ವಾಷಿಂಗ್ಟನ್: ಮದುವೆಯಾದ ಕೆಲವೇ ಗಂಟೆಗಳಲ್ಲಿ ನಡೆದ ಹೆಲಿಕಾಪ್ಟರ್ ಅಪಘಾತದಲ್ಲಿ ಭಾರತದ ಮೂಲದ ವರ ಮೃತಪಟ್ಟಿದ್ದು, ವಧು ಪ್ರಾಣಾಪಾಯದಿಂದ ಪಾರಾದ ಘಟನೆ ಅಮೆರಿಕದ ಜಾರ್ಜಿಯಾದಲ್ಲಿ ನಡೆದಿದೆ.
ಕೇರಳ ಮೂಲದ ಡೆಲ್ಟಾ ಏರ್ ಲೈನ್ಸ್ ಪೈಲಟ್, ಇಪ್ಪತ್ತಾರರ ಹರೆಯದ ದೇವ್ ಫಿಜಿ ಅವರು ತಮ್ಮ ಪತ್ನಿ ಜೆಸ್ನಿ ಅವರೊಂದಿಗೆ ಪ್ರಯಾಣಿಸುತ್ತಿದ್ದ ವೇಳೆ 'ರಾಬಿನ್ಸನ್ ಆರ್66' ಹೆಲಿಕಾಪ್ಟರ್ ಅವರ ವಿವಾಹ ನಡೆದ ಸ್ಥಳವಾದ ಡಾಸನ್‌ವಿಲ್ಲೆ ಬಳಿ ಪತನಗೊಂಡಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಹೆಲಿಕಾಪ್ಟರ್‌ನ ಪೈಲಟ್ ಕೂಡ ಈ ಅಪಘಾತದಲ್ಲಿ ಮೃತಪಟ್ಟಿದ್ದು, ಅವರ ಹೆಸರನ್ನು ಅಧಿಕಾರಿಗಳು ಇನ್ನು ಬಹಿರಂಗಪಡಿಸಿಲ್ಲ.
ವೃತ್ತಿಯಲ್ಲಿ ದಾದಿ ಆಗಿರುವ ದೇವ್ ಪತ್ನಿ ಜೆಸ್ನಿ ಅಪಘಾತದಲ್ಲಿ ಬದುಕುಳಿದಿದ್ದು, ಮೆಟ್ರೊ ಅಟ್ಲಾಂಟಾ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ.
ಶುಕ್ರವಾರ ದೇವ್ ಮತ್ತು ಜೆಸ್ನಿ ಅವರ ವಿವಾಹ ನಡೆದಿದ್ದು, ಸುಮಾರು 400ಕ್ಕೂ ಹೆಚ್ಚು ಅತಿಥಿಗಲು ಪಾಲ್ಗೊಂಡಿದ್ದರು.
ವಿವಾಹ ಕಾರ್ಯಕ್ರಮಗಳು ಮುಗಿದ ನಂತರ ನವದಂಪತಿ, ಜಾರ್ಜಿಯಾದ ಡಿಕಾಲ್ಬ್-ಪೀಚ್‌ಟ್ರೀ ವಿಮಾನ ನಿಲ್ದಾಣಕ್ಕೆ ಹೊರಟಿದ್ದ ರಾಬಿನ್ಸನ್ ಆರ್66 ಹೆಲಿಕಾಪ್ಟರ್ ಹತ್ತಿದ್ದರು. ಅಲ್ಲಿಂದ ಅವರು ಅಟ್ಲಾಂಟಾ ನಗರದ ಹೋಟೆಲ್‌ನಲ್ಲಿ ತಂಗಲು ಯೋಜಿಸಿದ್ದರು. ಆದರೆ, ಅಲ್ಲಿಗೆ ತಲುಪುವಷ್ಟರಲ್ಲಿ ಅವರಿದ್ದ ಹೆಲಿಕಾಪ್ಟರ್ ಪತನಗೊಂಡಿತ್ತು.

