ಕಾಸರಗೋಡು: ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಸೌಲಭ್ಯ ಕಲ್ಪಿಸುವ ಕೇರಳ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ 'ಪ್ರಿಯದರ್ಶಿನಿ' ಯೋಜನೆ ಇಂದಿನಿಂದ ಕಾಸರಗೋಡು ಸೇರಿದಂತೆ ರಾಜ್ಯದಾದ್ಯಂತ ಜಾರಿಯಾಗಲಿದೆ. ಯೋಜನೆಯನ್ವಯ ಜಿಲ್ಲೆಯ 75 ಕೆಎಸ್‍ಆರ್‍ಟಿಸಿ ಬಸ್‍ಗಳಲ್ಲಿ ಸೇವೆ ಲಭ್ಯವಾಗಲಿದೆ. ಉಚಿತ ಸೇವೆಯನ್ವಯ ಮಹಿಳೆಯರಿಗೆ ಬೆಳಗ್ಗೆ 9ರ ನಂತರ ಪ್ರಯಾಣ ಸೌಕರ್ಯ ಆರಂಭಗೊಳ್ಳಲಿದೆ.
ಪ್ರಿಯದರ್ಶಿನಿ ಯೋಜನೆ ಸವಲತ್ತು ಕಾಸರಗೋಡು-ಮಂಗಳೂರು, ಕಾಸರಗೋಡು-ಸುಳ್ಯ ಹಾಗೂ ಕಾಸರಗೋಡು-ಪುತ್ತೂರು ಅಂತಾರಾರಾಜ್ಯ ಮಾರ್ಗಗಳಲ್ಲಿ ಸಂಚರಿಸುವ ಕೇರಳ ಕೆಎಸ್‍ಆರ್‍ಟಿಸಿ ಬಸ್‍ಗಳಿಗೂ ವಿಸ್ತರಿಸಲಾಗಿದ್ದು, ಗಡಿಪ್ರದೇಶದ ಮಹಿಳೆಯರಿಗೆ ಹೆಚ್ಚಿನ ಅನುಕೂಲವಾಗಲಿದೆ. ಟೌನ್-ಟು-ಟೌನ್, ಲಿಮಿಟೆಡ್ ಸ್ಟಾಪ್ ಮತ್ತು ಆರ್ಡಿನರಿ ಬಸ್‍ಗಳಿಗೂ ಯೋಜನೆಯನ್ನು ವಿಸ್ತರಿಸಲಾಗಿದ್ದು ಇದರಿಮದ ಮತ್ತಷ್ಟು ಮಹಿಳಾ ಪ್ರಯಾಣಿಕರಿಗೆ ಪ್ರಯೋಜನ ಲಭ್ಯವಾಗಲಿದೆ.
ಕಾಸರಗೋಡು ಜಿಲ್ಲೆಯಲ್ಲಿ ಕೆಎಸ್ಸಾರ್ಟಿಸಿ ಬಸ್‍ಗಳ ಸಂಖ್ಯೆ ಕಡಿಮೆಯಿದ್ದು, ಕಾಸರಗೋಡು ಮತ್ತು ಮಂಜೇಶ್ವರ ತಾಲೂಕು ವ್ಯಾಪ್ತಿಯ ಬಹುತೇಕ ಬಸ್‍ಗಳು ಅಂತಾರಾಜ್ಯ ಸಂಚಾರ ನಡೆಸುತ್ತಿರುವುದರಿಂದ ಇಲ್ಲಿನ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಯೋಜನೆ ಹೆಚ್ಚಿನ ಪ್ರಯೋಜನಕ್ಕೆ ಬಾರದ ಸ್ಥಿತಿ ನಿರ್ಮಾಣವಾಗಿತ್ತು. ಶಾಸಕ ಎ.ಕೆ.ಎಂ ಅಶ್ರಫ್ ಅವರ ವಿಶೇಷ ಕಾಳಜಿಯಿಂದ ಅಂತಾರಾಜ್ಯ ಸಂಚಾರದ ಕೆಎಸ್ಸಾರ್ಟಿಸಿ ಬಸ್‍ಗಳಲ್ಲೂ ಉಚಿತ ಯೋಜನೆ ಲಭ್ಯವಾಗುವ ಮೂಲಕ ಹೆಚ್ಚಿನ ಸಂಖ್ಯೆಯ ಮಹಿಳೆಯರಿಗೆ ಪ್ರಯೋಜನ ಲಭ್ಯವಾಗಲಿದೆ. ಫಾಸ್ಟ್ ಪ್ಯಾಸೆಂಜರ್ ಹೊರತುಪಡಿಸಿ ಇತರ ಬಸ್‍ಗಳಲ್ಲಿ ಉಚಿತ ಬಸ್ ಪ್ರಯಾಣದ ಸವಲತ್ತು ಲಭ್ಯವಾಗಲಿದೆ.
ಉಚಿತ ಬಸ್ ಯೋಜನೆ ರಾಜ್ಯಮಟ್ಟದ ಉದ್ಘಾಟನೆಯನ್ನು ಮುಖ್ಯಮಂತ್ರಿ ವಿ.ಡಿ ಸತೀಶನ್ ತಿರುವನಂತಪುರ ಬಸ್ ನಿಲ್ದಾಣದಲ್ಲಿ ನಡೆಸಲಿದ್ದು, ಬೆಳಗ್ಗೆ 9ಕ್ಕೆ ಉಪ್ಪಳ ಬಸ್ ನಿಲ್ದಾಣದಲ್ಲಿ ಶಾಸಕ ಎ.ಕೆ.ಎಂ ಅಶ್ರಫ್ ಉಚಿತ ಬಸ್ ಯೋಜನೆಗೆ ಫ್ಲ್ಯಾಗ್‍ಆಫ್ ನಡೆಸುವರು.

