ಕೌಟುಂಬಿಕ ದೌರ್ಜನ್ಯ ಪ್ರಕರಣವೊಂದರಲ್ಲಿ ತನ್ನ ಪತ್ನಿಯ ಕರೆ ವಿವರಗಳನ್ನು ಸಂರಕ್ಷಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣಾ ನ್ಯಾಯಾಲಯ ವಜಾಗೊಳಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಪತಿ ಸಲ್ಲಿಸಿದ್ದ ಮೇಲ್ಮನವಿಯನ್ನೂ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶೆ ಶುನಾಲಿ ಗುಪ್ತ ವಜಾಗೊಳಿಸಿದ್ದಾರೆ.
ಜೂನ್ 2ರಂದು ನೀಡಿದ ಆದೇಶದಲ್ಲಿ, "ಮಹಿಳೆಯೊಬ್ಬಳು ಯಾವುದೇ ವ್ಯಕ್ತಿಯೊಂದಿಗೆ ಅಕ್ರಮ ಅಥವಾ ಅನೈತಿಕ ಸಂಬಂಧ ಹೊಂದಿದ್ದಾಳೆ ಎಂಬುದಕ್ಕೆ ಯಾವುದೇ ಆಧಾರವಿಲ್ಲದಿದ್ದರೆ, ಆಕೆ ತಡರಾತ್ರಿ ಆ ವ್ಯಕ್ತಿಯೊಂದಿಗೆ ಮಾತನಾಡಿದ್ದಾಳೆ ಎಂಬ ಕಾರಣಕ್ಕೆ ಆಕೆಯ ಚಾರಿತ್ರ್ಯವನ್ನು ಪ್ರಶ್ನಿಸಲು ಸಾಧ್ಯವಿಲ್ಲ" ಎಂದು ನ್ಯಾಯಾಲಯ ಹೇಳಿದೆ.
ತನ್ನ ಪತ್ನಿ ತಡರಾತ್ರಿ ಕೆಲವರೊಂದಿಗೆ ಫೋನ್‌ನಲ್ಲಿ ಮಾತನಾಡುತ್ತಿದ್ದಾಳೆ. ಆದ್ದರಿಂದ ಆಕೆಯ ಕರೆ ವಿವರಗಳನ್ನು ಕೂಡಲೇ ಸಂರಕ್ಷಿಸುವಂತೆ ಆದೇಶಿಸಬೇಕು. ಇಲ್ಲವಾದರೆ, ಕಾಲ ಕಳೆದಂತೆ ದೂರಸಂಪರ್ಕ ಸೇವಾದಾರ ಸಂಸ್ಥೆಗಳು ಆ ವಿವರಗಳನ್ನು ಅಳಿಸಿಹಾಕುವ ಸಾಧ್ಯತೆಯಿದೆ ಎಂದು ಪತಿ ಮೇಲ್ಮನವಿಯಲ್ಲಿ ವಾದಿಸಿದ್ದರು.
ಈ ವಾದವನ್ನು ತಿರಸ್ಕರಿಸಿದ ನ್ಯಾಯಾಲಯ, ಖಾಸಗಿತನದ ಹಕ್ಕು ಪರಿಪೂರ್ಣವಲ್ಲದಿದ್ದರೂ, ಮತ್ತೊಬ್ಬರ ಕರೆ ವಿವರಗಳನ್ನು ಸಂರಕ್ಷಿಸುವಂತೆ ಆದೇಶಿಸಬೇಕಾದರೆ ಅದಕ್ಕೆ ಸ್ಪಷ್ಟ, ನಿರ್ದಿಷ್ಟ ಹಾಗೂ ಸಮರ್ಥನೀಯ ಕಾರಣಗಳನ್ನು ಅರ್ಜಿದಾರರು ಮುಂದಿಡಬೇಕು ಎಂದು ಹೇಳಿದೆ.
"ಮಹಿಳೆಯು ಪುರುಷನೊಂದಿಗೆ ಮಾತನಾಡಬಾರದು ಎಂಬ ಧೋರಣೆ ಇಂದಿನ ಭಾರತೀಯ ಸಮಾಜದಲ್ಲಿಲ್ಲ" ಎಂದೂ ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ವಿಚಾರಣಾ ನ್ಯಾಯಾಲಯದಲ್ಲಾಗಲಿ ಅಥವಾ ಮೇಲ್ಮನವಿಯಲ್ಲಾಗಲಿ ಪತ್ನಿಯ ಕರೆ ವಿವರಗಳನ್ನು ಸಂರಕ್ಷಿಸಲು ಅಗತ್ಯವಾದ ಯಾವುದೇ ದೃಢವಾದ ಕಾರಣಗಳನ್ನು ಪತಿ ನೀಡಿಲ್ಲ ಎಂದು ನ್ಯಾಯಾಲಯ ಹೇಳಿದೆ. ಈ ಹಿನ್ನೆಲೆಯಲ್ಲಿ ಮೇಲ್ಮನವಿಯನ್ನು ವಜಾಗೊಳಿಸಿ, ವಿಚಾರಣಾ ನ್ಯಾಯಾಲಯದ ಆದೇಶವನ್ನು ಎತ್ತಿಹಿಡಿದಿದೆ.

