ನವದೆಹಲಿ: 'ವಿಚಾರಣಾ ನ್ಯಾಯಾಲಯವು ತಪ್ಪಾಗಿ ನೀಡಿರುವ ಕಡಿಮೆ ಶಿಕ್ಷೆಯನ್ನೇ ಮುಂದುವರಿಸುವಂತೆ ಒತ್ತಾಯಿಸುವ ಅಧಿಕಾರ ಅಪರಾಧಿಗಳಿಗೆ ಇಲ್ಲ. ಸಿಆರ್‌ಪಿಸಿಯ ಸೆಕ್ಷನ್ 386 (ಬಿ), ಅಪರಾಧಿಗಳಿಗೆ ಅಂತಹ ಅಧಿಕಾರ ನೀಡುವುದಿಲ್ಲ' ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ.
ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಅಪರಾಧಿಗಳ ಜೈಲು ಶಿಕ್ಷೆಯನ್ನು 12 ವರ್ಷಗಳಿಂದ 20 ವರ್ಷಗಳಿಗೆ ಹೆಚ್ಚಿಸುವ ಸಿಕ್ಕಿಂ ಹೈಕೋರ್ಟ್‌ನ ತೀರ್ಪನ್ನು ನ್ಯಾಯಮೂರ್ತಿಗಳಾದ ಬಿ.ವಿ.ನಾಗರತ್ನ ಮತ್ತು ಉಜ್ಜಲ್ ಭುಯಾನ್ ಅವರ ಪೀಠ ಎತ್ತಿಹಿಡಿಯುವಾಗ ಈ ತೀರ್ಪು ನೀಡಿದೆ.
ಅತ್ಯಾಚಾರ ಮತ್ತು ಸಾಮೂಹಿಕ ಅತ್ಯಾಚಾರ ಸೇರಿದಂತೆ ಗಂಭೀರ ಅಪರಾಧಗಳಿಗೆ ಕಾನೂನು ನಿಗದಿಪಡಿಸಿರುವ ಕನಿಷ್ಠ ಶಿಕ್ಷೆಗಿಂತಲೂ ಕಡಿಮೆ ಶಿಕ್ಷೆಯನ್ನು ವಿಚಾರಣಾ ನ್ಯಾಯಾಲಯಗಳು ತಪ್ಪಾಗಿ ನೀಡಿರುವ ಪ್ರಕರಣಗಳ ಮೇಲೆ ಸುಪ್ರೀಂ ಕೋರ್ಟ್‌ನ ಈ ತೀರ್ಪು ವ್ಯಾಪಕ ಪರಿಣಾಮಗಳನ್ನು ಬೀರಬಹುದು ಎಂದು ವಿಶ್ಲೇಷಿಸಲಾಗಿದೆ.
'ಆರೋಪಿಯು ತನ್ನ ಅಪರಾಧ ನಿರ್ಣಯವನ್ನು ಪ್ರಶ್ನಿಸುವ ಹಕ್ಕನ್ನು ಹೊಂದಿದ್ದರೂ, ಶಾಸನಬದ್ಧ ಕನಿಷ್ಠ ಶಿಕ್ಷೆಗಿಂತಲೂ ಕಡಿಮೆ ಶಿಕ್ಷೆಯ ಮುಂದುವರಿಕೆಗೆ ಒತ್ತಾಯಿಸುವ ಯಾವುದೇ ಹಕ್ಕು ಹೊಂದಿರುವುದಿಲ್ಲ' ಎಂದು ಪೀಠ ಒತ್ತಿ ಹೇಳಿತು.
2021ರಲ್ಲಿ ಸಿಕ್ಕಿಂನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಈ ಮಹತ್ವದ ತೀರ್ಪು ನೀಡಿದೆ. ಐಪಿಸಿಯ ಸೆಕ್ಷನ್ 376 (ಡಿ) (ಸಾಮೂಹಿಕ ಅತ್ಯಾಚಾರ) ಅಡಿಯಲ್ಲಿ ಅಪರಾಧ ಸಾಬೀತಾದ ಕಾರಣ ಕರಣ್ ಚೆಟ್ರಿ ಮತ್ತು ಇತರರಿಗೆ ವಿಚಾರಣಾ ನ್ಯಾಯಾಲಯ ದಂಡ ಹಾಗೂ 12 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿತ್ತು.
ಈ ಶಿಕ್ಷೆಯನ್ನು ಎತ್ತಿಹಿಡಿಯುವ ಸಂದರ್ಭದಲ್ಲಿ ಸಿಕ್ಕಿಂ ಹೈಕೋರ್ಟ್, ವಿಚಾರಣಾ ನ್ಯಾಯಾಲಯವು ನೀಡಿರುವ ಶಿಕ್ಷೆಯು ಸೆಕ್ಷನ್ 376 (ಡಿ) ಅಡಿಯಲ್ಲಿ ಸೂಚಿಸಲಾದ ಶಾಸನಬದ್ಧ ಕನಿಷ್ಠ ಶಿಕ್ಷೆಗಿಂತಲೂ ಕಡಿಮೆ ಇದೆ ಎಂಬುದನ್ನು ಗಮನಿಸಿತ್ತು. ಮಾತ್ರವಲ್ಲ, ಜೈಲು ಶಿಕ್ಷೆಯನ್ನು 20 ವರ್ಷಗಳಿಗೆ ಹೆಚ್ಚಿಸಿತ್ತು.
ಇದನ್ನು ಪ್ರಶ್ನಿಸಿ ಅಪರಾಧಿಗಳು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಅರ್ಜಿ ವಜಾಗೊಳಿಸಿದ ಪೀಠ, 'ವಿಚಾರಣಾ ನ್ಯಾಯಾಲಯವು ವಿಧಿಸಿದ ಶಿಕ್ಷೆಯು ಶಾಸನಬದ್ಧ ಕನಿಷ್ಠ ಶಿಕ್ಷೆಗಿಂತಲೂ ಕಡಿಮೆಯಿರುವಾಗ, ಅದನ್ನು ಕಾನೂನಿಗೆ ಅನುಗುಣವಾಗಿ ತಿದ್ದುಪಡಿ ಮಾಡುವುದು ಸೆಕ್ಷನ್ 386 (ಬಿ) ಅಡಿಯಲ್ಲಿ ವಿಧಿಸಿರುವ ತಡೆಯನ್ನು ಉಲ್ಲಂಘಿಸಿದಂತೆ ಆಗುವುದಿಲ್ಲ' ಎಂದು ಹೇಳಿತು.

