ಸೋಫಿಯಾ: 'ವಿಶ್ವದ ವಿವಿಧೆಡೆ ನಡೆಯುತ್ತಿರುವ ಸಂಘರ್ಷವನ್ನು ಕೊನೆಗೊಳಿಸಲು ಮಾತುಕತೆ ಹಾಗೂ ರಾಜತಾಂತ್ರಿಕ ಮಾರ್ಗವೇ ಏಕೈಕ ಪರಿಹಾರವಾಗಿದೆ' ಎಂದು ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ತಿಳಿಸಿದ್ದಾರೆ.
ಬಲ್ಗೇರಿಯಾದ ವಿದೇಶಾಂಗ ಸಚಿವೆ ವೆಲಿಸ್ಲಾವಾ ಪೆಟ್ರೊವಾ ಅವರ ಜೊತೆ ಮಾತುಕತೆ ನಡೆಸಿದ ಬಳಿಕ ಈ ಹೇಳಿಕೆ ನೀಡಿದ್ದಾರೆ.
'ಇತ್ತೀಚಿಗಿನ ಹಲವು ಸಂಘರ್ಷದ ಬಳಿಕ ಇಡೀ ಜಗತ್ತು ಅನಿಶ್ಚಿತತೆ ಹಾಗೂ ಅಸ್ಥಿರ ಭವಿಷ್ಯದ ಮೂಲಕ ಹಾದುಹೋಗುತ್ತಿದೆ. ಆರ್ಥಿಕ ಭದ್ರತೆ, ಸಾಂಕ್ರಮಿಕ ರೋಗದ ಅನುಭವಗಳು ಹಾಗೂ ಭಯೋತ್ಪಾದನೆಯ ಪುನಾರವರ್ತಿತ ಬೆದರಿಕೆಯೂ ಸೇರಿದೆ. ಭಾರತವೂ ಈ ವಿಚಾರದಲ್ಲಿ ಸ್ಪಷ್ಟ ನಿಲುವು ಹೊಂದಿದೆ. ಇದು ಯುದ್ಧದ ಯುಗವಲ್ಲ. ಯಾವುದೇ ಸಂಘರ್ಷವನ್ನು ಮಾತುಕತೆ ಹಾಗೂ ರಾಜತಾಂತ್ರಿಕ ಮಾರ್ಗದ ಮೂಲಕ ಬಗೆಹರಿಸಬೇಕು' ಎಂದು ಅಭಿಪ್ರಾಯಪಟ್ಟಿದ್ದಾರೆ.
'ಜಾಗತಿಕ ದಕ್ಷಿಣದ ಧ್ವನಿಯಾಗಿ ಇಂಧನ, ಆಹಾರ ಹಾಗೂ ರಾಸಯನಿಕ ಗೊಬ್ಬರದ ಕುರಿತು ತೀವ್ರ ಕಳವಳ ಹೊಂದಿದ್ದೇವೆ' ಎಂದು ಜೈಶಂಕರ್ ಒತ್ತಿ ಹೇಳಿದ್ದಾರೆ.

