ಬದಿಯಡ್ಕ: ಶ್ರೀ ಭಾರತೀ ವಿದ್ಯಾಪೀಠ ಬದಿಯಡ್ಕ ಶಾಲೆಯಲ್ಲಿ 2026-27ನೇ ಶೈಕ್ಷಣಿಕ ವರ್ಷದ ಪ್ರವೇಶೋತ್ಸವ ಕಾರ್ಯಕ್ರಮವು ಸಂಭ್ರಮದಿಂದ ನಡೆಯಿತು. ಹವ್ಯಕ ಅಭ್ಯುದಯ ಚಾರೀಟೇಬಲ್ ಟ್ರಸ್ಟ್ ಉಪಾಧ್ಯಕ್ಷೆ ಈಶ್ವರೀ ಶ್ಯಾಮ ಭಟ್ ಬೇರ್ಕಡವು ದೀಪ ಬೆಳಗಿSI ನೂತನ ಜ್ಞಾನಾರ್ಜನೆಯ ಹೊಸ ಪಯಣಕ್ಕೆ ಚಾಲನೆ ನೀಡಿದರು.
ಶಾಲೆಗೆ ಹೊಸದಾಗಿ ಸೇರ್ಪಡೆಯಾದ ವಿದ್ಯಾರ್ಥಿಗಳನ್ನು ಆರತಿ ಬೆಳಗಿ, ತಿಲಕವಿಟ್ಟು ಆತ್ಮೀಯವಾಗಿ ಸ್ವಾಗತಿಸಲಾಯಿತು.
ಕಾರ್ಯಕ್ರಮದ ಆರಂಭದಲ್ಲಿ ಶಾಲೆಯ ಪ್ರಧಾನಾಧ್ಯಾಪಕ ಸತ್ಯನಾರಾಯಣ ಶರ್ಮ ಪ್ರಾಸ್ತಾವಿಕವಾಗಿ ಮಾತನಾಡಿ, ಹೊಸ ಶೈಕ್ಷಣಿಕ ವರ್ಷದ ಮಹತ್ವವನ್ನು ತಿಳಿಸಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಹವ್ಯಕ ಅಭ್ಯುದಯ ಚಾರೀಟೇಬಲ್ ಟ್ರಸ್ಟ್‍ನ ಅಧ್ಯಕ್ಷ ಡಾ. ವೈ. ವಿ. ಕೃಷ್ಣಮೂರ್ತಿ ಅವರು ವಿದ್ಯಾರ್ಥಿಗಳನ್ನು ಹರಸಿ ವಿದ್ಯಾಭ್ಯಾಸದ ಮೂಲಕ ಉತ್ತಮ ನಾಗರಿಕರಾಗುವಂತೆ ಪ್ರೇರೇಪಿಸಿದರು.
ರಕ್ಷಕ-ಶಿಕ್ಷಕ ಸಂಘದ ಉಪಾಧ್ಯಕ್ಷ ಸುಧಾಕರ ರೈ ಹಾಗೂ ಮಾತೃ ಸಮಿತಿಯ ಶಾಲಿನಿ ಅವರು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಶಾಲಾಡಳಿತ ಮಂಡಳಿಯ ಸಂಚಾಲಕ ಮಧುಸೂದನ ಪಿ.ವಿ. ಅವರು ಅಧ್ಯಕ್ಷೀಯ ನುಡಿಗಳಲ್ಲಿ ವಿದ್ಯಾರ್ಥಿಗಳನ್ನು ಹುರಿದುಂಬಿಸಿ, ಹೊಸ ಶೈಕ್ಷಣಿಕ ವರ್ಷವು ಎಲ್ಲರಿಗೂ ಯಶಸ್ಸು, ಸಾಧನೆ ಹಾಗೂ ಉತ್ತಮ ಅವಕಾಶಗಳನ್ನು ತರಲೆಂದು ಶುಭ ಹಾರೈಸಿದರು. ಅಧ್ಯಾಪಿಕೆ ಸುಷ್ಮಾ ನೂಜಿ ಶಾಲೆಯ ನಿಯಮಾವಳಿಗಳನ್ನು ತಿಳಿಸಿದರು.
ಹತ್ತನೇ ತರಗತಿಯ ವಿದ್ಯಾರ್ಥಿನಿ ತಸ್ವಿ ರೈ ಸ್ವಾಗತಿಸಿ, ಸಾರ್ಥಕ್ ವೈ ವಂದಿಸಿದರು. ಪ್ರಕೃತಿ ಎ. ಕಾರ್ಯಕ್ರಮವನ್ನು ನಿರೂಪಿಸಿದಳು. ಶಿಕ್ಷಕರು, ಪೋಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿ ಪ್ರವೇಶೋತ್ಸವವನ್ನು ಯಶಸ್ವಿಗೊಳಿಸಿದರು.
ಇದೇ ಸಂದರ್ಭದಲ್ಲಿ ಬದಿಯಡ್ಕ ಅಬಕಾರಿ ಇಲಾಖೆಯ ಜನಾರ್ದನ ಸಿ. ಅವರು ಮಕ್ಕಳಿಗೆ ಮಾದಕದ್ರವ್ಯ ವಿರೋಧಿ ಪ್ರತಿಜ್ಞೆಯನ್ನು ಬೋಧಿಸಿದರು. ಮಕ್ಕಳು ಪ್ರತಿಜ್ಞೆಯನ್ನು ಸ್ವೀಕರಿಸಿ ಮಾದಕ ಮುಕ್ತ ಕೇರಳವಾಗಿಸುವಲ್ಲಿ ಶಕ್ತಿ ಮೀರಿ ಪ್ರಯತ್ನಿಸುತ್ತೇವೆ ಎಂಬ ಆಶ್ವಾಸನೆ ನೀಡಿದರು. ನವಾಗತ ವಿದ್ಯಾರ್ಥಿಗಳ ಸೇರ್ಪಡೆಯೊಂದಿಗೆ ಶಾಲಾ ಆವರಣವು ಹರ್ಷೋಲ್ಲಾಸದಿಂದ ಕಂಗೊಳಿಸಿತು.

.jpg)
.jpg)
.jpg)
