ನವದೆಹಲಿ: ಭಾರತದ ಸಂಸತ್ತಿನ ಮೇಲ್ಮನೆ ಎಂದು ಕರೆಯಲ್ಪಡುವ ರಾಜ್ಯಸಭೆಯ ಚುನಾವಣೆಯು ಇದೇ ಜೂನ್ 18ರಂದು ನಡೆಯಲಿದೆ. ಲೋಕಸಭೆಗೆ ಜನರೇ ನೇರವಾಗಿ ತಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡಿ ಕಳಿಸಿದರೆ, ರಾಜ್ಯಸಭೆಯಲ್ಲಿ ಪರೋಕ್ಷ ಚುನಾವಣಾ ಪ್ರಕ್ರಿಯೆ ಮೂಲಕ ಆಭ್ಯರ್ಥಿಗಳು ಆಯ್ಕೆಯಾಗುತ್ತಾರೆ. ರಾಜ್ಯಸಭೆಯು ಲೋಕಸಭೆಯ ಹಾಗೆಯೇ ಸಮನಾದ ಅಧಿಕಾರವನ್ನು ಹೊಂದಿರುತ್ತದೆ.
ರಾಜ್ಯಸಭಾ ಚುನಾವಣೆ ಹೇಗೆ ನಡೆಯುತ್ತದೆ?:
ರಾಜ್ಯಸಭೆಯು 'ಖಾಯಂ ಸದನ'ವಾಗಿದ್ದು, ಇದನ್ನು ವಿಸರ್ಜಿಸಲು ಸಾಧ್ಯವಿಲ್ಲ. ಅದರ ಬದಲಿಗೆ, ಸದಸ್ಯರು ಆರು ವರ್ಷಗಳ ಅವಧಿಗೆ ಆಯ್ಕೆಯಾಗುತ್ತಾರೆ. ಪ್ರತಿ ಎರಡು ವರ್ಷಕ್ಕೊಮ್ಮೆ ಮೂರನೇ ಒಂದು ಭಾಗದಷ್ಟು (1/3) ಸದಸ್ಯರು ನಿವೃತ್ತರಾಗುತ್ತಾರೆ ಮತ್ತು ಆ ಸ್ಥಾನಗಳಿಗೆ ಚುನಾವಣೆ ನಡೆಯುತ್ತದೆ.
ಯಾರು ಮತ ಚಲಾವಣೆ ಮಾಡುತ್ತಾರೆ..?: ರಾಜ್ಯಸಭೆ ಚುನಾವಣೆಯು ಸಾಮಾನ್ಯ ಚುನಾವಣೆಗಳಿಗಿಂತ ಭಿನ್ನವಾಗಿರುತ್ತದೆ. ಸಾಮಾನ್ಯ ನಾಗರಿಕರು ಈ ಚುನಾವಣೆಯಲ್ಲಿ ನೇರವಾಗಿ ಮತದಾನ ಮಾಡುವುದಿಲ್ಲ. ರಾಜ್ಯಗಳ ವಿಧಾನಸಭೆಗಳ ಚುನಾಯಿತ ಸದಸ್ಯರು, ಅಂದರೆ ಶಾಸಕರುಗಳು ಇಲ್ಲಿ ಮತದಾರರಾಗಿರುತ್ತಾರೆ.
ಶಾಸಕರು ಕೇವಲ ಒಬ್ಬ ಅಭ್ಯರ್ಥಿಗೆ ವೋಟ್ ಮಾಡುವ ಬದಲಿಗೆ, ಬ್ಯಾಲೆಟ್ ಪೇಪರ್‌ನಲ್ಲಿ ತಮ್ಮ ಮೊದಲ ಆದ್ಯತೆ, ಎರಡನೇ ಆದ್ಯತೆ ಯಾರು ಎಂಬುದನ್ನು 1, 2, 3 ಎಂದು ಬರೆದು ಗುರುತಿಸಬೇಕು. ಇಲ್ಲಿ ಯಾವುದೇ ರಹಸ್ಯ ಮತದಾನ ಇರುವುದಿಲ್ಲ. ಶಾಸಕರು ತಾವು ಯಾರಿಗೆ ಮತ ಹಾಕುತ್ತಿದ್ದೇವೆ ಎಂಬುದನ್ನು ತಮ್ಮ ಪಕ್ಷದ ಅಧಿಕೃತ ಏಜೆಂಟ್‌ಗೆ ತೋರಿಸಿಯೇ ಮತಪೆಟ್ಟಿಗೆಗೆ ಹಾಕಬೇಕು. ಇಲ್ಲದಿದ್ದರೆ ಆ ಮತ ಅಸಿಂಧುವಾಗುತ್ತದೆ. ಲೋಕಸಭೆ ಚುನಾವಣೆಯಂತೆ ಇಲ್ಲಿ ಯಾರು ಅತಿ ಹೆಚ್ಚು ವೋಟ್ ಪಡಿತಾರೋ ಅವರು ಗೆಲ್ಲುವುದಿಲ್ಲ. ಬದಲಿಗೆ, ಗೆಲ್ಲಲು ಒಂದು ನಿರ್ದಿಷ್ಟ ಕನಿಷ್ಠ ಮತಗಳ ಕೋಟಾವನ್ನು ತಲುಪಬೇಕಾಗುತ್ತದೆ.
ನಾಮನಿರ್ದೇಶಿತ ಸದಸ್ಯರು: ರಾಜ್ಯಸಭೆಯ ಒಟ್ಟು 245 ಸದಸ್ಯರಲ್ಲಿ 233 ಸದಸ್ಯರು ರಾಜ್ಯಗಳಿಂದ ಆಯ್ಕೆಯಾದರೆ, ಉಳಿದ 12 ಸದಸ್ಯರನ್ನು ಭಾರತದ ರಾಷ್ಟ್ರಪತಿಗಳು ನೇರವಾಗಿ ನಾಮನಿರ್ದೇಶನ ಮಾಡುತ್ತಾರೆ. ವಿಜ್ಞಾನ, ಕಲೆ, ಸಾಹಿತ್ಯ ಮತ್ತು ಸಮಾಜಸೇವೆ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದವರನ್ನು ಈ ಸ್ಥಾನಕ್ಕೆ ಆಯ್ಕೆ ಮಾಡಲಾಗುತ್ತದೆ.
ಈ ತಿಂಗಳು ಹಲವು ಸದಸ್ಯರ 6 ವರ್ಷಗಳ ಅವಧಿ ಮುಕ್ತಾಯಗೊಳ್ಳುತ್ತಿರುವ ಹಿನ್ನೆಲೆಯಲ್ಲಿ 10 ರಾಜ್ಯಗಳ ಒಟ್ಟು 24 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ. ಇದರೊಂದಿಗೆ, ವಿಧಾನಸಭೆಗೆ ಆಯ್ಕೆಯಾದ ಸಂಸದರು ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ತೆರವಾಗಿದ್ದ ಮಹಾರಾಷ್ಟ್ರ ಮತ್ತು ತಮಿಳುನಾಡಿನ 2 ಸ್ಥಾನಗಳಿಗೆ ಉಪಚುನಾವಣೆ ನಡೆಯಲಿದೆ. ಪ್ರಸ್ತುತ ಕರ್ನಾಟಕ ರಾಜ್ಯದಿಂದ ಒಟ್ಟು 12 ಸದಸ್ಯರು ರಾಜ್ಯಸಭೆಯಲ್ಲಿ ರಾಜ್ಯವನ್ನು ಪ್ರತಿನಿಧಿಸುತ್ತಾರೆ. ಅದರಲ್ಲಿ 4 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.
ಈ ಬಾರಿಯ ಚುನಾವಣಾ ವೇಳಾಪಟ್ಟಿ:
ಜೂನ್ 8, 2026 - ನಾಮಪತ್ರ ಸಲ್ಲಿಕೆಗೆ ಕೊನೆಯ ದಿನಾಂಕ.
ಜೂನ್ 9, 2026 - ನಾಮಪತ್ರಗಳ ಪರಿಶೀಲನೆ.
ಜೂನ್ 11, 2026 - ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕ.
ಜೂನ್ 18, 2026 - ಮತದಾನ (ಬೆಳಿಗ್ಗೆ 9:00 ರಿಂದ ಸಂಜೆ 4:00 ರವರೆಗೆ) ಮತ್ತು ಅದೇ ಸಂಜೆ ಮತ ಎಣಿಕೆ ನಡೆಯಲಿದೆ.
ಸದನದ ಪ್ರಸ್ತುತ ಬಲಾಬಲ: ರಾಜ್ಯಸಭೆಯಲ್ಲಿ ಆಡಳಿತಾರೂಢ ಮೈತ್ರಿಕೂಟ, ವಿರೋಧ ಪಕ್ಷ ಮತ್ತು ಪ್ರಾದೇಶಿಕ ಅಥವಾ ಸ್ವತಂತ್ರ ಪಕ್ಷಗಳ ಸದಸ್ಯರಿದ್ದಾರೆ. ಒಟ್ಟು ಸದಸ್ಯ ಬಲವು 245 (233 ಚುನಾಯಿತ + 12 ನಾಮನಿರ್ದೇಶಿತ). ಬಹುಮತಕ್ಕೆ 123 ಸ್ಥಾನಗಳು ಅಗತ್ಯವಿದೆ. ಸದ್ಯ ಬಿಜೆಪಿ ನೇತೃತ್ವದ ಆಡಳಿತಾರೂಢ ಮೈತ್ರಿಕೂಟವು ಸದನದಲ್ಲಿ 140ಕ್ಕೂ ಹೆಚ್ಚು ಸ್ಥಾನಗಳನ್ನು ಹೊಂದುವ ಮೂಲಕ ಅತಿದೊಡ್ಡ ಪಕ್ಷವಾಗಿದೆ. ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟ 65ರಿಂದ 75 ಸ್ಥಾನಗಳೊಂದಿಗೆ ವಿರೋಧ ಪಕ್ಷವಾಗಿದೆ.

