ಮುಂಬೈ: ಬಾಲ್ಯವಿವಾಹವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವ ಉದ್ದೇಶದಿಂದ ಮಹಾರಾಷ್ಟ್ರ ಸರ್ಕಾರ ಮಹತ್ತರ ಹೆಜ್ಜೆಯೊಂದನ್ನು ಇಡಲು ಮುಂದಾಗಿದೆ. ಇನ್ಮುಂದೆ ರಾಜ್ಯದಲ್ಲಿ ಲಗ್ನಪತ್ರಿಕೆ ಮೇಲೆ ವಧು ಮತ್ತು ವರರ ಹುಟ್ಟಿದ ದಿನಾಂಕವನ್ನು ಕಡ್ಡಾಯವಾಗಿ ನಮೂದಿಸುವ ನಿಯಮವನ್ನು ಜಾರಿಗೆ ತರಲು ಸರ್ಕಾರ ಗಂಭೀರವಾಗಿ ಪರಿಶೀಲಿಸುತ್ತಿದೆ.
ಬುಧವಾರ (ಜೂನ್ 24) ವಿಧಾನಸಭೆಯಲ್ಲಿ ಬಿಜೆಪಿ ಸದಸ್ಯ ಅತುಲ್ ಭಟ್ಖಾಲ್ಕರ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಅದಿತಿ ತತ್ಕಾರೆ ಈ ವಿಷಯ ತಿಳಿಸಿದರು.
'ಕಳೆದ ಕೆಲವು ವರ್ಷಗಳಲ್ಲಿ ಬಾಲ್ಯ ವಿವಾಹಗಳನ್ನು ತಡೆಗಟ್ಟಿದ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವುದನ್ನು, ಬಾಲ್ಯ ವಿವಾಹಗಳ ಸಂಖ್ಯೆಯೇ ಹೆಚ್ಚುತ್ತಿದೆ ಎಂದು ಅರ್ಥೈಸಬಾರದು. ಬದಲಿಗೆ, ಸರ್ಕಾರದ ಯಾಂತ್ರಿಕತೆಯು ಹೆಚ್ಚು ಜಾಗರೂಕತೆಯಿಂದ ಇಂತಹ ಪ್ರಕರಣಗಳನ್ನು ಪತ್ತೆಹಚ್ಚಿ, ವರದಿ ಮಾಡುತ್ತಿರುವುದರ ಸಂಕೇತವಾಗಿದೆ' ಎಂದು ಅವರು ಸ್ಪಷ್ಟಪಡಿಸಿದರು.
ರಾಜಸ್ಥಾನದ ಹಾದಿಯಲ್ಲೇ ಮಹಾರಾಷ್ಟ್ರ ಸರ್ಕಾರ
ಲಗ್ನಪತ್ರಿಕೆಯಲ್ಲಿ ವಧು-ವರರ ಜನ್ಮದಿನಾಂಕವನ್ನು ಮುದ್ರಿಸುವುದನ್ನು ಈಗಾಗಲೇ ಜಾರಿಗೆ ತಂದಿರುವ ರಾಜಸ್ಥಾನ ಸರ್ಕಾರದ ಕ್ರಮವನ್ನು ಅಧ್ಯಯನ ಮಾಡಲು ಮಹಾರಾಷ್ಟ್ರ ಸರ್ಕಾರ ಮುಂದಾಗಿದೆ
ಈ ಕುರಿತು ರಾಜಸ್ಥಾನ ಸರ್ಕಾರಕ್ಕೆ ಪತ್ರ ಬರೆಯಲಾಗಿದ್ದು, ಗ್ರಾಮೀಣಾಭಿವೃದ್ಧಿ ಹಾಗೂ ಕಾನೂನು ಮತ್ತು ನ್ಯಾಯಾಂಗ ಇಲಾಖೆಗಳೊಂದಿಗೆ ಸಮಾಲೋಚನೆ ನಡೆಸಿ ಇದನ್ನು ಮಹಾರಾಷ್ಟ್ರದಲ್ಲೂ ಅನುಷ್ಠಾನಗೊಳಿಸುವ ಸಾಧ್ಯತೆಗಳನ್ನು ಪರಿಶೀಲಿಸಲಾಗುವುದು ಎಂದು ಸಚಿವರು ಸದನಕ್ಕೆ ತಿಳಿಸಿದರು.
ಮಹಾರಾಷ್ಟ್ರದಲ್ಲಿ ಬಾಲ್ಯವಿವಾಹದ ಪ್ರಮಾಣವು 2019-21ರ ಸಮೀಕ್ಷೆಯಲ್ಲಿ ಶೇ 21.9ರಷ್ಟಿತ್ತು. ಅದು 2023-24ರ ಸಮೀಕ್ಷೆಯಲ್ಲಿ ಶೇ 19.6 ಕ್ಕೆ ಇಳಿಕೆಯಾಗಿದೆ. ಇದು ರಾಷ್ಟ್ರೀಯ ಸರಾಸರಿ ಶೇ 20.1 ಕ್ಕಿಂತ ಕಡಿಮೆ ಇದೆ ಎಂದು ಸಚಿವರು ಅಂಕಿ-ಅಂಶಗಳನ್ನು ನೀಡಿದರು.
'ಪ್ರಸಕ್ತ 2025-26ನೇ ಸಾಲಿನಲ್ಲಿ ಇದುವರೆಗೆ ಅಧಿಕಾರಿಗಳು ದಾಖಲೆಯ 1,434 ಬಾಲ್ಯವಿವಾಹಗಳನ್ನು ತಡೆದಿದ್ದು, 136 ಎಫ್‌ಐಆರ್ ದಾಖಲಿಸಿದ್ದಾರೆ' ಎಂದು ಸಚಿವೆ ಅದಿತಿ ತತ್ಕಾರೆ ಅವರು ಮಾಹಿತಿ ನೀಡಿದರು.
ಇನ್ನು, ಬಾಲ್ಯವಿವಾಹ ತಡೆ ಕಾಯ್ದೆಯನ್ನು ಮತ್ತಷ್ಟು ಕಠಿಣಗೊಳಿಸಲಾಗುತ್ತಿದ್ದು, ಕೇವಲ ಹೆತ್ತವರು ಅಥವಾ ಕುಟುಂಬದವರ ವಿರುದ್ಧ ಮಾತ್ರವಲ್ಲದೆ, ಇಂತಹ ಮದುವೆಗಳನ್ನು ಗೊತ್ತಿದ್ದೂ ನೆರವೇರಿಸುವ ಎಲ್ಲರ ಮೇಲೂ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಸಚಿವರು ಎಚ್ಚರಿಸಿದ್ದಾರೆ.
ಮದುವೆ ಮಾಡಿಸುವ ಪುರೋಹಿತರು, ಮದುವೆಯಲ್ಲಿ ಪಾಲ್ಗೊಳ್ಳುವ ವಾದ್ಯದವರು ಮತ್ತು ಮದುವೆಗೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಸಹಕರಿಸುವವರ ವಿರುದ್ಧವೂ ಎಫ್‌ಐಆರ್ ದಾಖಲಿಸಲಾಗುತ್ತಿದೆ ಎಂದರು.

