ಬೈರೂತ್: ಲೆಬನಾನ್ ಹಾಗೂ ಇಸ್ರೇಲ್ ನಡುವಿನ ಹೊಸ ಕದನ ವಿರಾಮ ಏರ್ಪಟ್ಟ ಎರಡು ದಿನಗಳ ನಂತರ ದಕ್ಷಿಣ ಲೆಬನಾನ್‌ನ ಮೇಲೆ ಇಸ್ರೇಲ್ ವಾಯುಸೇನೆ ಶನಿವಾರ ಬೆಳಿಗ್ಗೆ ದಾಳಿ ನಡೆಸಿದೆ. ಇದರಿಂದ ಲೆಬನಾನ್ ಸೇನೆಯ ಮೂವರು ಸೈನಿಕರು ಸೇರಿದಂತೆ 9 ಮಂದಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಬತಿಯೆ ನಗರವನ್ನು ಮರ್ಜಯೊನ್ ಪಟ್ಟಣದೊಂದಿಗೆ ಸಂಪರ್ಕಿಸುವ ರಸ್ತೆಯನ್ನು ಗುರಿಯಾಗಿಸಿ ದಾಳಿ ನಡೆಸಿದೆ.
ಬ್ರಿಗೇಡಿಯರ್ ಜನರಲ್ ಸೇರಿದಂತೆ ಮೂವರು ಸೈನಿಕರು ದಾಳಿಯಲ್ಲಿ ಮೃತಪಟ್ಟಿದ್ದಾರೆ ಎಂದು ಸ್ಥಳೀಯ ಟಿವಿ ವಾಹಿನಿಗಳು ವರದಿ ಮಾಡಿವೆ.
ಲೆಬನಾನ್ ಸರ್ಕಾರ ಹಾಗೂ ಇಸ್ರೇಲ್ ನಡುವೆ ಅಮೆರಿಕದ ಮಧ್ಯಸ್ಥಿಕೆ ಯಲ್ಲಿ ಇತ್ತೀಚಿಗೆ ನಡೆದ ಕದನ ವಿರಾಮದ ಬಳಿಕ ಈ ದಾಳಿ ನಡೆದಿದೆ. ಆದರೆ, ಒಪ್ಪಂದ ವನ್ನು ಮಾನ್ಯ ಮಾಡಲು ಬಂಡುಕೋರ ಸಂಘಟನೆ ಹಿಜ್ಬುಲ್ಲಾ ನಿರಾಕರಿಸಿದೆ.
ಮಾರ್ಚ್ 2ರಂದು ಹಿಜ್ಬುಲ್ಲಾ ಬಂಡು ಕೋರರು ಉತ್ತರ ಇಸ್ರೇಲ್‌ನ ಮೇಲೆ ರಾಕೆಟ್ ದಾಳಿ ನಡೆಸಿದ ಬಳಿಕ ಉಭಯ ರಾಷ್ಟ್ರಗಳ ನಡುವೆ ಯುದ್ಧ ಆರಂಭಗೊಂಡಿತ್ತು. ಇಸ್ರೇಲ್ ವಾಯು ಹಾಗೂ ಭೂ ದಾಳಿ ಆರಂಭಿಸಿದ ಬಳಿಕ ಲೆಬನಾನ್‌ನಲ್ಲಿ ಸುಮಾರು 10 ಲಕ್ಷಕ್ಕೂ ಅಧಿಕ ಮಂದಿ ನಿರ್ವಸಿತಗರಾಗಿದ್ದಾರೆ.

