ಬದಿಯಡ್ಕ: ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವವು ಇತ್ತೀಚೆಗೆ ವಿಜೃಂಭಣೆಯಿಂದ ಜರಗಿದ್ದು, ದೃಢಕಲಶವು ಮಂಗಳವಾರ ಪಾತಃಕಾಲ ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು ಇವರ ನೇತೃತ್ವದಲ್ಲಿ ಜರಗಿತು. ಪೂರ್ವಭಾವಿಯಾಗಿ ಸೋಮವಾರ ಸಂಜೆ ಪುಣ್ಯಾಹವಾಚನ, ಪ್ರಸಾದ ಶುದ್ಧಿ, ರಾಕ್ಷೋಘ್ನ ಹೋಮ, ವಾಸ್ತು ಹೋಮ, ವಾಸ್ತುಬಲಿ, ವಾಸ್ತು ಪುಣ್ಯಾಹಾಂತ ನಡೆಯಿತು. ಮಂಗಳವಾರ ಪ್ರಾತಃಕಾಲ ಗಣಪತಿ ಹವನ, ಕಲಶಪೂಜೆ, ಕಲಶಾಭಿಷೇಕ, ಮಹಾಪೂಜೆ ನಡೆಯಿತು.
ಶ್ರೀ ಮಹಾರುದ್ರಯಾಗ :
ಬೆಳಗ್ಗೆ ಮಹಾಪೂಜೆಯ ನಂತರ ಶ್ರೀ ಮಹಾರುದ್ರಯಾಗ ಆರಂಭವಾಯಿತು. ವೈದಿಕ ಶ್ರೇಷ್ಠರ ನೇತೃತ್ವದಲ್ಲಿ ವೇದಘೋಷದೊಂದಿಗೆ ವಿಧಿವಿಧಾವಾದ ಆಹುತಿಯನ್ನು ನೀಡಲಾಯಿತು. 150ಕ್ಕೂ ಹೆಚ್ಚು ವೈದಿಕರಿಂದ ಶ್ರೀರುದ್ರ ಪಾರಾಯಣ, ಮಧ್ಯಾಹ್ನ ವಸೋರ್ಧಾರಾಪೂರ್ವಕ ಪೂರ್ಣಾಹುತಿ ನಡೆಯಿತು. ಪರಮಪೂಜ್ಯ ಶ್ರೀಮದ್ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರ ದಿವ್ಯ ಉಪಸ್ಥಿತಿಯಲ್ಲಿ ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿಗಳವರು ಪ್ರಾರ್ಥನೆ ಮಾಡಿದರು. ಕ್ಷೇತ್ರದ ಅರ್ಚಕ ಶಿವರಾಮ ಭಟ್ ಹಾಗೂ ವೈದಿಕ ವೃಂದದವರ ವೇದಘೋಷದೊಂದಿಗೆ ಮಹಾಮಂಗಳಾರತಿ ನಡೆಯಿತು. ಸಹಸ್ರಾರು ಮಂದಿ ಭಗವದ್ಭಕ್ತರು ಪಾಲ್ಗೊಂಡು ಶ್ರೀ ದೇವರ ಪ್ರಸಾದವನ್ನು ಸ್ವೀಕರಿಸಿ ಕೃತಾರ್ಥರಾದರು. ಆಡಳಿತ ಮೊಕ್ತೇಸರ ವೆಂಕಟ್ರಮಣ ಭಟ್ ಚಂಬಲ್ತಿಮಾರು, ಆಡಳಿತ ಮಂಡಳಿ, ಸೇವಾಸಮಿತಿ, ಬ್ರಹ್ಮಕಲಶೋತ್ಸವ ಸಮಿತಿ ಹಾಗೂ ವಿವಿಧ ಉಪಸಮಿತಿಗಳ ನೇತೃತ್ವದಲ್ಲಿ ಕಾರ್ಯಕ್ರಮ ಸಂಪನ್ನವಾಯಿತು.



