ನವದೆಹಲಿ: ಅಯೋಧ್ಯೆ ರಾಮಮಂದಿರದಲ್ಲಿ ನಡೆದಿರುವ ಲೂಟಿಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರ ಮೌನವು ದೇಶದ ಕೋಟ್ಯಂತರ ಜನರ ಧಾರ್ಮಿಕ ನಂಬಿಕೆಯ ಮೇಲಿನ ನೇರ ದಾಳಿಯಾಗಿದೆ ಎಂದು ಕಾಂಗ್ರೆಸ್ ಮಂಗಳವಾರ ಹೇಳಿದೆ.
ಈ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಂಚಿಕೊಂಡಿರುವ ಕಾಂಗ್ರೆಸ್ ಹಿರಿಯ ನಾಯಕ ಜೈರಾಮ್ ರಮೇಶ್, 'ಸಾರ್ವಜನಿಕವಾಗಿ ಚರ್ಚಿಸದೇ, ಪಾರದರ್ಶಕ ಮಾನದಂಡಗಳನ್ನು ಅಳವಡಿಸಿಕೊಳ್ಳದೇ ಮೋದಿ ಸರ್ಕಾರವು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ರಚಿಸಿತ್ತು.
ಅದಕ್ಕೆ ಆರ್‌ಎಸ್‌ಎಸ್‌ನ ಸದಸ್ಯರನ್ನು ನೇಮಿಸಿತು. ನಂತರ ಇಡೀ ಟ್ರಸ್ಟ್ ಅನ್ನು ಆರ್‌ಟಿಐ ಕಾಯ್ದೆಯ ವ್ಯಾಪ್ತಿಯಿಂದ ಹೊರಗಿಡಲಾಯಿತು' ಎಂದು ರಮೇಶ್ ಹೇಳಿದ್ದಾರೆ.
ಇದಕ್ಕೂ ಮೊದಲು, ಟ್ರಸ್ಟ್ ಅನ್ನು ವಿಸರ್ಜಿಸುವಂತೆ ಕಾಂಗ್ರೆಸ್ ಒತ್ತಾಯಿಸಿತ್ತು.
ರಾಮನ ದರ್ಶನಕ್ಕೆ ಅಡ್ಡಿ: 'ಕೈ' ಆಕ್ರೋಶ
ರಾಮಮಂದಿರಕ್ಕೆ ಭೇಟಿ ನೀಡಿ ದರ್ಶನ ಪಡೆಯಲು ಯೋಜಿಸಿ ಹೋಟೆಲ್‌ವೊಂದರಲ್ಲಿ ತಂಗಿದ್ದ ಉತ್ತರ ಪ್ರದೇಶ ಕಾಂಗ್ರೆಸ್ ನಿಯೋಗವನ್ನು ಸೋಮವಾರ ರಾತ್ರಿ ಪೊಲೀಸರು ಬಂಧಿಸಿದ್ದರು.
'ಬಿಜೆಪಿ ಸರ್ಕಾರದ ಸರ್ವಾಧಿಕಾರ ಧೋರಣೆ ಪರಾಕಾಷ್ಠೆ ತಲುಪಿದೆ. ಉತ್ತರ ಪ್ರದೇಶ ಕಾಂಗ್ರೆಸ್‌ನ ನಿಯೋಗವು ಜೂನ್ 30 ರಂದು ಅಯೋಧ್ಯೆಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಲು ಮತ್ತು ಭಗವಾನ್ ಶ್ರೀರಾಮನ ಆಶೀರ್ವಾದ ಪಡೆಯಲು ನಿರ್ಧರಿಸಿತ್ತು. ನಾನು ಅಯೋಧ್ಯೆಗೆ ಬಂದಿಳಿದ ತಕ್ಷಣವೇ, ಭಯಭೀತರಾದ ಬಿಜೆಪಿ ಸರ್ಕಾರವು ಹೋಟೆಲ್‌ನಲ್ಲಿ ತಂಗಿದ್ದ ನನ್ನನ್ನು ಪೊಲೀಸರ ಮೂಲಕ ಬಂಧಿಸಿ ಕರೆದುಕೊಂಡು ಹೋಗಿದೆ' ಎಂದು ಅಜಯ್ ರಾಯ್ 'ಎಕ್ಸ್' ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ಏತನ್ಮಧ್ಯೆ, ಬಂಧಿತ 8 ಮಂದಿ ಆರೋಪಿಗಳ ಪರವಾಗಿ ತನ್ನ ಯಾವುದೇ ಸದಸ್ಯರು ವಕಾಲತ್ತು ವಹಿಸುವುದಿಲ್ಲ ಎಂದು ಅಯೋಧ್ಯೆಯ ಫೈಜಾಬಾದ್ ಬಾರ್ ಅಸೋಸಿಯೇಷನ್ ಸೋಮವಾರ ಘೋಷಿಸಿದೆ. ಸಿಬಿಐ ತನಿಖೆ ಕೋರಿ ನ್ಯಾಯಾಲಯದ ಮೊರೆ ಹೋಗುವುದಾಗಿಯೂ ಅದು ತಿಳಿಸಿದೆ.

