ನವದೆಹಲಿ: ಒಮಾನ್ ಕರಾವಳಿಯಲ್ಲಿ ಭಾರತೀಯ ಸಿಬ್ಬಂದಿ ಇರುವ ತೈಲ ಹಡಗುಗಳ ಮೇಲೆ ಅಮೆರಿಕ ನಡೆಸಿದ ದಾಳಿಯಲ್ಲಿ ಮೂವರು ಭಾರತೀಯರು ಮೃತಪಟ್ಟಿರುವ ಘಟನೆಗೆ ಸಂಬಂಧಿಸಿದಂತೆ ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿ, ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಜೈಶಂಕರ್ ಅವರು ಪ್ರಸ್ತುತ ಯುರೋಪ್ ಪ್ರವಾಸದಲ್ಲಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಅವರು, ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಅವರೊಂದಿಗೆ ಮಾತನಾಡಿದೆ. ಒಮಾನ್ ಕರಾವಳಿಯಲ್ಲಿ ಅಮೆರಿಕ ಸೇನೆ ನಡೆಸಿದ ದಾಳಿಯಲ್ಲಿ ಮೂವರು ಭಾರತೀಯರು ಮೃತಪಟ್ಟಿರುವ ಸಂಬಂಧ ಭಾರತದ ಪರವಾಗಿ ಬಲವಾದ ಪ್ರತಿಭಟನೆ ದಾಖಲಿಸಿದ್ದೇನೆ ಎಂದು ತಿಳಿಸಿದ್ದಾರೆ.
ಮುಂದುವರಿದು, ವಾಣಿಜ್ಯ ಹಡಗುಗಳ ಮೇಲೆ ಇಂತಹ ಮಾರಣಾಂತಿಕ ದಾಳಿಗಳನ್ನು ಯಾವುದೇ ಕಾರಣಕ್ಕೂ ಸಮರ್ಥಿಸಲು ಸಾಧ್ಯವಿಲ್ಲ ಎಂದು ಅವರು ಪುನರುಚ್ಚರಿಸಿದ್ದಾರೆ.
ಅಮೆರಿಕದ ಅಧಿಕಾರಿಗೆ ಸಮನ್ಸ್:
ಒಮಾನ್ ಕರಾವಳಿಯಲ್ಲಿ ಒಂದೇ ವಾರದಲ್ಲಿ ಭಾರತೀಯ ಸಿಬ್ಬಂದಿ ಇದ್ದ ಮೂರು ಹಡಗುಗಳ ಮೇಲೆ ಅಮೆರಿಕ ದಾಳಿ ನಡೆಸಿದ್ದನ್ನು ಭಾರತವು ಖಂಡಿಸಿದ್ದು, ಎರಡನೇ ಸಲ ತನ್ನ ಬಲವಾದ ಪ್ರತಿಭಟನೆಯನ್ನು ದಾಖಲಿಸಿದೆ. ಶುಕ್ರವಾರ ನವದೆಹಲಿಯಲ್ಲಿರುವ ಅಮೆರಿಕ ವಿದೇಶಾಂಗ ಕಚೇರಿಯ ಉಪ ಮುಖ್ಯಸ್ಥ ಜಾಸೊನ್ ಮೀಕ್ಸ್ ಅವರನ್ನು ಭಾರತದ ವಿದೇಶಾಂಗ ಇಲಾಖೆಯ ಕೇಂದ್ರ ಕಚೇರಿಗೆ ಕರೆಸಿಕೊಂಡು ಸಮನ್ಸ್ ನೀಡಿತ್ತು. ಭಾರತೀಯ ಸಿಬ್ಬಂದಿ ಇರುವ ಹಡಗುಗಳ ಮೇಲೆ ಅಮೆರಿಕ ಸೇನೆ ನಡೆಸುತ್ತಿರುವ ದಾಳಿಗಳು ಖಂಡನೀಯ ಎಂದು ಹೇಳಿತ್ತು. ಬುಧವಾರ ರಾತ್ರಿಯೂ ಕೂಡ ಅವರನ್ನು ಕರೆಸಿಕೊಂಡು ಭಾರತ ಸರ್ಕಾರವು ತನ್ನ ಅಸಮಾಧಾನ ವ್ಯಕ್ತಪಡಿಸಿತ್ತು.
'ಭಾರತದ ನಾವಿಕರನ್ನು ಹೊತ್ತೊಯುತ್ತಿದ್ದ ಹಡಗುಗಳ ಮೇಲೆ ಅಮೆರಿಕ ನೌಕಾಪಡೆಯು ದಾಳಿ ಮುಂದುವರಿಸಿದ ಕುರಿತು ಬಲವಾದ ಪ್ರತಿಭಟನೆಯನ್ನು ದಾಖಲಿಸಿದ್ದೇವೆ. ಇದು ಈಗಾಗಲೇ ತಪ್ಪಿಸಬಹುದಾ ಗಿದ್ದ ಮೂರು ಜೀವಗಳ ಪ್ರಾಣಹಾನಿಗೆ ಕಾರಣವಾಗಿದೆ ಎಂದು ವಿದೇಶಾಂಗ ಇಲಾಖೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಹಡಗುಗಳ ಮೇಲೆ ಸರಣಿ ದಾಳಿ
ಪಲಾವು ದೇಶದ ಧ್ವಜ ಹೊತ್ತಿದ್ದ, 24 ಮಂದಿ ಭಾರತೀಯ ಸಿಬ್ಬಂದಿಯನ್ನು ಒಳಗೊಂಡಿದ್ದ 'ಮರಿವೆಕ್ಸ್' ಹಡಗಿನ ಮೇಲೆ ಜೂನ್ 8ರಂದು ಅಮೆರಿಕ ಪಡೆಗಳು ದಾಳಿ ನಡೆಸಿದ್ದವು. ಈ ವೇಳೆ ಎಲ್ಲಾ ಸಿಬ್ಬಂದಿಯನ್ನು ರಕ್ಷಿಸಲಾಗಿತ್ತು.
ಜೂನ್ 10ರಂದು ಪಲಾವು ಧ್ವಜವಿದ್ದ 'ಸೆಟ್ಬೆಲ್ಲೊ' ಹೆಸರಿನ ಮತ್ತೊಂದು ಹಡಗಿನ ಮೇಲೆ ಅಮೆರಿಕ ದಾಳಿ ನಡೆಸಿದ್ದು, ಹಡಗಿನಲ್ಲಿದ್ದ 24 ಮಂದಿ ಭಾರತೀಯ ಸಿಬ್ಬಂದಿಯ ಪೈಕಿ ಮೂವರು ಮೃತಪಟ್ಟಿದ್ದಾರೆ.
ಗಿನಿ-ಬಿಸ್ಸಾವ್ ದೇಶದ ಧ್ವಜವನ್ನು ಹೊತ್ತಿದ್ದ 'ಜಲವೀರ್' ಎಂಬ ಹಡಗಿನ ಮೇಲೂ ಜೂನ್ 11ರಂದು (ಗುರುವಾರ) ದಾಳಿ ನಡೆದಿದೆ.
ಇರಾನ್ ಡ್ರೋನ್ ದಾಳಿ ಮಾಡಿದೆ ಎಂದ ಟ್ರಂಪ್
ಭಾರತದ ಹಡಗುಗಳ ಮೇಲೆ ಇರಾನ್ ದಾಳಿ: ಹೊರ್ಮುಜ್ ಜಲಸಂಧಿ ದಾಟುತ್ತಿದ್ದ ಭಾರತದ ಹಡಗುಗಳ ಮೇಲೆ ಇರಾನ್ ಡ್ರೋನ್ ದಾಳಿ ಮಾಡಿದೆ ಎಂದು ಶುಕ್ರವಾರ ಆರೋಪಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, 'ಇದು ಸ್ವಲ್ಪವೂ ಸ್ವೀಕಾರಾರ್ಹವಲ್ಲ' ಎಂದು ಕಿಡಿಕಾರಿದ್ದಾರೆ.

