ಬದಿಯಡ್ಕ: ಶ್ರೀ ರಾಮ ಭಕ್ತ ಮಂಡಳಿ ದೇಶಿಯ ಸಮಿತಿಯ ಆಶ್ರಯದಲ್ಲಿ ಅಯೋಧ್ಯೆ ಶ್ರೀರಾಮ ಜನ್ಮ ಭೂಮಿಯಿಂದ ಪ್ರಾರಂಭಿಸಿದ ಶ್ರೀರಾಮ ದೀಪ ಪ್ರಯಾಣ ಶ್ರೀಎಡನೀರು ಮಠಕ್ಕೆ ಆಗಮಿಸಿದಾಗ ಭವ್ಯ ಸ್ವಾಗತ ನೀಡಲಾಯಿತು. ಈ ಸಂದರ್ಭ ಎಡನೀರು ಶ್ರೀಮಠದಿಂದ ಅಯೋಧ್ಯ ಶ್ರೀರಾಮ ಕ್ಷೇತ್ರಕ್ಕೆ ಸಮರ್ಪಣೆಗೊಳ್ಳಲಿರುವ ಶ್ರೀ ಪಾದುಕೆಯನ್ನು ಪರಮಪೂಜ್ಯ ಎಡನೀರು ಶ್ರೀಗಳವರು ಸಮರ್ಪಿಸಿದರು.
ಎಡನೀರು ಮಠಾಧೀಶ ಶ್ರೀಸಚ್ಚಿದಾನಂದ ಭಾರತೀ ಶ್ರೀಗಳು ರಥಕ್ಕೆ ಶ್ರೀರಾಮ ಪಾದುಕ ಅರ್ಪಿಸಿದರು. ನಿಲಂಬೂರ್ ತೇಗದಿಂದ ಮಾಡಿದ ಪಾದುಕೆಗಳು ಶುದ್ಧ ತಾಮ್ರದಿಂದ ಮುಚ್ಚಲ್ಪಟ್ಟಿವೆ.
ಮಠದ ಶ್ರೀ ಶಂಕರಾಚಾರ್ಯ ಮಂಟಪದಲ್ಲಿ ಗುರುವಾರ ಬೆಳಗ್ಗೆ ನಡೆದ ಕಾರ್ಯಕ್ರಮದಲ್ಲಿ ಶ್ರೀರಾಮ ಪಾದುಕೆಗಳನ್ನು ಸ್ವಾಮೀಜಿ ಹಾಗೂ ಶ್ರೀರಾಮ ಭಕ್ತ ಮಂಡಳಿ, ರಾಷ್ಟ್ರೀಯ ಮಾರ್ಗದರ್ಶಕರೂ ತದ್ವನಾಶ್ರಮ ಅಧ್ಯಕ್ಷ ಜಯಕುಮಾರ್ ರಾಮಕೃಷ್ಣನ್, ರಾಷ್ಟ್ರೀಯ ಕಾರ್ಯದರ್ಶಿ ಮೋಕ್ಷದಂ ಶ್ರೀಮನ್ನುಣ್ಣಿ ಅವರು ಬರಮಾಡಿಕೊಂಡರು. ಆಶ್ರಮದ ವೇದ ವಿದ್ಯಾರ್ಥಿಗಳು ತೋಟಕಾಷ್ಟಕ ಹಾಡುವ ಮೂಲಕ ಪೂಜೆ ಸಲ್ಲಿಸಿದರು.
ಭರತನು ಅಯೋಧ್ಯೆಯಲ್ಲಿ ಶ್ರೀರಾಮಚಂದ್ರನ ಪಾದುಕೆಗಳನ್ನು ಪೂಜಿಸಿದ ಬಳಿಕ, ಪಾದುಕೆಗಳನ್ನು ನಂದಿಗ್ರಾಮದಲ್ಲಿ ಪೂಜಿಸುತ್ತಾ ರಾಜ್ಯವಾಳಿದನೆಂಬುದು ಇತಿಹಾಸ.
ಸದ್ಗುರು ಮಾತಾ ಅಮೃತಾನಂದಮಯಿ ದೇವಿ ಅವರು ನೀಡಿದ ರಥದಲ್ಲಿ ಪಾದುಕೆಗಳನ್ನು ಪ್ರತಿಷ್ಠಾಪಿಸಿ ರಥಯಾತ್ರೆ ನಡೆಯುತ್ತಿದೆ ಎಂದು ರಾಷ್ಟ್ರೀಯ ಕಾರ್ಯದರ್ಶಿ ತಿಳಿಸಿದರು.
ಸಮಾರಂಭದಲ್ಲಿ ಹಿಂದೂ ಐಕ್ಯವೇದಿ ಜಿಲ್ಲಾ ಕಾರ್ಯಾಧ್ಯಕ್ಷ ಗೋಪಾಲಕೃಷ್ಣ ತಚ್ಚಂಗಾಡ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸುಧಾಕರನ್, ಕರಿಂದಳ ಯಾದವ ಸಭಾ ಮಹಿಳಾ ಘಟಕದ ಕಾರ್ಯದರ್ಶಿ ಇಂದುಲೇಖಾ, ಹೆಗಡೆ ಸಮಾಜ ಉಪಾಧ್ಯಕ್ಷ ವಿಜಯನ್, ರಾಮ ಗುರುಸ್ವಾಮಿ, ದಿವ್ಯಾ ಗಟ್ಟಿ, ಪದ್ಮರಾಜ್, ಗಿರಿ ವೀರನಗರ, ವಸಂತಿ ಕುಂಬಳೆ, ಸುರೇಶ್ ಕಾಞಂಗಾಡ್ ಮೊದಲಾದವರು ಉಪಸ್ಥಿತರಿದ್ದರು.

.jpg)
.jpg)
