ಕಾಸರಗೋಡು: ತಚ್ಚಂಗಾಡ್ ಸರ್ಕಾರಿ ಪ್ರೌಢಶಾಲಾ ಮಕ್ಕಳು ಕಾಸರಗೋಡು ಜಿಲ್ಲಾಧಿಕಾರಿ ಅವರ'ನಮಸ್ತೆ ಕಲೆಕ್ಟರ್'ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮೂಲಕ ತಾಸುಗಳ ಕಾಲ ಜಿಲ್ಲಾಧಿಕಾರಿ ಜತೆ ಸಂವಾದ ನಡೆಸಿದರು. ಶಾಲೆಯ ನಾಲ್ಕನೇ ತರಗತಿಯ ವಿದ್ಯಾರ್ಥಿ ಆಧವ್‍ಅಶೋಕ್, ತಾನು ಕಲೆಕ್ಟರ್ ಆಗಬೇಕೆಂದು ಬಯಸುವುದಾಗಿಯೂ, ಕಲೆಕ್ಟರ್ ಆದಲ್ಲಿ ಬಿರುಸಿನ ಮಳೆಗೆ ಮಕ್ಕಳಿಗೆ ರಜೆ ನೀಡಬಹುದೆಂದೂ ತಿಳಿಸಿದನು!
ಬಾಲ್ಯ ಜೀವನದ ಶಿಕ್ಷಣ ಜಿಲ್ಲಾಧಿಕಾರಿಯಾಗಲು ತಮಗೆ ಹೇಗೆ ಸಹಾಯ ಮಾಡಿತು, ಜಿಲ್ಲಾಧಿಕಾರಿಯಾದ ನಂತರ ತಾವು ಓದಿಗೆ ಸಮಯ ನೀಡುತ್ತೀರಾ, ಈ ಹಿಂದಿ ತ್ರಿಶ್ಯೂರ್ ಜಿಲ್ಲಾಧಿಕಾರಿಯಾಗಿ ಕೆಲಸ ನಿರ್ವಹಿಸಿದ ತಮಗೆ ಕಾಸರಗೋಡು ಹೇಗನಿಸುತ್ತಿದೆ....ಹೀಗೆ ನೂರಾರು ಪ್ರಶ್ನೆಗಳನ್ನು ವಿದ್ಯಾರ್ಥಿಗಳು ಜಿಲ್ಲಾಧಿಕಾರಿಗೆ ಕೇಳಿ ಉತ್ತರ ಗಿಟ್ಟಿಸಿಕೊಂಡರು.
ಇನ್ನು ಶಾಲೆ ಎದುರು ರಸ್ತೆಯಲ್ಲಿನ ಜೀಬ್ರಾ ಲೈನ್ ಮತ್ತು ರಸ್ತೆ ವಿಭಾಜಕದ ಕೊರತೆ ಸಮಸ್ಯೆಯಾಗಿ ಪರಿಣಮಿಸುತ್ತಿರುವುದಾಗಿ ಮಕ್ಕಳು ಗಮನ ಸೆಳೆದಾಗ ಈ ಬಗ್ಗೆ ತುರ್ತು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು.
ಈ ಸಂದರ್ಭ ಕಳೆದ ವರ್ಷದ ಉಜ್ವಲ ಬಾಲ್ಯ ಪ್ರಶಸ್ತಿ ವಿಜೇತೆ ಇಶಾನಾ ಎಸ್. ಪಾಲ್ ತಾನು ರಚಿಸಿದ ಜಿಲ್ಲಾಧಿಕಾರಿ ಅರ್ಜುನ್ ಪಾಂಡಿಯನ್ ಅವರ ರೇಖಾಚಿತ್ರವನ್ನು ಜಿಲ್ಲಾಧಿಕಾರಿಗೆ ಹಸ್ತಾಂತರಿಸಿದರು.
ಜಿಲ್ಲಾಧಿಕಾರಿ ಮಕ್ಕಳಿಗೆ ಚಾಕೊಲೇಟ್ ವಿತರಿಸಿ, ಮಕ್ಕಳೊಂದಿಗೆ ಛಾಯಾಚಿತ್ರ ತೆಗೆಸಿಕೊಂಡರು. ಜತೆಗೆ ನಮಸ್ತೆ ಕಲೆಕ್ಟರ್ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಿದರು. ತಚ್ಚಂಗಾಡ್ ಜಿಎಚ್‍ಎಸ್‍ನ ಸುಮಾರು ಇಪ್ಪತ್ತು ವಿದ್ಯಾರ್ಥಿಗಳು ಮತ್ತು ನಾಲ್ವರು ಶಿಕ್ಷಕರು ನಮಸ್ತೆ ಕಲೆಕ್ಟರ್ ಯೋಜನೆಯಲ್ಲಿ ಭಾಗವಹಿಸಿದ್ದರು. ಶಿಕ್ಷಕರಾದ ಟಿ. ಮಧುಸೂದನನ್, ಕೆ. ವಿ. ಸೌಮ್ಯ, ಕೆ. ಪ್ರೇಮಚಂದ್ರನ್ ಮತ್ತು ಎಚ್. ಶಬ್ನಾ ಮಕ್ಕಳ ಜತೆಗಿದ್ದರು.
ನಮಸ್ತೆ ಕಲೆಕ್ಟರ್ ಯೋಜನೆ, ಜಿಲ್ಲಾಡಳಿತ ಮತ್ತು ಮಕ್ಕಳ ನಡುವಿನ ಅಂತರ ಕಡಿಮೆ ಮಾಡಲು ಜಿಲ್ಲಾಧಿಕಾರಿ ಅರ್ಜುನ್ ಪಾಂಡಿಯನ್ ಅವರು ಪ್ರಾರಂಭಿಸಿದ ಯೋಜನೆಯಾಗಿದೆ.



