HEALTH TIPS

ಹಿಂದೂ-ಮುಸ್ಲಿಂ ವಿಚಾರಗಳಿಂದ ಉದ್ಯೋಗ ಸಿಗುವುದಿಲ್ಲ: ಕಾಕ್ರೋಚ್ ಜನತಾ ಪಾರ್ಟಿ ಸಂಸ್ಥಾಪಕ ಅಭಿಜೀತ್ ದೀಪ್ಕೆ

ಛತ್ರಪತಿ ಸಂಭಾಜಿನಗರ: ಕಳೆದ 10-12 ವರ್ಷಗಳಿಂದ ದೇಶದ ರಾಜಕೀಯವು ಹಿಂದೂ-ಮುಸ್ಲಿಂ ವಿಚಾರಗಳ ಸುತ್ತ ಕೇಂದ್ರೀಕೃತವಾಗಿದೆ. ಆದರೆ ಇಂತಹ ವಿಚಾರಗಳು ಉದ್ಯೋಗ ಸೃಷ್ಟಿಸುವುದಿಲ್ಲ. ಸರ್ಕಾರದ ಆದ್ಯತೆಗಳು ಬದಲಾಗಬೇಕಿದ್ದು, ನಿರುದ್ಯೋಗವೇ ದೇಶದ ಪ್ರಮುಖ ಸಮಸ್ಯೆಯಾಗಿದೆ ಎಂದು ಕಾಕ್ರೋಚ್ ಜನತಾ ಪಾರ್ಟಿ(CJP)ಯ ಸಂಸ್ಥಾಪಕ ಅಭಿಜೀತ್ ದೀಪ್ಕೆ ಹೇಳಿದರು.

ದಿಲ್ಲಿಯ ಜಂತರ್ ಮಂತರ್ ನಲ್ಲಿ ಶನಿವಾರ ನಡೆದ ಪ್ರತಿಭಟನೆಯ ಮರುದಿನ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, NEET ಪ್ರಶ್ನೆಪತ್ರಿಕೆ ಸೋರಿಕೆ ಮತ್ತು CBSE OSM ದೋಷಗಳ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು ಎಂಬ ತಮ್ಮ ಬೇಡಿಕೆಯನ್ನು ಪುನರುಚ್ಚರಿಸಿದರು.

ಪ್ರಧಾನ್ ರಾಜೀನಾಮೆ ನೀಡಿದ ಬಳಿಕ ಶಿಕ್ಷಣ ವ್ಯವಸ್ಥೆಯ ಸಮಗ್ರ ಪರಿಶೀಲನೆ ನಡೆಸಿ ಸುಧಾರಣೆಗೆ ಕಾರ್ಯಸೂಚಿ ರೂಪಿಸಲಾಗುವುದು ಎಂದು ಅವರು ಹೇಳಿದರು. CJP ಚಳವಳಿಯನ್ನು ಕೆಲವು ನೆರೆಯ ರಾಷ್ಟ್ರಗಳಲ್ಲಿ ನಡೆದ ಪ್ರತಿಭಟನೆಗಳಿಗೆ ಹೋಲಿಸುವುದು ಸರಿಯಲ್ಲ. ಇದು Gen Z ಯುವಕರ ಚಳವಳಿಯಾಗಿದ್ದು, ಯಾವುದೇ ರಾಜಕೀಯ ಪಕ್ಷದೊಂದಿಗೆ ಸಂಬಂಧ ಹೊಂದಿಲ್ಲ ಎಂದು ಸ್ಪಷ್ಟಪಡಿಸಿದರು.

'ಕಳೆದ ಒಂದು ದಶಕದಿಂದ ದೇಶದ ರಾಜಕೀಯವು ಹಿಂದೂ-ಮುಸ್ಲಿಂ ವಿಚಾರಗಳ ಸುತ್ತ ಕೇಂದ್ರೀಕೃತವಾಗಿದೆ. ಈ ವಿಚಾರಗಳಿಂದ ಉದ್ಯೋಗ ಸೃಷ್ಟಿಯಾಗುವುದಿಲ್ಲ. ಆದ್ದರಿಂದ ಸರ್ಕಾರದ ಆದ್ಯತೆಗಳು ಬದಲಾಗಬೇಕು. ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ ಬಳಿಕ ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆ ತರಲು ಕಾರ್ಯಸೂಚಿ ಸಿದ್ಧಪಡಿಸುತ್ತೇವೆ. ಆದರೆ ನಮ್ಮ ಹೋರಾಟ ಅಲ್ಲಿಗೆ ಮುಗಿಯುವುದಿಲ್ಲ. ದೇಶದಲ್ಲಿ ನಿರುದ್ಯೋಗವೂ ಪ್ರಮುಖ ಸಮಸ್ಯೆಯಾಗಿದೆ' ಎಂದು ದೀಪ್ಕೆ ಹೇಳಿದರು.

ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳ ಮೇಲೆ ಪರಿಣಾಮ ಬೀರಿರುವ NEET ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಯಾರಾದರೂ ಹೊಣೆ ಹೊರಬೇಕು ಎಂದು ಅವರು ಆಗ್ರಹಿಸಿದರು.

'ಯಾರೂ ಜವಾಬ್ದಾರಿ ತೆಗೆದುಕೊಳ್ಳದಿದ್ದರೆ ವ್ಯವಸ್ಥೆ ಪರಿಣಾಮಕಾರಿಯಾಗಿ ಹೇಗೆ ಕಾರ್ಯನಿರ್ವಹಿಸುತ್ತದೆ? ಒಂದು ಕಂಪೆನಿಗೆ ಯಾರದೋ ತಪ್ಪಿನಿಂದ ನಷ್ಟ ಉಂಟಾದರೆ, ಆ ವ್ಯಕ್ತಿ ರಾಜೀನಾಮೆ ನೀಡದೆ ಪರಿಸ್ಥಿತಿ ಸುಧಾರಿಸುತ್ತದೆಯೇ? ಒಂದೆರಡು ತಪ್ಪುಗಳಾದರೂ ಕಂಪೆನಿಗಳು ಉದ್ಯೋಗಿಗಳನ್ನು ವಜಾಗೊಳಿಸುತ್ತವೆ. ಆದರೆ ಸರ್ಕಾರ ನಡೆಸುವ ಪರೀಕ್ಷೆಗಳ ಪ್ರಶ್ನೆಪತ್ರಿಕೆಗಳು ಪದೇಪದೇ ಸೋರಿಕೆಯಾಗುತ್ತಿವೆ. ರಾಜೀನಾಮೆ ನೀಡದಿದ್ದರೆ ಸರ್ಕಾರ ತನ್ನ ತಪ್ಪುಗಳನ್ನು ಒಪ್ಪಿಕೊಳ್ಳಲು ಸಿದ್ಧವಾಗಿದೆ ಎಂದು ನಾವು ಹೇಗೆ ನಂಬಬೇಕು?' ಎಂದು ಪ್ರಶ್ನಿಸಿದರು.

ಜಂತರ್ ಮಂತರ್ ಪ್ರತಿಭಟನೆಯಲ್ಲಿ ಭಾಗವಹಿಸಿದ್ದವರ ವಿರುದ್ಧ ಮಾಡಲಾಗಿರುವ ಟೀಕೆಗಳನ್ನೂ ಅವರು ಖಂಡಿಸಿದರು.

'ಜಂತರ್ ಮಂತರ್ನಲ್ಲಿ ಸೇರಿದ್ದ ಜನಸಮೂಹ ಮತ್ತು ಅಲ್ಲಿನ ಚಿತ್ರಗಳೇ ಪ್ರತಿಭಟನೆಯ ಸ್ವರೂಪವನ್ನು ಹೇಳುತ್ತವೆ. ಇನ್ನೆಷ್ಟು ಜನರನ್ನು ಪಾಕಿಸ್ತಾನಿಗಳು ಎಂದು ಹಣೆಪಟ್ಟಿ ಕಟ್ಟಲಾಗುತ್ತದೆ? ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳು, ವಿರೋಧ ಪಕ್ಷಗಳು ಮತ್ತು ಮಾಧ್ಯಮಗಳನ್ನೂ ಪಾಕಿಸ್ತಾನಿಗಳು ಎಂದು ಕರೆಯಲಾಗುತ್ತಿದೆಯೇ?' ಎಂದು ಅವರು ಪ್ರಶ್ನಿಸಿದರು.

'ಆಡಳಿತ ಪಕ್ಷದ ಐಟಿ ಸೆಲ್ ನವರು ಮಾತ್ರ ಭಾರತೀಯರೇ?' ಎಂದೂ ಕೇಳಿದರು.

'ಕಾಕ್ರೋಚ್' ಹೆಸರಿನ ಆನ್ಲೈನ್ ವಿಡಂಬನಾತ್ಮಕ ವೇದಿಕೆಯಿಂದ ಆರಂಭವಾದ CJP ಚಳವಳಿಯನ್ನು ಕೆಲವು ನೆರೆಯ ರಾಷ್ಟ್ರಗಳ ಪ್ರತಿಭಟನೆಗಳಿಗೆ ಹೋಲಿಸಲಾಗುವುದಿಲ್ಲ ಎಂದು ದೀಪ್ಕೆ ಹೇಳಿದರು.

'ಭಾರತದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಇದೆ. ನಮ್ಮ ಚಳವಳಿಯನ್ನು ನೆರೆಯ ರಾಷ್ಟ್ರಗಳ ಪ್ರತಿಭಟನೆಗಳಿಗೆ ಹೋಲಿಸುವವರು ಜಂತರ್ ಮಂತರ್ ನಲ್ಲಿ ನಡೆದ ಕಾರ್ಯಕ್ರಮ ಸಂಪೂರ್ಣ ಶಾಂತಿಯುತವಾಗಿತ್ತು ಎಂಬುದನ್ನು ಗಮನಿಸಬೇಕು. ದೇಶದ ವಿವಿಧ ಭಾಗಗಳಿಂದ ಯುವಕರು ಈ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು' ಎಂದು ಹೇಳಿದರು.

ಮುಂದಿನ ದಿನಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಶಾಂತಿಯುತ ಪ್ರತಿಭಟನೆಗಳನ್ನು ಆಯೋಜಿಸಲಾಗುವುದು ಎಂದು ಅವರು ತಿಳಿಸಿದರು. ಇದೇ ವೇಳೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ವಿರುದ್ಧವೂ ಟೀಕಿಸಿದರು.

'ಫಡ್ನವೀಸ್ ಮಾತನಾಡುವ ಮುನ್ನ ಯೋಚಿಸಬೇಕು. ಅವರು ಉತ್ತರ ಪ್ರದೇಶದ ಮುಖ್ಯಮಂತ್ರಿ ಅಲ್ಲ; ಮಹಾರಾಷ್ಟ್ರದಂತಹ ಪ್ರಗತಿಪರ ರಾಜ್ಯದ ಮುಖ್ಯಮಂತ್ರಿ. ನನ್ನ ಬಳಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರವಿರುವ ಪುಸ್ತಕವಿದೆ. ಅಂಬೇಡ್ಕರ್ ಅವರ ಭಾವಚಿತ್ರ ತೋರಿಸುವುದೇ ಅರಾಜಕತೆಯೇ? "ಜೈ ಭೀಮ್" ಘೋಷಣೆ ಕೂಗುವುದೂ ಅರಾಜಕತೆಯೇ?' ಎಂದು ಪ್ರಶ್ನಿಸಿದರು.

CJP ಯಾವುದೇ ರಾಜಕೀಯ ಪಕ್ಷದೊಂದಿಗೆ ಸಂಬಂಧ ಹೊಂದಿಲ್ಲ ಎಂದು ಪುನರುಚ್ಚರಿಸಿದ ಅವರು, ಚಳವಳಿಗೆ ಬೆಂಬಲ ನೀಡಲು ಬಯಸುವವರು ಹೊರಗಿನಿಂದ ಬೆಂಬಲ ನೀಡಬಹುದು. ಆದರೆ ಯಾವುದೇ ರಾಜಕೀಯ ಪಕ್ಷದೊಂದಿಗೆ ಸಂಬಂಧ ಬೆಳೆಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.

'ನಾವು ಯಾವುದೇ ರಾಜಕೀಯ ಪಕ್ಷದ ನಾಯಕರೊಂದಿಗೆ ಮಾತನಾಡಿಲ್ಲ. ಇದು Gen Z ಯುವಕರ ಚಳವಳಿ. ನಮ್ಮನ್ನು ಬೆಂಬಲಿಸಲು ಬಯಸುವವರು ಬೆಂಬಲ ನೀಡಬಹುದು. ಆದರೆ ನಾವು ಯಾವುದೇ ರಾಜಕೀಯ ಪಕ್ಷದೊಂದಿಗೆ ಸಂಬಂಧ ಹೊಂದುವುದಿಲ್ಲ' ಎಂದು ದೀಪ್ಕೆ ಪುನರುಚ್ಛರಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries