ಅಯೋಧ್ಯೆಯ ರಾಮಮಂದಿರ ದೇಣಿಗೆಗಳ ದುರುಪಯೋಗದ ಆರೋಪಗಳ ನಡುವೆಯೇ ಕಾಂಗ್ರೆಸ್ ಪಕ್ಷವು ಸರ್ವೋಚ್ಚ ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ತನಿಖೆಗೆ ಮತ್ತು 'ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್' ಅನ್ನು ವಿಸರ್ಜಿಸುವಂತೆ ಶುಕ್ರವಾರ ಒತ್ತಾಯಿಸಿದೆ.
ಬಿಜೆಪಿ-ಆರ್‌ಎಸ್‌ಎಸ್ ವಿರುದ್ಧ ವಾಗ್ದಾಳಿ ನಡೆಸಿದ ಕಾಂಗ್ರೆಸ್, ರಾಮಮಂದಿರದ ದೇಣಿಗೆಗಳ ಕಳ್ಳತನದ ಬಹಿರಂಗದಿಂದ ಹಿಂದೂ ಧರ್ಮದ ಸ್ವಯಂಘೋಷಿತ ರಕ್ಷಕರು ಸಂಪೂರ್ಣವಾಗಿ ಬೆತ್ತಲಾಗಿದ್ದಾರೆ ಎಂದು ಹೇಳಿದೆ.
ಅಯೋಧ್ಯೆಯನ್ನು ತಮ್ಮ ವಿಭಜಕ ರಾಜಕಾರಣಕ್ಕೆ ಬಳಸಿಕೊಂಡ ನಂತರ ಬಿಜೆಪಿ-ಆರ್‌ಎಸ್‌ಎಸ್ ಸಾಮಾನ್ಯ ಭಕ್ತರ ದೇಣಿಗೆಗಳನ್ನು 'ಲೂಟಿ' ಮಾಡಿವೆ ಮತ್ತು ಅವರ ಭಾವನೆಗಳನ್ನು ಸಂಪೂರ್ಣವಾಗಿ ಅಪಹಾಸ್ಯ ಮಾಡಿವೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರು ಎಕ್ಸ್ ಪೋಸ್ಟ್‌ನಲ್ಲಿ ಹೇಳಿದ್ದಾರೆ.
''ಒಂದೆಡೆ ಬಿಜೆಪಿಯು 'ಕರಾಳ' ವಿದೇಶಿ ದೇಣಿಗೆಗಳ (ನಿಯಂತ್ರಣ) ಕಾಯ್ದೆ (ಎಫ್‌ಸಿಆರ್‌ಎ) ನಿಯಮಗಳ ಮೂಲಕ ನೋಂದಾಯಿತ ಟ್ರಸ್ಟ್‌ಗಳನ್ನು ನಿಯಂತ್ರಿಸಲು ಬಯಸುತ್ತಿದೆ. ಇನ್ನೊಂದೆಡೆ ಆರೆಸ್ಸೆಸ್‌ನಂತಹ ನೋಂದಣಿರಹಿತ ಸಂಸ್ಥೆಗಳು ನಮ್ಮ ದೇಶದ ದೇವಸ್ಥಾನಗಳನ್ನು ಲೂಟಿ ಮಾಡಲು ಮುಕ್ತವಾಗಿವೆ'' ಎಂದು ಅವರು ಟೀಕಿಸಿದ್ದಾರೆ.
ಪ್ರಸ್ತುತ ದಾಖಲಾಗಿರುವ ಎಫ್‌ಐಆರ್‌ನಲ್ಲಿ ದೇವಸ್ಥಾನದ ನಿಧಿಯ ಜವಾಬ್ದಾರಿಯನ್ನು ವಹಿಸಲಾಗಿದ್ದ ಟ್ರಸ್ಟಿಗಳ ಹೆಸರೇ ಇಲ್ಲ ಎನ್ನುವುದು ನಿಜವಾದ ಹಿಂದುಗಳು ಎಂದು ಹೇಳಿಕೊಳ್ಳುವ ಸಂಘ ಪರಿವಾರದ ಬಣ್ಣವನ್ನು ಬಯಲಿಗೆಳೆದಿದೆ. ಬದಲಿಗೆ ಉತ್ತರ ಪ್ರದೇಶ ಪೊಲೀಸರ ವಿಶೇಷ ತನಿಖಾ ತಂಡವು ಈ ಬೃಹತ್ ವಂಚನಾ ಜಾಲದಲ್ಲಿ ಉನ್ನತ ಅಧಿಕಾರಿಗಳನ್ನು ಪಾರು ಮಾಡಿ ಕೇವಲ ಕೆಳಹಂತದ ಪದಾಧಿಕಾರಿಗಳನ್ನು ಮಾತ್ರ ಗುರುತಿಸಿದೆ ಎಂದು ಆರೋಪಿಸಿರುವ ವೇಣುಗೋಪಾಲ್, ಸರ್ವೋಚ್ಚ ನ್ಯಾಯಾಲಯದ ಹಾಲಿ ನ್ಯಾಯಾಧೀಶರ ನೇತೃತ್ವದ ಸ್ವತಂತ್ರ ತನಿಖೆ ಮಾತ್ರ ಈ ಬೃಹತ್ ವಂಚನೆಯ ಪ್ರಮಾಣವನ್ನು ಬಯಲಿಗೆಳೆಯಲು ಸಾಧ್ಯ ಎಂದು ಹೇಳಿದ್ದಾರೆ.

