ನವದೆಹಲಿ: ಕಾಂಗ್ರೆಸ್ ಪಕ್ಷದ ನಾಯಕಿ ಸೋನಿಯಾ ಗಾಂಧಿ ಮತ್ತು ತೃಣಮೂಲ ಕಾಂಗ್ರೆಸ್ ಪಕ್ಷದ (ಟಿಎಂಸಿ) ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಮಂಗಳವಾರ ಇಲ್ಲಿ ಭೇಟಿಯಾಗಿ ಚರ್ಚಿಸಿದರು.
ಸೋಮವಾರ ನಡೆದಿದ್ದ 'ಇಂಡಿಯಾ' ಮೈತ್ರಿಕೂಟದ ಸಭೆಯು ವಿರೋಧಪಕ್ಷಗಳ ನಡುವೆ ಒಗ್ಗಟ್ಟು ಮತ್ತು ಉತ್ತಮ ಸಮನ್ವಯದ ಅಗತ್ಯ ಕುರಿತು ಪ್ರತಿಪಾದಿಸಿತ್ತು.
ಅದರ ಹಿಂದೆಯೇ ಉಭಯ ಮುಖಂಡರ ಭೇಟಿ ನಡೆದಿದೆ.
ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆಯೂ ಆಗಿರುವ ಸೋನಿಯಾ ಗಾಂಧಿ ಅವರ ಇಲ್ಲಿನ ನಿವಾಸ '10 ಜನ್ಪಥ್'ನಲ್ಲಿ ಮಾತುಕತೆ ನಡೆಯಿತು.
ಇತ್ತೀಚಿನ ಚುನಾವಣೆಯಲ್ಲಿ ಟಿಎಂಸಿ ಸೋಲಿನ ಹಿನ್ನೆಲೆಯಲ್ಲಿ ಉಭಯ ಪಕ್ಷಗಳು ಮುಂದಿನ ದಿನಗಳಲ್ಲಿ ಅನುಸರಿಸಬೇಕಾದ ಕಾರ್ಯತಂತ್ರ ಕುರಿತು ಚರ್ಚೆ ನಡೆಯಿತು ಎನ್ನಲಾಗಿದೆ.
ತೃಣಮೂಲ ಕಾಂಗ್ರೆಸ್ ಪಕ್ಷದ ಹಲವು ಸಂಸದರು ಬಂಡಾಯ ಎದ್ದಿದ್ದು, ಪ್ರತ್ಯೇಕ ಬಣವಾಗಿ ಎನ್ಡಿಎ ಜೊತೆಗೆ ಗುರುತಿಸಿಕೊಂಡಿರುವ ಬೆಳವಣಿಗೆಗಳ ಹಿಂದೆಯೇ ಈ ಸಭೆ ನಡೆದಿದೆ. ಚುನಾವಣೆಯಲ್ಲಿ ಸೋಲುಂಡ ಟಿಎಂಸಿ ಮುಖಂಡರು ಹಾಗೂ ಕಾರ್ಯಕರ್ತರ ಮೇಲೆ ಹಲ್ಲೆ ಕೃತ್ಯಗಳು ನಡೆದಿವೆ.

