ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇಂದಿನಿಂದ ಆರು ದಿನಗಳವರೆಗೆ ಫ್ರಾನ್ಸ್ ಮತ್ತು ಸ್ಲೋವಾಕಿಯಾಕ್ಕೆ ಪ್ರವಾಸ ಕೈಗೊಂಡಿದ್ದು, ಈ ವೇಳೆ ಅವರು ಜಿ7 ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಸೋಮವಾರದಿಂದ ಮೂರು ದಿನಗಳವರೆಗೆ ಫ್ರಾನ್ಸ್‌ನಲ್ಲಿ ಜಿ7 ಶೃಂಗಸಭೆ ನಡೆಯಲಿದ್ದು, ಜಾಗತಿಕ ವಿಷಯಗಳ ಕುರಿತು ವಿಶ್ವದ ನಾಯಕರೊಂದಿಗೆ ಪ್ರಧಾನಿ ಮೋದಿ ಅವರು ಚರ್ಚೆ ನಡೆಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
'ಭಾರತದ ಕಾರ್ಯತಂತ್ರದ ದೃಷ್ಟಿಕೋನದಲ್ಲಿ ಫ್ರಾನ್ಸ್ ವಿಶೇಷ ಸ್ಥಾನವನ್ನು ಹೊಂದಿದೆ. ಈ ವರ್ಷದ ಆರಂಭದಲ್ಲಿ ಅಧ್ಯಕ್ಷ ಮ್ಯಾಕ್ರನ್ ಅವರು ಭಾರತಕ್ಕೆ ಭೇಟಿ ನೀಡಿದ್ದು, ನಮ್ಮ ಸಹಭಾಗಿತ್ವವನ್ನು ಗಟ್ಟಿಗೊಳಿಸಿದೆ' ಎಂದು ಪ್ರಧಾನಿ ಮೋದಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಮುಂದುವರಿದು, ಜಿ7 ಶೃಂಗಸಭೆಯಲ್ಲಿ ಭಾರತ ಪಾಲ್ಗೊಳ್ಳುತ್ತಿರುವುದು, ನಮ್ಮ ದೇಶದ ಮೇಲೆ ಇಟ್ಟಿರುವ ವಿಶ್ವಾಸವನ್ನು ಮತ್ತು ಜಾಗತಿಕ ಮಟ್ಟದಲ್ಲಿ ದೇಶದ ಬೆಳೆಯುತ್ತಿರುವ ಪ್ರಭಾವವನ್ನು ಪ್ರತಿಬಿಂಬಿಸುತ್ತದೆ' ಎಂದಿದ್ದಾರೆ.
ಇದೇ ವೇಳೆ, ಬ್ರಾಟಿಸ್ಲಾವಾದಲ್ಲಿ ಸ್ಲೋವಾಕಿಯಾದ ಅಧ್ಯಕ್ಷ ಪೀಟರ್ ಪೆಲ್ಲೆಗ್ರಿನಿ ಮತ್ತು ಪ್ರಧಾನಿ ರಾಬರ್ಟ್ ಫಿಕೊ ಅವರೊಂದಿಗೆ ಚರ್ಚೆ ನಡೆಸಲು ಎದುರು ನೋಡುತ್ತಿರುವುದಾಗಿಯೂ ಅವರು ತಿಳಿಸಿದ್ದಾರೆ.
1993ರಲ್ಲಿ ಸ್ಲೋವಕಿಯಾ ಸ್ವತಂತ್ರಗೊಂಡಿದ್ದು, ಅದರ ನಂತರ ಭಾರತ ಪ್ರಧಾನಿಯೊಬ್ಬರು ಆ ದೇಶಕ್ಕೆ ಭೇಟಿ ನೀಡುತ್ತಿರುವುದು ಇದೇ ಮೊದಲು.

