ಲಂಡನ್: ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಅಂತ್ಯಕ್ರಿಯೆ ನಡೆಸುತ್ತಿದ್ದವರ ಮೇಲೆ ಗುಂಡಿನ ದಾಳಿ ನಡೆಸಿ, 11 ಜನರ ಹತ್ಯೆ ಮಾಡಿರುವುದನ್ನು ಖಂಡಿಸಿ ಕಾಶ್ಮೀರ ಪ್ರಜೆಗಳು ಬ್ರಿಟನ್‌ನಲ್ಲಿರುವ ಪಾಕಿಸ್ತಾನ ಕಾನ್ಸುಲೇಟ್ ಕಚೇರಿಯ ಮುಂದೆ ಮಂಗಳವಾರ ಪ್ರತಿಭಟನೆ ನಡೆಸಿದರು.
ಕಾನ್ಸುಲೆಟ್ ಕಚೇರಿ ಮುಂದೆ ಜಮಾಯಿಸಿದ್ದ ಪ್ರತಿಭಟನಕಾರರು, 'ಪಿಒಕೆಯಾದ್ಯಂತ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದವರ ಮೇಲೆ ಪಾಕಿಸ್ತಾನಿ ಅಧಿಕಾರಿಗಳು ಅತಿಯಾದ ಬಲಪ್ರಯೋಗ ಮಾಡುತ್ತಿದ್ದಾರೆ' ಎಂದು ಆರೋಪಿಸಿದರು.
'ಭದ್ರತಾ ಪಡೆಗಳ ಗುಂಡಿನ ದಾಳಿಯಿಂದ ಹಲವು ನಾಗರಿಕರು ಮೃತಪಟ್ಟಿದ್ದಾರೆ ಮತ್ತು ಗಾಯಗೊಂಡಿದ್ದಾರೆ' ಎಂದು ಆರೋಪಿಸಿದರು.
ಜಂಟಿ ಅವಾಮಿ ಕ್ರಿಯಾ ಸಮಿತಿ (ಜೆಎಎಸಿ) ನಡೆಸುತ್ತಿರುವ ಪ್ರತಿಭಟನೆಯನ್ನು ಹತ್ತಿಕ್ಕುವ ಸಲುವಾಗಿ ಸ್ಥಳೀಯ ಸರ್ಕಾರವು ನಡೆಸಿರುವ ಹಿಂಸಾಚಾರಗಳ ಬಗ್ಗೆ ವರದಿ ನೀಡಿರುವ ಪಾಕಿಸ್ತಾನದ ಮಾನವ ಹಕ್ಕುಗಳ ಆಯೋಗವು ಈ ಕುರಿತು ಕಳವಳ ವ್ಯಕ್ತಪಡಿಸಿದೆ.
ಈ ವಿಚಾರದಲ್ಲಿ ರಾಜತಾಂತ್ರಿಕ ಹಸ್ತಕ್ಷೇಪ ಮಾಡುವಂತೆ ಬ್ರಿಟನ್‌ನ 30 ಸಂಸದರು ಸರ್ಕಾರವನ್ನು ಒತ್ತಾಯಿಸಿದ್ದರು.
ಪಾಕಿಸ್ತಾನವನ್ನು ಹೊಣೆ ಮಾಡಿ: ಭಾರತ
ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಜನರ ಮೇಲೆ ನಡೆಯುತ್ತಿರುವ ಹಿಂಸಾಚಾರವನ್ನು ಖಂಡಿಸಿರುವ ಭಾರತ ಈ ಕೃತ್ಯಗಳಿಗೆ ಪಾಕಿಸ್ತಾನವನ್ನು ಹೊಣೆಗಾರರನ್ನಾಗಿಸಬೇಕಾಗಿ ಅಂತರರಾಷ್ಟ್ರೀಯ ಸಮುದಾಯಕ್ಕೆ ಮಂಗಳವಾರ ಕರೆ ನೀಡಿದೆ. ಪ್ರತಿಭಟನಾಕಾರರ ವಿರುದ್ಧದ ಪೊಲೀಸ್ ಕಾರ್ಯಾಚರಣೆಯಲ್ಲಿ 20ಕ್ಕೂ ಅಧಿಕ ಮಂದಿ ಮೃತಪಟ್ಟಿರುವ ವಿಚಾರದ ಕುರಿತು ಭಾರತ ಪ್ರತಿಕ್ರಿಯಿಸಿದೆ.
ಪಾಕಿಸ್ತಾನವನ್ನು ಟೀಕಿಸಿದ ಭಾರತದ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಅವರು 'ಪಾಕಿಸ್ತಾನದಿಂದ ನಕಲಿ ಸುದ್ದಿ ಮತ್ತು ವಿಡಿಯೊಗಳು ಬಿತ್ತರವಾಗುತ್ತಿರುವುದನ್ನು ನೋಡುತ್ತಿದ್ದೇವೆ. ಪಾಕಿಸ್ತಾನವು ತಮ್ಮ ವೈಫಲ್ಯವನ್ನು ಮರೆಮಾಚಲು ಮತ್ತು ಮಾನವ ಹಕ್ಕುಗಳ ಉಲ್ಲಂಘನೆ ವಿಚಾರದಿಂದ ಗಮನವನ್ನು ಬೇರೆಡೆ ಸೆಳೆಯಲು ಹತಾಶ ಪ್ರಯತ್ನಗಳನ್ನು ಮಾಡುತ್ತಿದೆ' ಎಂದು ಹೇಳಿದರು.

