ಇಸ್ಲಾಮಾಬಾದ್: ಯುದ್ಧ ಅಂತ್ಯಗೊಳಿಸುವ ಕುರಿತಂತೆ ಅಮೆರಿಕ ಮತ್ತು ಇರಾನ್ ನಡುವಿನ ಸಂಧಾನ ಮಾತುಕತೆ ಮತ್ತೆ ಮುರಿದುಬಿದ್ದಿದೆ. ಮಾತುಕತೆಯನ್ನು ಪುನರಾರಂಭಿಸುವ ನಿಟ್ಟಿನಲ್ಲಿ ಪಾಕಿಸ್ತಾನ ಪ್ರಯತ್ನ ಮುಂದುವರಿಸಿದ್ದು, ಆಂತರಿಕ ಸಚಿವ ಮೊಹ್ಸಿನ್ ನಖ್ವಿ ಇರಾನ್‌ಗೆ ತೆರಳಿದ್ದಾರೆ.
ಇರಾನ್‌ನ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿಗೆ ಪ್ರಮುಖ ಸಂದೇಶ ಹೊತ್ತು ನಖ್ವಿ ಟೆಹರಾನ್‌ಗೆ ತೆರಳಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಶನಿವಾರ ರಾತ್ರಿಯೇ ಟೆಹರಾನ್ ತಲುಪಿರುವ ನಖ್ವಿಯನ್ನು ಇರಾನ್ ವಿದೇಶಾಂಗ ಸಚಿವ ಎಸ್ಕಂದರ್ ಮೊನೊನಿ ಬರಮಾಡಿಕೊಂಡಿದ್ದಾರೆ. ಶಾಂಘೈ ಸಹಕಾರ ಸಂಘಟನೆಯ ಶೃಂಗದಲ್ಲಿ ಕಳೆದ ವಾರವಷ್ಟೇ ಉಭಯ ನಾಯಕರು ಭೇಟಿಯಾಗಿದ್ದರು.
ನಖ್ವಿ ಅವರು ಖಮೇನಿ ಅವರಿಗೆ ಪಾಕಿಸ್ತಾನದ ರಕ್ಷಣಾ ಪಡೆಗಳ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ಅವರಿಂದ ಪ್ರಮುಖ ಸಂದೇಶವನ್ನು ಹೊತ್ತೊಯ್ದಿದ್ದಾರೆ ಎಂದು ಇರಾನ್‌ನ ಅಧಿಕೃತ ಸುದ್ದಿ ಸಂಸ್ಥೆ ಐಆರ್‌ಎನ್‌ಎ ವರದಿಯನ್ನು ಉಲ್ಲೇಖಿಸಿ ಡಾನ್ ಪತ್ರಿಕೆ ವರದಿ ಮಾಡಿದೆ.
ಪಾಕ್ ಮಧ್ಯಸ್ಥಿಕೆಯಲ್ಲಿ ಆಗಿರುವ ಕದನ ವಿರಾಮ ಒಪ್ಪಂದ ಮುರಿದುಬೀಳುವುದನ್ನು ತಡೆಯಲು ಮತ್ತು ಅಮೆರಿಕ ಹಾಗೂ ಇರಾನ್ ನಡುವಿನ ಅರ್ಥಪೂರ್ಣ ಮಾತುಕತೆಗಳ ಪುನರಾರಂಭಕ್ಕೆ ಅವಕಾಶ ಮಾಡಿಕೊಡುವ ಪಾಕಿಸ್ತಾನದ ಪ್ರಯತ್ನಗಳ ಭಾಗವಾಗಿ ನಖ್ವಿ ಟೆಹರಾನ್‌ಗೆ ತೆರಳಿದ್ದಾರೆ ಎಂದು ರಾಜತಾಂತ್ರಿಕ ಮೂಲಗಳು ತಿಳಿಸಿವೆ.
ಇರಾನ್, ಅಮೆರಿಕ ಮತ್ತು ಇಸ್ರೇಲ್ ನಡುವಿನ ಹಲವು ದಿನಗಳ ಯುದ್ಧದ ನಂತರ ಏಪ್ರಿಲ್‌ನಲ್ಲಿ ಉಭಯ ದೇಶಗಳು ಯುದ್ಧ ವಿರಾಮದ ಮೂಲಕ ಮಾತುಕತೆ ನಡೆಸಲು ಮುಂದಾಗಿದ್ದವು.
ಆದರೆ, ಅಮೆರಿಕವು ತಮ್ಮ ರಕ್ಷಣೆಯ ನೆಪದಲ್ಲಿ ದಾಳಿ ನಡೆಸುತ್ತಿದ್ದರೆ, ಅತ್ತ ಇರಾನ್ ಸಹ ಗಲ್ಫ್‌ನ ಕೆಲವೆಡೆ ಡ್ರೋನ್ ದಾಳಿ ಮುಂದುವರಿಸಿದೆ.
ಫೆಬ್ರುವರಿ 28ರಂದು ಅಮೆರಿಕ ಮತ್ತು ಇಸ್ರೇಲ್, ಇರಾನ್ ಮೇಲೆ ಜಂಟಿ ವೈಮಾನಿಕ ದಾಳಿ ನಡೆಸುವುದರೊಂದಿಗೆ ಆರಂಭವಾದ ಯುದ್ಧ ತೀವ್ರ ಸ್ವರೂಪ ಪಡೆದಿತ್ತು. ಪ್ರತಿಯಾಗಿ ಗಲ್ಫ್ ದೇಶಗಳ ಅಮೆರಿಕ ನೆಲೆ ಮೇಲೆ ಡ್ರೋನ್ ಮತ್ತು ಕ್ಷಿಪಣಿ ದಾಳಿ ನಡೆಸಿದ್ದ ಇರಾನ್, ಹೊರ್ಮುಜ್ ಜಲಸಂಧಿ ಮುಚ್ಚುವ ಮೂಲಕ ಜಾಗತಿಕ ತೈಲ ಬಿಕ್ಕಟ್ಟಿಗೆ ಎಡೆಮಾಡಿದೆ. ಇದರ ಪರಿಣಾಮ, ಭಾರತ ಸೇರಿ ಗಲ್ಫ್ ತೈಲ ಆಮದಿನ ಮೇಲೆ ಅವಲಂಬಿತವಾಗಿರುವ ದೇಶಗಳಲ್ಲಿ ಪೆಟ್ರೋಲ್, ಡೀಸೆಲ್, ಎಲ್‌ಪಿಜಿ ಮತ್ತು ನೈಸರ್ಗಿಕ ಅನಿಲದ ಬೆಲೆ ಏರಿಕೆಯಾಗಿದೆ.

