ನವದೆಹಲಿ: ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯನ್ನು ತಡೆಯುವ ನಿಟ್ಟಿನಲ್ಲಿ ಟೆಲಿಗ್ರಾಮ್‌ಗೆ ನಿರ್ಬಂಧ ವಿಧಿಸಿರುವುದು ಸರ್ಕಾರದ ಹೊಸ ಟ್ರಿಕ್ ಆಗಿದೆ. ಅವರು ಕಳ್ಳರನ್ನು ಹಿಡಿಯುವ ಬದಲು, ಬಲಿಪಶುಗಳ ಮನೆಗೆ ಬೀಗ ಹಾಕುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ನೀಟ್-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ ಬೆನ್ನಲ್ಲೇ, ಜೂನ್ 21ರಂದು ಮರು ಪರೀಕ್ಷೆ ನಿಗದಿಯಾಗಿದೆ. ಮತ್ತೊಮ್ಮೆ ಪ್ರಶ್ನೆ ಪತ್ರಿಕೆ ಸೋರಿಕೆಯಾಗುವುದನ್ನು ತಪ್ಪಿಸುವ ಉದ್ದೇಶದಿಂದ ಹಲವು ಕಠಿಣ ಕ್ರಮಗಳನ್ನು ಕೈಗೊಂಡಿರುವ ಕೇಂದ್ರ ಸರ್ಕಾರವು ಜೂನ್ 22ರವರೆಗೆ ದೇಶದಾದ್ಯಂತ ಟೆಲಿಗ್ರಾಮ್ ಬಳಕೆಯನ್ನು ನಿರ್ಬಂಧಿಸಿದೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಫೋಸ್ಟ್ ಮಾಡಿರುವ ರಾಹುಲ್ ಗಾಂಧಿ, 'ಪ್ರಶ್ನೆ ಪತ್ರಿಕೆ ಸೋರಿಕೆಯನ್ನು ತಡೆಗಟ್ಟಲು ಮೋದಿ ಸರ್ಕಾರವು ಟೆಲಿಗ್ರಾಮ್‌ಗೆ ನಿರ್ಬಂಧ ವಿಧಿಸಿದೆ. ಇದು ಕಳ್ಳನನ್ನು ಹಿಡಿಯುವ ಬದಲು, ಸಂತ್ರಸ್ತರ ಮನೆ ಬಾಗಿಲಿಗೆ ಬೀಗ ಹಾಕಿದಂತಾಗಿದೆ. ಹಲವು ವರ್ಷಗಳಿಂದ ಲಕ್ಷಾಂತರ ವಿದ್ಯಾರ್ಥಿಗಳು ಟೆಲಿಗ್ರಾಮ್‌ನಲ್ಲಿ ಪರೀಕ್ಷೆಗಳ ತಯಾರಿ ನಡೆಸುತ್ತಿದ್ದಾರೆ. ಅವರ ಸೌಲಭ್ಯವನ್ನು ಕಸಿದುಕೊಳ್ಳುವುದು, ಪ್ರಶ್ನೆ ಪತ್ರಿಕೆ ಸೋರಿಕೆ ತಡೆಗಟ್ಟಲು ಹೇಗೆ ಸಹಾಯ ಮಾಡುತ್ತದೆ' ಎಂದು ಪ್ರಶ್ನಿಸಿದ್ದಾರೆ.
ಪರೀಕ್ಷೆಯ ದಿನ ವಿದ್ಯಾರ್ಥಿಗಳನ್ನು ಕಟ್ಟುನಿಟ್ಟಿನ ತಪಾಸಣೆಗೆ ಒಳಪಡಿಸಲಾಗುತ್ತದೆ. ಪ್ರಶ್ನೆ ಪತ್ರಿಕೆಯನ್ನು ವಾಯುಪಡೆ ಮೂಲಕ ಕಳಿಸಲಾಗುತ್ತಿದೆ. ಇದೀಗ ಆಯಪ್‌ಗಳನ್ನು ಕೂಡ ನಿರ್ಬಂಧಿಸಲಾಗುತ್ತಿದೆ. ಆದರೆ, ಪ್ರಶ್ನೆ ಪತ್ರಿಕೆ ಸೋರಿಕೆ ಮಾಫಿಯಾವನ್ನು ತಡೆಗಟ್ಟುವ ಯಾವುದೇ ಕಠಿಣ ಕ್ರಮವನ್ನು ಕೂಡ ಸರ್ಕಾರ ತೆಗೆದುಕೊಂಡಿಲ್ಲ ಎಂದು ಆರೋಪಿಸಿದ್ದಾರೆ.
ಪ್ರಧಾನಿ ಮೋದಿ ಅವರೇ, ನಿಮ್ಮ ನಾಟಕಗಳನ್ನು ಬಿಟ್ಟು ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿದವರ ವಿರುದ್ಧ ಕ್ರಮ ತೆಗೆದುಕೊಳ್ಳಿ. ನೀವೇನಾದರೂ ವಿದ್ಯಾರ್ಥಿಗಳ ಧ್ವನಿಯನ್ನು ಕೇಳಿಸಿಕೊಳ್ಳದಿದ್ದರೆ, ಅವರ ಹಕ್ಕುಗಳನ್ನು ಪಡೆದುಕೊಳ್ಳುವುದು ಅವರಿಗೆ ಗೊತ್ತಿದೆ ಎಂದು ಹೇಳಿದ್ದಾರೆ.
ಕೇಂದ್ರ ಸರ್ಕಾರದ ಸೂಚನೆ ನೀಡಿದ ನಂತರ, ಗೂಗಲ್ ಮತ್ತು ಆಯಪಲ್ ಆಯಪ್ ಸ್ಟೋರ್‌ಗಳಿಂದ ಕೂಡ ಟೆಲಿಗ್ರಾಮ್ ಅಪ್ಲಿಕೇಶನ್ ತೆಗೆದುಹಾಕಲಾಗಿದೆ. ಟೆಲಿಗ್ರಾಮ್ ಸಂಸ್ಥಾಪಕ ಹಾಗೂ ಸಿಇಒ ಪಾವೆಲ್ ಡುರೊವ್ ಅವರು ಕೇಂದ್ರ ಸರ್ಕಾರದ ನಡೆಯನ್ನು ಖಂಡಿಸಿದ್ದಾರೆ.

