ಛತ್ರಪತಿ ಸಂಭಾಜಿನಗರ: 'ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಶನಿವಾರದೊಳಗೆ ರಾಜೀನಾಮೆ ನೀಡದಿದ್ದರೆ ದೇಶದಾದ್ಯಂತ ವಿವಿಧ ರಾಜ್ಯಗಳು ಹಾಗೂ ನಗರಗಳಿಗೆ ಪ್ರತಿಭಟನೆ ವಿಸ್ತರಿಸಲಾಗುವುದು' ಎಂದು ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಸಂಸ್ಥಾಪಕ ಅಭಿಜೀತ್ ದೀಪ್ಕೆ ಎಚ್ಚರಿಸಿದ್ದಾರೆ. ಈ ಕುರಿತು ಸಾಮಾಜಿಕ ಮಾಧ್ಯಮ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.
'ಧರ್ಮೇಂದ್ರ ಪ್ರಧಾನ್ ಶನಿವಾರದೊಳಗೆ ರಾಜೀನಾಮೆ ನೀಡದಿದ್ದರೆ ಆಂದೋಲನವು ವ್ಯಾಪಕವಾಗಿ ನಡೆಯಲಿದೆ ಎಂದು ನಾನು ಮೊದಲೇ ಹೇಳಿದ್ದೆ. ಒಂದು ವೇಳೆ ರಾಜೀನಾಮೆ ನೀಡದಿದ್ದರೆ ನಾನೇ ವಿವಿಧ ರಾಜ್ಯಗಳಿಗೆ ಭೇಟಿ ಕೊಟ್ಟು ರಾಜೀನಾಮೆಗೆ ಒತ್ತಾಯಿಸಿ ಪ್ರತಿಭಟನೆಗಳನ್ನು ಹಮ್ಮಿಕೊಳ್ಳಲಿದ್ದೇನೆ' ಎಂದು ಹೇಳಿದ್ದಾರೆ.
'ಒಂದು ಕೋಟಿಗೂ ಅಧಿಕ ವಿದ್ಯಾರ್ಥಿಗಳ ಭವಿಷ್ಯವನ್ನು ಹಾಳು ಮಾಡಿದ್ದಕ್ಕಾಗಿ ನೈತಿಕ ಹೊಣೆ ಹೊತ್ತುಕೊಂಡು ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು' ಎಂದು ಅವರು ಒತ್ತಾಯಿಸಿದ್ದಾರೆ.
ಆಂದೋಲನದ ಮುಂದಿನ ಕಾರ್ಯಕ್ರಮದ ಕುರಿತು ಪ್ರತಿಕ್ರಿಯಿಸಿದ ಅವರು, 'ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡುವವರೆಗೂ ಹೋರಾಟ ನಿಲ್ಲಿಸುವುದಿಲ್ಲ. ನಮಗೆ ಅದನ್ನು ಬಿಟ್ಟು ಬೇರೆ ಮಾರ್ಗವಿಲ್ಲ. ದೇಶದ ವಿವಿಧ ಕಡೆಗಳಿಂದ ಬಂದ ವಿದ್ಯಾರ್ಥಿಗಳು ನವದೆಹಲಿಯಲ್ಲಿ ಒಗ್ಗೂಡಿ ಶಾಂತಿಯುತವಾಗಿ ಪ್ರತಿಭಟನೆ ನಡೆಸಿದ್ದಾರೆ' ಎಂದು ತಿಳಿಸಿದ್ದಾರೆ.
ಪ್ರತಿಭಟಿಸುವವರು ಪಾಕಿಸ್ತಾನಿಗಳು ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ದೀಪ್ಕೆ, 'ಪಾಕಿಸ್ತಾನದ ಯುವಜನರು, ಪಾಕಿಸ್ತಾನದ ವಿದ್ಯಾರ್ಥಿಗಳು, ಪಾಕಿಸ್ತಾನದ ವಿರೋಧ ಪಕ್ಷಗಳು, ಪಾಕಿಸ್ತಾನದ ಪತ್ರಕರ್ತರು. ಹಾಗಾದರೆ ಸರ್ಕಾರ ಹಾಗೂ ಐ.ಟಿ ಸೆಲ್ ಮಾತ್ರ ಭಾರತೀಯರೇ? ನೀವು ದೇಶದ ಉಳಿದ ಭಾಗವನ್ನು ಪಾಕಿಸ್ತಾನ ಎಂದು ಘೋಷಿಸಿದ್ದೀರಾ' ಎಂದು ಕೇಳಿದ್ದಾರೆ.

