ಕೊಚ್ಚಿ: ಶಬರಿಮಲೆ ಅಯ್ಯಪ್ಪ ದೇಗುಲದಲ್ಲಿ ಭಕ್ತರಿಗೆ ನೀಡುವ 'ಆಡಿಯ ಶಿಷ್ಟಂ ತುಪ್ಪ' ಮಾರಾಟದಲ್ಲಿ ತಿರುವಾಂಕೂರು ದೇವಸ್ವಂ ಮಂಡಳಿಯ (ಟಿಡಿಬಿ) ಸಿಬ್ಬಂದಿ ಹಣ ದುರುಪಯೋಗಪಡಿಸಿಕೊಂಡಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಸ್ವತಂತ್ರ ಮರು ಲೆಕ್ಕಪರಿಶೋಧನೆ ಮಾಡುವಂತೆ ಕೇರಳ ಹೈಕೋರ್ಟ್ ಆದೇಶಿದೆ.
ಈ ಪ್ರಕರಣದಲ್ಲಿ ಜಾಗೃತ ಮತ್ತು ಭ್ರಷ್ಟಾಚಾರ ನಿಗ್ರಹ ದಳದ (ವಿಎಸಿಬಿ) ವರದಿಯ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದ ನ್ಯಾಯಮೂರ್ತಿಗಳಾದ ರಾಜಾ ವಿಜಯರಾಘವನ್ ವಿ. ಮತ್ತು ಕೆ.ವಿ. ಜಯಕುಮಾರ್ ಅವರ ಪೀಠವು, 'ಈ ವಿಷಯಕ್ಕೆ ಸಂಬಂಧಿಸಿದಂತೆ ವಿಎಸಿಬಿ ವರದಿಯು ಟಿಡಿಬಿಗೆ ಉಂಟಾದ ನಷ್ಟದ ಮೌಲ್ಯವನ್ನು ಕಡಿಮೆ ಮಾಡುವಂತೆ ತೋರುತ್ತಿದೆ ಮತ್ತು ಪ್ರಕರಣವನ್ನು ಇಲ್ಲಿಗೆ ಮುಕ್ತಾಯಗೊಳಿಸಲು ಪ್ರಯತ್ನಿಸಿದೆ' ಎಂದು ಹೇಳಿದೆ.
'ದಕ್ಷ, ಪ್ರಾಮಾಣಿಕ ಮತ್ತು ಅನುಭವಿ ಹಿರಿಯ ಅಧಿಕಾರಿಯೊಬ್ಬರು ಈ ಪ್ರಕರಣವನ್ನು ಮರು ಪರಿಶೀಲಿಸುವ ಅಗತ್ಯವಿದೆ' ಎಂದು ಪೀಠ ತಿಳಿಸಿದೆ.

