ಡೆಹರಾಡೂನ್: ಪ್ರಥಮ ಬಾರಿ ಸೇನೆಗೆ ಸೇರ್ಪಡೆ ಆಗುತ್ತಿರುವ ಒಂಬತ್ತು ಮಹಿಳಾ ಅಧಿಕಾರಿಗಳು ತರಬೇತಿ ಮುಗಿಸಿದ ಭಾರತೀಯ ಸೇನಾ ಅಕಾಡೆಮಿಯ (ಐಎಂಎ) ಮೊದಲ ತಂಡದ ನಿರ್ಗಮನ ಪಥಸಂಚಲನವನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಶನಿವಾರ ವೀಕ್ಷಿಸಿದರು.
ಐಎಂಎನ ನಿಯಮಿತ ಹಾಗೂ ತಾಂತ್ರಿಕ ಪಠ್ಯಕ್ರಮದಲ್ಲಿ ಪದವಿ ಪೂರೈಸಿ ಹೊರಬಂದವರು ಪಥಸಂಚಲನದಲ್ಲಿ ಭಾಗಿಯಾಗಿದ್ದರು.
ಒಂಬತ್ತು ಮಹಿಳಾ ಕೆಡೆಟ್‌ಗಳು ಸೇರಿ ಈ ಬ್ಯಾಚ್‌ನ 515 ಅಧಿಕಾರಿಗಳು ಭಾರತೀಯ ಸೇನೆಗೆ ಸೇರ್ಪಡೆ ಆಗುತ್ತಿದ್ದಾರೆ.
ಐವರು ಮಹಿಳಾ ಕೆಡೆಟ್ ಅಧಿಕಾರಿಗಳು ಸೇನೆಗೆ ಸೇರ್ಪಡೆ ಆಗುತ್ತಿರುವುದು ಐತಿಹಾಸಿಕ ಸಾಧನೆ ಎನಿಸಿದೆ.
1932ರಲ್ಲಿ ಐಎಂಎ ಅಸ್ತಿತ್ವಕ್ಕೆ ಬಂದಿತ್ತು. ಅಂದಿನಿಂದಲೂ ಪುರುಷ ಅಧಿಕಾರಿಗಳು ತರಬೇತಿ ಪಡೆಯುತ್ತಿದ್ದರು. ಇದೇ ಮೊದಲ ಬಾರಿ ಮಹಿಳಾ ಸೇನಾಧಿಕಾರಿಗಳು ತರಬೇತಿ ಪಡೆದಿದ್ದಾರೆ.
ಕಾರ್ಯಕ್ರಮದಲ್ಲಿ ಉತ್ತರಾಖಂಡ್‌ನ ರಾಜ್ಯಪಾಲ ಲೆಫ್ಟಿನೆಂಟ್ ಜನರಲ್ ಗುರ್ಮಿತ್ ಸಿಂಗ್, ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ, ಸೇನಾ ತರಬೇತಿ ಕಮಾಂಡ್ ಮತ್ತು ಭಾರತೀಯ ಸೇನಾ ಅಕಾಡೆಮಿಯ ಹಿರಿಯ ಅಧಿಕಾರಿಗಳು ಹಾಜರಿದ್ದರು.
ಇದೊಂದು ಮೈಲಿಗಲ್ಲು: ಮುರ್ಮು
ಕಾರ್ಯಕ್ರಮದಲ್ಲಿ ಮಾತನಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು,' ಒಂಬತ್ತು ಮಹಿಳಾ ಅಧಿಕಾರಿಗಳು ಸೇನೆಗೆ ಸೇರುತ್ತಿರುವುದು ಐಎಂಎ ಇತಿಹಾಸದಲ್ಲಿ ಸಂಭ್ರಮದ ಕ್ಷಣವಾಗಿದೆ. ರಕ್ಷಣಾ ಪಡೆಗಳಿಗೆ ಇದು ಮೈಲಿಗಲ್ಲು ಮಾತ್ರವಲ್ಲ. ಮಹಿಳಾ ಪ್ರಗತಿಯೆಡೆಗೆ ಭಾರತದ ಚೇತೋಹಾರಿ ಹೆಜ್ಜೆ' ಎಂದು ಬಣ್ಣಿಸಿದರು.
ಉತ್ತರಾಖಂಡ್‌ನ ಭಾರತೀಯ ಸೇನಾ ಅಕಾಡೆಮಿಯಲ್ಲಿ ತರಬೇತಿ ಮುಗಿಸಿದ ಸೇನಾ ಅಧಿಕಾರಿಗಳ ಪಥಸಂಚಲನದಲ್ಲಿ ಶನಿವಾರ ಭಾಗಿಯಾಗಿದ್ದ ರಾಷ್ಟ್ರಪ್ರತಿ ದ್ರೌಪದಿ ಮುರ್ಮು ಅವರು ಮಹಿಳಾ ಸೇನಾಧಿಕಾರಿಗಳ ಮೊದಲ ತಂಡದ ಜೊತೆ ಫೋಟೊ ತೆಗೆಸಿಕೊಂಡರು- ಪಿಟಿಐ ಚಿತ್ರ

