ವಿಶ್ವಸಂಸ್ಥೆ: ಅಫ್ಗಾನಿಸ್ತಾನದ ಮೇಲೆ ಪಾಕಿಸ್ತಾನ ಸೇನೆಯು ನಡೆಸುತ್ತಿರುವ ವಾಯುದಾಳಿಯನ್ನು ವಿಶ್ವಸಂಸ್ಥೆ ಭದ್ರತಾ ಮಂಡಳಿ ಸಭೆಯಲ್ಲಿ ಭಾರತ ಸೋಮವಾರ ಕಟುವಾಗಿ ಟೀಕಿಸಿದೆ.
'ಅಫ್ಗಾನಿಸ್ತಾನದಲ್ಲಿ ನಡೆಸಿರುವ ನರಮೇಧವನ್ನು ಸೇನಾ ಕಾರ್ಯಾಚರಣೆ ಎಂದು ಬಿಂಬಿಸುವುದರಿಂದ ಪಾಕಿಸ್ತಾನವು ಅಪರಾಧವನ್ನು ತಪ್ಪಿಸಿಕೊಳ್ಳಲಾಗದು' ಎಂದು ಹೇಳಿದೆ.
'ಪಾಕ್ ದಾಳಿಯಿಂದ ಅಫ್ಗಾನಿಸ್ತಾನದಲ್ಲಿ ದೊಡ್ಡ ಸಂಖ್ಯೆಯಲ್ಲಿ ನಾಗರಿಕರು ಸಾಯುತ್ತಿದ್ದಾರೆ. ಇದು, ಆತ್ಮಸಾಕ್ಷಿಗೆ ವಿರುದ್ಧವಾದ ನಡೆ. ಇದು, ಅಫ್ಗಾನಿಸ್ತಾನದ ಸೌಹಾರ್ದ ಹಾಗೂ ಈ ಪ್ರಾಂತ್ಯದಲ್ಲಿ ಶಾಂತಿ ಮತ್ತು ಸ್ಥಿರತೆಗೆ ಒಡ್ಡಿದ ಬೆದರಿಕೆಯಾಗಿದೆ' ಎಂದು ಭಾರತವು ಪ್ರತಿಪಾದಿಸಿದೆ.
ವಿಶ್ವಸಂಸ್ಥೆಯು ಭದ್ರತಾ ಮಂಡಳಿ ಸಭೆಯಲ್ಲಿ ಸೋಮವಾರ 'ಅಫ್ಗಾನಿಸ್ತಾನದಲ್ಲಿನ ಪರಿಸ್ಥಿತಿ' ಕುರಿತು ಮಾತನಾಡಿದ, ವಿಶ್ವಸಂಸ್ಥೆಯಲ್ಲಿ ಭಾರತದ ಶಾಶ್ವತ ಪ್ರತಿನಿಧಿಯಾಗಿರುವ ಹರೀಶ್ ಪರ್ವತನೇನಿ ಅವರು ಈ ಮಾತು ಹೇಳಿದರು.
ಪಾಕಿಸ್ತಾನದ ಈ ನಡೆಯನ್ನು ಯಾವುದೇ ನಂಬಿಕೆ, ನೈತಿಕತೆ ಮತ್ತು ಕಾನೂನಿನ ಉಲ್ಲೇಖದಿಂದ ಸಮರ್ಥಿಸಿಕೊಳ್ಳಲಾಗದು ಎಂದು ಅವರು ಹೇಳಿದರು.

