ನವದೆಹಲಿ : ವೇದ ಕಾಲದಲ್ಲಿ ಮಹಿಳೆಯರಿಗೆ ಗೌರವ ನೀಡಲಾಗುತ್ತಿತ್ತು. ಕಾಲಕ್ರಮೇಣ ಮಹಿಳೆಯರ ಬಗೆಗಿನ ಗೌರವ ಕಡಿಮೆಯಾಯಿತು ಎಂದು ಹೇಳುವ ಮನುಸ್ಮೃತಿಯ ಶ್ಲೋಕವೊಂದನ್ನು ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಪರಿಷತ್ತಿನ(ಎನ್‌ಸಿಇಆರ್‌ಟಿ) ಸಮಾಜವಿಜ್ಞಾನ ಪಠ್ಯಪುಸ್ತಕದಲ್ಲಿ ಸೇರಿಸಲಾಗಿದೆ.
'ಕ್ರಿ.ಶ. 1000ದವರೆಗಿನ ರಾಜ್ಯ ಮತ್ತು ಸಮಾಜ' ಎಂಬ ಪಠ್ಯದಲ್ಲಿ ವೈದಿಕ ಯುಗವು ಮಹಿಳೆಯರಿಗೆ ಉನ್ನತ ಸ್ಥಾನಮಾನ ನೀಡಿದ ಯುಗವಾಗಿತ್ತು ಎಂದು ವಿವರಿಸಲಾಗಿದೆ.
'ಮಹಿಳೆಯರು ವೇದೋಪನಿಷತ್ತುಗಳನ್ನು ಅಧ್ಯಯನ ಮಾಡಿದ್ದರು. ಪುರುಷರೊಂದಿಗೆ ಹಲವು ಆಚರಣೆಗಳಲ್ಲಿ ಭಾಗಿಯಾಗುತ್ತಿದ್ದರು. ಋಗ್ವೇದದ ಕೆಲವು ಶ್ಲೋಕಗಳನ್ನು ಸಾಧ್ವಿನಿಯರಾದ ಅಪಲಾ, ವಿಶ್ವವರ, ಘೋಶ ಮತ್ತು ಲೋಪಮುದ್ರ ಅವರು ರಚಿಸಿದ್ದರು. ಎಲ್ಲಿ ಮಹಿಳೆಯರನ್ನು ಗೌರವಿಸಲಾಗುತ್ತದೋ ಅಲ್ಲಿ ದೇವತೆಗಳು ಸಂತೋಷಪಡುತ್ತಾರೆ. ಎಲ್ಲಿ ಮಹಿಳೆಯರನ್ನು ಗೌರವಿಸಲಾಗುವುದಿಲ್ಲವೋ ಅಲ್ಲಿ ಎಲ್ಲ ಕಾರ್ಯಗಳು ನಿಷ್ಪ್ರಯೋಜಕವಾಗುತ್ತವೆ' ಎಂದು ಪಠ್ಯದಲ್ಲಿ ವಿವರಿಸಲಾಗಿದೆ.
ವರ್ಣ ಮತ್ತು ಜಾತಿಯ ವಿಚಾರಗಳನ್ನೂ ಪಠ್ಯದಲ್ಲಿ ತಿಳಿಸಲಾಗಿದೆ. ವೇದ ಕಾಲದಲ್ಲಿ ಸಾಮಾಜಿಕ ಗುರುತನ್ನು ಹುಟ್ಟಿನಿಂದಲೇ ನಿರ್ಧರಿಸಲಾಗುತ್ತಿರಲಿಲ್ಲ ಬದಲಾಗಿದೆ ಜನಾಂಗೀಯತೆ, ಉಪಗುಂಪು, ಪ್ರದೇಶ, ಗ್ರಾಮ, ಭಾಷೆ, ಉದ್ಯೋಗ ಮತ್ತು ಸಾಂಸ್ಕೃತಿಕ ಸಂಬಂಧ ಸೇರಿದಂತೆ ಸಂಕೀರ್ಣ ಅಂಶಗಳ ಮೂಲಗ ಸಾಮಾಜಿಕ ಸ್ಥಾನಮಾನ ರೂಪುಗೊಳ್ಳುತ್ತಿತ್ತು ಎಂದು ವಿವರಿಸಲಾಗಿದೆ.
ಮನುಸ್ಮೃತಿಯು ಹಿಂದೂ ಪದ್ಧತಿಯಲ್ಲಿ ನೀತಿಯುತ ಜೀವನಕ್ರಮ, ಸಾಮಾಜಿಕ ವರ್ಗಗಳು ಮತ್ತು ಆಡಳಿತವನ್ನು ವಿವರಿಸುವ ಸಂಸ್ಕೃತ ಪಠ್ಯ. ಜಾತಿ ಮತ್ತು ಲಿಂಗದ ಕುರಿತಾಗಿ ಅದರಲ್ಲಿರುವ ನಿಬಂಧನೆಗಳ ಕುರಿತು ದೀರ್ಘಕಾಲದಿಂದ ಚರ್ಚೆ ನಡೆಯುತ್ತಿದೆ.
9ನೇ ತರಗತಿ ಪಠ್ಯದಲ್ಲಿ ನ್ಯಾಯಾಂಗದ ಶ್ಲಾಘನೆ
ಎನ್‌ಸಿಇಆರ್‌ಟಿ 8ನೇ ತರಗತಿಯ ಪಠ್ಯಪುಸ್ತಕದಲ್ಲಿನ ನ್ಯಾಯಾಲಯದಲ್ಲಿನ ಭಷ್ಟಾಚಾರ ಎಂಬ ಪಾಠವು ಆಕ್ಷೇಪಕ್ಕೀಡಾಗಿತ್ತು. ಆ ಪಠ್ಯಕ್ಕೆ ವ್ಯತಿರಿಕ್ತವಾಗಿ 9ನೇ ತರಗತಿಯ ಪಠ್ಯಪುಸ್ತಕದಲ್ಲಿ ನ್ಯಾಯಾಲಯವು ನಾಗರಿಕರ ರಕ್ಷಣೆಗಾಗಿ ಇರುವ ನಿಷ್ಪಕ್ಷಪಾತ ಮತ್ತು ಸ್ವತಂತ್ರವಾದ ಸಂಸ್ಥೆ ಎಂದು ವಿವರಿಸಲಾಗಿದೆ. 8ನೇ ತರಗತಿಯ ಪಠ್ಯದ ಕುರಿತ ವಿವಾದಗಳು ಉಂಟಾಗುವ ಮೊದಲೇ 9ನೇ ತರಗತಿಯ ಪಠ್ಯಪುಸ್ತಕ ಮುದ್ರಣವಾಗಿತ್ತು. 9ನೇ ತರಗತಿಯ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದಲ್ಲಿ ನ್ಯಾಯಾಲಯದಲ್ಲಿನ ಕಾರ್ಯಗಳನ್ನು ವಿವರಿಸಲಾಗಿದೆ. 'ಸಾಂವಿಧಾನಿಕ ಮೌಲ್ಯಗಳು ಮತ್ತು ಸಮಾಜದ ಎಲ್ಲ ವರ್ಗಗಳ ಜನರರ ಹಕ್ಕುಗಳ ರಕ್ಷಣೆಯಲ್ಲಿ ನ್ಯಾಯಾಂಗ ಪ್ರಮುಖ ಪಾತ್ರ ವಹಿಸುತ್ತದೆ' ಎಂದು ತಿಳಿಸಲಾಗಿದೆ. 8ನೇ ತರಗತಿಯ ಪಠ್ಯಪುಸ್ತಕದ ಕುರಿತ ವಿವಾದದಲ್ಲಿ ಮಧ್ಯಪ್ರವೇಶಿಸಿದ್ದ ಸುಪ್ರೀಂ ಕೋರ್ಟ್ ಪಠ್ಯಪುಸ್ತಕದ ಮುದ್ರಣ ಮತ್ತು ಹಂಚಿಕೆಯನ್ನು ನಿರ್ಬಂಧಿಸಿತ್ತು.

