ನವದೆಹಲಿ: ಭಾರತದ ಜೊತೆಗಿನ ವಿವಾದಾತ್ಮಕ ಗಡಿಗಳ ಕುರಿತಂತೆ ಅರ್ಲಿ ಹಾರ್ವೆಸ್ಟ್ ಒಪ್ಪಂದ ಮಾಡಿಕೊಳ್ಳಲು ಚೀನಾ ಬಯಸಿದ್ದು, ಸೆಪ್ಟೆಂಬರ್ 12,13ರಂದು ಭಾರತದಲ್ಲಿ ನಡೆಯಲಿರುವ ಬ್ರಿಕ್ಸ್ ಶೃಂಗಸಭೆಯ ಸಂದರ್ಭ ಭಾರತ ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ನಡುವೆ ಮಾತುಕತೆ ನಡೆಯಲಿದೆ ಎಂದು ವರದಿ ತಿಳಿಸಿದೆ.
ಭಾರತ ಮತ್ತು ಚೀನಾ ನಡುವಿನ ವಿವಾದಿತ ಗಡಿಗಳ ಪರಿಣಾಮಕಾರಿ ನಿರ್ವಹಣೆಗೆ ಹೊಸ ಕಾರ್ಯತಂತ್ರ ರೂಪಿಸುವತ್ತಲೂ ಉಭಯ ದೇಶಗಳು ಕಾರ್ಯೋನ್ಮುಖವಾಗಿವೆ ಎಂದು ವರದಿ ತಿಳಿಸಿದೆ.
2020ರ ಏಪ್ರಿಲ್-ಮೇ ತಿಂಗಳಿನಲ್ಲಿ ಪೂರ್ವ ಲಡಾಕ್‌ನ ಅಂತರರಾಷ್ಟ್ರೀಯ ವಾಸ್ತವಿಕ ಗಡಿ ರೇಖೆ ಬಳಿ ಭಾರತ ಮತ್ತು ಚೀನಾ ಸೈನಿಕರ ನಡುವೆ ರಕ್ತಸಿಕ್ತ ಸಂಘರ್ಷ ನಡೆದಿತ್ತು. ಬಳಿಕ, ಸೇನಾ ಜಮಾವಣೆ ಮೂಲಕ ಮತ್ತಷ್ಟು ಸಂಘರ್ಷದ ವಾತಾವರಣ ನಿರ್ಮಾಣವಾಗಿತ್ತು. ಮಾತುಕತೆ ಮೂಲಕ ಉಭಯ ದೇಶಗಳು ಸೇನೆ ಹಿಂತೆಗೆದುಕೊಂಡಿದ್ದವು.
ಚೀನಾ ಗಡಿ ವಿವಾದದ ಮಧ್ಯಂತರ ಒಪ್ಪಂದ ಬಯಸಿದ್ದರೆ ಭಾರತವು ಅಂತರ್‌ಗಡಿ ನದಿ ವಿವಾದದ ಕುರಿತಂತೆ ಮಾತುಕತೆಗೆ ಉತ್ಸುಕವಾಗಿದೆ ಎಂದು ವರದಿ ತಿಳಿಸಿದೆ.
ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ಜೊತೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಡೊಭಾಲ್ ಅವರು ಈ ವಾರ ಗಡಿ ವಿವಾದ ಕುರಿತಂತೆ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ.
ಈ ವರ್ಷಾಂತ್ಯಕ್ಕೆ ಭಾರತ-ಚೀನಾ ನಡುವೆ 25ನೇ ಸಂಧಾನ ಸಭೆಗೂ ಮುನ್ನ ಪೂರ್ವ ತಯಾರಿಯಾಗಿ ಸೋಮವಾರ ಉಭಯ ನಾಯಕರು ದ್ವೀಪಕ್ಷೀಯ ಸಭೆ ನಡೆಸಿದ್ದಾರೆ. ಚೀನಾ ಕಮ್ಯುನಿಸ್ಟ್ ಪಕ್ಷದ ಪಾಲಿಟ್ ಬ್ಯೂರೊ ಸದಸ್ಯರಾಗಿರುವ ವಾಂಗ್, ಷಿ ಜಿನ್‌ಪಿಂಗ್‌ಗೆ ಭದ್ರತಾ ಸಲಹೆಗಾರರೂ ಹೌದು.
ಗಡಿ ವಿವಾದ ಬಗೆಹರಿಸುವ ನಿಟ್ಟಿನಲ್ಲಿ 2025ರ ಆಗಸ್ಟ್‌ನಲ್ಲಿ ವಾಂಗ್ ಮತ್ತು ಡೋಬಾಲ್ ನಡುವೆ ದ್ವೀಪಕ್ಷೀಯ ಮಾತುಕತೆ ನಡೆದಿತ್ತು. ಆ ಬಳಿಕ ಉಭಯ ದೇಶಗಳ ನಡುವೆ 24ನೇ ಸಂಧಾನ ಸಭೆಯೂ ಆಯೋಜನೆಗೊಂಡಿತ್ತು. ಅದಾದ 10 ತಿಂಗಳ ನಂತರ ಈ ಭೇಟಿ ನಡೆದಿದೆ.
ಪ್ರಮುಖವಾಗಿ ಸಿಕ್ಕಿಂ ಗಡಿ ವಿವಾದ ಸೇರಿದಂತೆ ಉಭಯ ದೇಶಗಳ ನಡುವಿನ ವಿವಾದಾತ್ಮಕ ಗಡಿ ಕುರಿತಂತೆ ಅರ್ಲಿ ಹಾರ್ವೆಸ್ಸ್ ಡೀಲ್‌ಗ ಚೀನಾ ಬಯಸುತ್ತಿದೆ. ಆದರೆ, ಚೀನಾ ಇಂತಹ ಪ್ರಸ್ತಾಪಗಳನ್ನು ಈ ಹಿಂದೆ ಭಾರತ ತಿರಸ್ಕರಿಸಿರುವ ಉದಾಹರಣೆ ಇದೆ.
ಗಡಿ ವಿವಾದವನ್ನು ಬಗೆಹರಿಸಿಕೊಳ್ಳುವ ನಿಟ್ಟಿನಲ್ಲಿ 2025ರಲ್ಲಿ ಉಭಯ ದೇಶಗಳ ನಾಯಕರು ರಾಜಕೀಯ ಮಾನದಂಡ ಮತ್ತು ಮಾರ್ಗಸೂಚಿ ತತ್ವಗಳ ಒಪ್ಪಂದಕ್ಕೆ ಬಂದಿದ್ದವು. ಲಡಾಖ್ ಸಂಘರ್ಷ ಕೊನೆಗೊಂಡ ಬಳಿಕ 24ನೇ ಸಂಧಾನ ಸಭೆಯಲ್ಲಿ ಗಡಿ ವಿವಾದಗಳನ್ನು ಬಗೆಹರಿಸಲು ಅರ್ಲಿ ಹಾರ್ವೆಸ್ಟ್ ಡೀಲ್ ಕುರಿತು ಪರಿಶೀಲನೆಗೆ ತಜ್ಞರ ಸಮಿತಿ ರಚಿಸಲು ಭಾರತ ಒಪ್ಪಿಗೆ ಸೂಚಿಸಿತ್ತು.
ಗಡಿ ಪ್ರದೇಶದಲ್ಲಿ ಶಾಂತಿ ಮತ್ತು ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವ ನಿಟ್ಟಿನಲ್ಲಿ ಕಾರ್ಯತಂತ್ರ ರೂಪಿಸುವ ಬಗ್ಗೆಯೂ ಉಭಯ ದೇಶಗಳು ಚರ್ಚೆ ನಡೆಸುತ್ತಿವೆ ಎಂದು ಮೂಲಗಳು ತಿಳಿಸಿವೆ.
ವಾಂಗ್ ದೆಹಲಿ ಭೇಟಿ ಸಂದರ್ಭ ಪ್ರಧಾನಿ ಮೋದಿಯವರನ್ನೂ ಭೇಟಿ ಮಾಡಿದ್ದು, 2025 ಸೆಪ್ಟೆಂಬರ್ ಮತ್ತು 2024 ಅಕ್ಟೋಬರ್‌ನಲ್ಲಿ ಉಭಯ ದೇಶಗಳ ನಾಯಕರ ನಡುವೆ ನಡೆದ ಸಭೆಯಲ್ಲಿ ಒಮ್ಮತಕ್ಕೆ ಬಂದಿದ್ದ ಕೆಲವು ಸಂಧಾನ ವಿಷಯಗಳ ಪ್ರಗತಿ ಕುರಿತು ವಾಂಗ್ ಮೋದಿ ಅವರ ಜೊತೆ ಮಾತುಕತೆ ನಡೆಸಿದ್ದಾರೆ ಎಂದು ಚೀನಾ ವಿದೇಶಾಂಗ ಸಚಿವಾಲಯದ ಪ್ರಕಟಣೆ ತಿಳಿಸಿದೆ.

