಮಾತನಾಡಿದೆ. 'ಮುಟ್ಟಾಗಿದ್ದೀರಾ ಎಂಬ ಪ್ರಶ್ನೆ ಎದುರಾಯಿತು ಅಥವಾ ಅದಕ್ಕೆ ಸಂಬಂಧಿಸಿದಂತೆ ಪರೀಕ್ಷಾ ಕೇಂದ್ರಗಳಲ್ಲಿ ತಪಾಸಣೆಗೆ ಒಳಗಾಗಬೇಕಾಯಿತು' ಎಂಬುದಾಗಿ ಯಾರೊಬ್ಬರೂ ಹೇಳಿಲ್ಲ. ನಾನು ಭಾಗಿಯಾಗಿದ್ದ ಕೇಂದ್ರದಲ್ಲಿ ಗಮನಿಸಿದಂತೆ, ಋತುಸ್ರಾವವಾಗಿರುವುದಾಗಿ ಹೇಳಿದ ನಿರ್ದಿಷ್ಟ ವಿದ್ಯಾರ್ಥಿಗಳನ್ನು ಮಾತ್ರ ತಪಾಸಣೆಗೆ ಒಳಪಡಿಸಿರುವಂತೆ ತೋರುತ್ತದೆ' ಎಂದು ಬರೆದುಕೊಂಡಿದ್ದಾರೆ.
ಅದೇ ಪೋಸ್ಟ್‌ನಲ್ಲಿ, 'ಪರೀಕ್ಷಾ ಕೇಂದ್ರದಲ್ಲಿ ನನಗೆ, ಮುಟ್ಟಾಗಿದ್ದೀರಾ ಎಂದು ಕೇಳಲಾಯಿತು. ಹೌದು ಎಂದು ಉತ್ತರಿಸುತ್ತಿದ್ದಂತೆ, ಸ್ಯಾನಿಟರಿ ಪ್ಯಾಡ್ ತಪಾಸಣೆ ಮಾಡಬೇಕು ಎಂದು ಮಹಿಳಾ ಸಿಬ್ಬಂದಿ ಹೇಳಿದರು. ಬಟ್ಟೆಯ ಮೇಲಿಂದಲೇ ತಪಾಸಣೆ ನಡೆಸುವ ಬದಲು, ಖಾಸಗಿ ಅಂಗವನ್ನು ಪರಿಶೀಲಿಸಿದರು. ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯವನ್ನು ನಿರ್ಧರಿಸುವ ಈ ಪರೀಕ್ಷೆ ವೇಳೆ ಹೀಗಾದ್ದು, ಆಘಾತತಂದಿತು. ಮುಜುಗರವಾಯಿತಾದರೂ, ಅಸಹಾಯಕಳಾಗಿದ್ದೆ. ತಪಾಸಣೆಗೆ ನಿರಾಕರಿಸಿದ್ದರೆ, ಪರೀಕ್ಷಾ ಕೊಠಡಿಗೆ ಹೋಗಲು ಆಗದು ಎಂಬ ಕಾರಣಕ್ಕೆ ಭಯವಾಗಿತ್ತು' ಎಂದಿದ್ದಾರೆ.
'ಮಾಲ್ಡಾದಲ್ಲಿರುವ ಬಿಭೂತಿಭೂಷಣ್ ಪ್ರೌಢಶಾಲೆಯಲ್ಲಿ ಈ ಘಟನೆ ನಡೆಯಿತು. ಈ ಸಂಬಂಧ ನನಗೆ ಉತ್ತರ ಬೇಕಾಗಿದೆ. ಹಾಗಾಗಿಯೇ, ನನಗಾದ ಅನುಭವವನ್ನು ಹಂಚಿಕೊಳ್ಳುತ್ತಿದ್ದೇನೆ. ಈ ತಪಾಸಣಾ ಪ್ರಕ್ರಿಯೆ ಅಧಿಕೃತವೇ? ಬೇರೆ ವಿದ್ಯಾರ್ಥಿನಿಯರಿಗೂ ಇಂತಹ ಅನುಭವವಾಗಿದೆಯೇ? ಇದು ಸಾಮಾನ್ಯ ಪ್ರಕ್ರಿಯೆ ಎಂದು ಪರಿಗಣಿಸುವುದೇ ಆದಲ್ಲಿ, ಭದ್ರತೆ ಮತ್ತು ವೈಯಕ್ತಿಕ ಘನತೆಯ ನಡುವೆ ಗೆರೆ ಎಳೆಯಬೇಕಿರುವುದು ಎಲ್ಲಿ? ಎಂಬ ಬಗ್ಗೆ ಗಂಭೀರ ಚರ್ಚೆ ನಡೆಸಬೇಕಾದ ಅಗತ್ಯವಿದೆ' ಎಂದು ಪ್ರತಿಪಾದಿಸಿದ್ದಾರೆ.
ಹಾಗೆಯೇ, 'ಭದ್ರತಾ ತಪಾಸಣೆಗಳನ್ನು ನಡೆಸುವುದು ಅತ್ಯಗತ್ಯ. ಆದರೆ, ಅವಮಾನಗಳನ್ನು ಸಹಿಸಲಾಗದು!' ಎಂದು ಹೇಳಿದ್ದಾರೆ.
ನೀಟ್ ಮರುಪರೀಕ್ಷೆ
ಮೇ 3ರಂದು ನಿಗದಿಯಾಗಿದ್ದ ನೀಟ್ ಪರೀಕ್ಷೆಯ ಪ್ರಶ್ನೆಪತ್ರಿಕೆಗಳು ಸೋರಿಕೆಯಾಗಿದ್ದವು. ವ್ಯಾಪಕ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು ಜೂನ್ 21ರಂದು ಮರುಪರೀಕ್ಷೆ ನಡೆಸಿತ್ತು.

